ಸೋಮವಾರ, ಡಿಸೆಂಬರ್ 16, 2019
18 °C

ನೀರಿಗೆ ತತ್ವಾರ: ದಿಕ್ಕೆಟ್ಟ ಗ್ರಾಮಸ್ಥರು

ಎನ್. ರವಿ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಒಂದೆಡೆ ಕೊಳವೆಬಾವಿಯಲ್ಲಿ ಅಂತರ್ಜಲಮಟ್ಟ ಕುಸಿದಿದೆ. ಇನ್ನೊಂದೆಡೆ ಕೆರೆ-ಕಟ್ಟೆಗಳು ಬತ್ತಿಹೋಗಿದ್ದು, ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿದೆ. ತಾಲ್ಲೂಕಿನ ಅಮಚವಾಡಿ ಗ್ರಾಮದ ಹೊಸ ಬಡಾವಣೆಗೆ ಭೇಟಿ ನೀಡಿದರೆ ಈ ಸಮಸ್ಯೆಗಳು ಕಂಡುಬರುತ್ತವೆ.ಕಳೆದ 20ದಿನದಿಂದ ಈ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಅಮಚವಾಡಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಈ ಬಡಾವಣೆಯಲ್ಲಿ ಉಪ್ಪಾರ ಸಮುದಾಯದವರು ಹೆಚ್ಚಿದ್ದಾರೆ.ಹೊಸ ಬಡಾವಣೆಯ ಬೀದಿಯಲ್ಲಿ ಒಂದು ಒವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. 3 ಕಿ.ಮೀ. ದೂರದಿಂದ ಈ ಟ್ಯಾಂಕ್‌ಗೆ ನೀರು ಪೂರೈಕೆ ಮಾಡಲು ಕೊಳವೆಬಾವಿಗೆ ಮೋಟಾರ್ ಅಳವಡಿಸಲಾಗಿದೆ. ಆದರೆ, ವಿದ್ಯುತ್ ಸಮಸ್ಯೆಯಿಂದಾಗಿ ಟ್ಯಾಂಕ್ ಸಂಪೂರ್ಣವಾಗಿ ಭರ್ತಿಯಾಗುವುದಿಲ್ಲ.ಜತೆಗೆ, ಬಡಾವಣೆಯಲ್ಲಿ 6 ಕೈಪಂಪ್‌ಗಳಿವೆ. ಅಂತರ್ಜಲಮಟ್ಟ ಕುಸಿದಿರುವ ಪರಿಣಾಮ ನಾಲ್ಕು ಕೈಪಂಪ್‌ಗಳಲ್ಲಿ ನೀರು ಬರುತ್ತಿಲ್ಲ. ಉಳಿದ ಕೈಪಂಪ್‌ಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.ಎಣ್ಣೆಹೊಳೆ ಕೆರೆಯಿಂದ ಅಮಚವಾಡಿ ಗ್ರಾಮದ ಟ್ಯಾಂಕ್‌ಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ, ಈ ಟ್ಯಾಂಕ್‌ನಿಂದ ಹೊಸ ಬಡಾವಣೆಗೆ ನೀರು ಪೂರೈಸುತ್ತಿಲ್ಲ. ಇದರಿಂದ ಬಡಾವಡೆಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.ಮಹಿಳೆಯರು, ಚಿಣ್ಣರು ನಿತ್ಯವೂ ಬಿಂದಿಗೆ ಹಿಡಿದು ಕುಡಿಯುವ ನೀರಿಗಾಗಿ ಕೃಷಿ ಪಂಪ್‌ಸೆಟ್‌ಗಳತ್ತ ಹೋಗುತ್ತಿದ್ದಾರೆ. ಪುರುಷರು ದ್ವಿಚಕ್ರವಾಹನಗಳಲ್ಲಿ ನೀರು ಸಂಗ್ರಹಿಸುವಂತಾಗಿದೆ. ಆದರೆ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕೃಷಿ ಪಂಪ್‌ಸೆಟ್ ಬಳಿಯೂ ನೀರು ಸಂಗ್ರಹಿಸಲು ತೊಂದರೆಯಾಗುತ್ತಿದೆ.ಬಡಾವಣೆಯ ಕೂಗಳತೆ ದೂರದಲ್ಲಿರುವ ಜಮೀನಿನ ಮಾಲೀಕರೊಬ್ಬರು ಒಂದು ಲಕ್ಷ ಹಣ ಖರ್ಚು ಮಾಡಿ ಕೊಳವೆಬಾವಿ ಕೊರೆಯಿಸಿದರು. ಉತ್ತಮವಾಗಿ ನೀರು ಕೂಡ ಲಭಿಸಿತು. ಆದರೆ, ಬಡಾವಣೆಯ ನಿವಾಸಿಗಳು ನೀರಿಗೆ ಪಡುತ್ತಿರುವ ಸಂಕಷ್ಟ ನೋಡಿದ ಅವರು ನೀರಿಗಾಗಿ ಕೊಳವೆಬಾವಿಯನ್ನು ಬಿಟ್ಟುಕೊಟ್ಟಿದ್ದಾರೆ.`ಬೇಸಿಗೆ ಪರಿಣಾಮ ಬಡಾವಣೆಯಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಆದರೆ, ಸಮಸ್ಯೆ ಬಗೆಹರಿಸಲು ಸ್ಥಳೀಯ ಆಡಳಿತ ಮುಂದಾಗಿಲ್ಲ. ಕೂಡಲೇ ಹೆಚ್ಚುವರಿಯಾಗಿ ಕೊಳವೆಬಾವಿ ಕೊರೆಯಿಸಲು ಜಿಲ್ಲಾ ಪಂಚಾಯಿತಿ ಆಡಳಿತ ಕ್ರಮಕೈಗೊಳ್ಳಬೇಕು' ಎಂಬುದು ಗ್ರಾಮಸ್ಥ ಶಿವಪ್ಪಶೆಟ್ಟಿ ಅವರ ಒತ್ತಾಯ. `ಬಡಾವಣೆಯಲ್ಲಿ ಕಳೆದ 20 ದಿನದಿಂದ ಕುಡಿಯುವ ನೀರಿಗೆ ತತ್ವಾರ ಉಂಟಾಗಿರುವುದು ಗಮನಕ್ಕೆ ಬಂದಿದೆ. ಸುಮಾರು 700 ಅಡಿವರೆಗೂ ಕೊಳವೆಬಾವಿ ಕೊರೆಸಿದರೂ ಸಮರ್ಪಕವಾಗಿ ನೀರು ಲಭಿಸುವುದಿಲ್ಲ. ಎಣ್ಣೆಹೊಳೆ ಕೆರೆಯಿಂದ ಹೊಸ ಬಡಾವಣೆಗೆ ನೀರು ಪೂರೈಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ನೀರಿನ ಸಮಸ್ಯೆ ಬಗೆಹರಿಸಲು ಒತ್ತು ನೀಡಲಾಗುವುದು' ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾದೇವಮ್ಮ `ಪ್ರಜಾವಾಣಿ'ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)