ಮಂಗಳವಾರ, ನವೆಂಬರ್ 19, 2019
27 °C

ನೀರಿಗೆ ಬಿದ್ದ ವಿಷ; ನದಿ ಮೇಲೆ ಸಮಾಧಿ

Published:
Updated:

ಬೆಂಗಳೂರು: ಅರ್ಕಾವತಿ ನದಿ ಪಾತ್ರದಲ್ಲಿ 1,775 ಕೆರೆಗಳು ಇದ್ದವೆಂದರೆ ಈಗ ಯಾರೂ ನಂಬುವುದಿಲ್ಲ. ಕೆಲವೇ ವರ್ಷಗಳ ಅವಧಿಯಲ್ಲಿ ಸಾವಿರಾರರ ಬದಲಿಗೆ ಅವುಗಳ ಸಂಖ್ಯೆ ನೂರಾರಕ್ಕೆ ಕುಸಿದುಬಿಟ್ಟಿದೆ. ಭರ್ತಿ ಮಳೆಗಾಲದಲ್ಲೂ ಈ ಕೆರೆಗಳು ಈಗ ತುಂಬುತ್ತಿಲ್ಲ. ನೀರು ಹರಿಸುತ್ತಿದ್ದ ಮುಖ್ಯ ಕಾಲುವೆಗಳೆಲ್ಲ ಕಾಣೆಯಾಗಿವೆ. ನದಿ ದಂಡೆಯುದ್ದಕ್ಕೂ ಹರಡಿಕೊಂಡಿರುವ ಕೈಗಾರಿಕೆಗಳು ನೀರಿಗೆ ವಿಷ ಉಣಿಸುತ್ತಿದ್ದರೆ, ಮರಳು ಗಣಿಗಾರಿಕೆ 190 ಕಿ.ಮೀ. ಉದ್ದದ ನದಿಯನ್ನೇ ಸಮಾಧಿ ಮಾಡಿಬಿಟ್ಟಿದೆ.`ಗಿಡ-ಕಂಟಿಗಳು ಮತ್ತು ಹೂಳಿನಿಂದ ತುಂಬಿರುವ ಕೆರೆಗಳನ್ನು ಗುರುತಿಸುವುದೇ ಕಷ್ಟವಾಗಿದೆ. ಅದರಲ್ಲೂ ಜನವಸತಿ ಪ್ರದೇಶದ ಕೆರೆಗಳು ಕಸದ ತೊಟ್ಟಿಗಳಾಗಿವೆ' ಎಂದು ನದಿ ಪುನಶ್ಚೇತನಕ್ಕೆ ಹೋರಾಡುತ್ತಿರುವ ತಂಡದ ಸದಸ್ಯ ದೊಡ್ಡಿ ಶಿವರಾಂ ವಿಷಾದದಿಂದ ಹೇಳುತ್ತಾರೆ. `ಕಳೆದ 20 ವರ್ಷಗಳ ಅವಧಿಯಲ್ಲಿ ಅರ್ಕಾವತಿ ನದಿ ಪಾತ್ರದ ಒಂದು ಕೆರೆಯೂ ಪೂರ್ಣವಾಗಿ ತುಂಬಿಲ್ಲ. ನೀರಿನ ಬದಲಾಗಿ ಇಲ್ಲಿನ ಕೆರೆಗಳಿಗೆ ರಾಸಾಯನಿಕವೇ ಹರಿಯುತ್ತಿದೆ' ಎಂದು ಹೇಳುವಾಗ ಅವರ ಕಣ್ಣುಗಳು ಹನಿಗೂಡುತ್ತವೆ.`ದೊಡ್ಡಬಳ್ಳಾಪುರ ಹೊರವಲಯದಲ್ಲಿ 200ಕ್ಕೂ ಅಧಿಕ ಕೈಗಾರಿಕೆಗಳು ಠಿಕಾಣಿ ಹೂಡಿವೆ. ಅವುಗಳು ವಿಷಯುಕ್ತ ನೀರನ್ನು ನದಿ ಪಾತ್ರದಲ್ಲಿಯೇ ಹರಿಯಲು ಬಿಡುತ್ತವೆ. ಕೈಗಾರಿಕೆಗಳ ಈ ಅಟ್ಟಹಾಸದಿಂದ ಅಂತರ್ಜಲವೂ ಕಲುಷಿತಗೊಂಡಿದೆ. ಬಾವಿಗಳಲ್ಲಿ ಸಿಗುವ ನೀರನ್ನು ಜನ ಕುಡಿಯುವಂತಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜನರ ಸಮಸ್ಯೆಯನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.ಹೆಚ್ಚೇನು ಹಿಂದಕ್ಕೆ ಹೋಗಬೇಕಿಲ್ಲ. ಕೇವಲ 20 ವರ್ಷಗಳ ಹಿಂದೆ ಅರ್ಕಾವತಿ ನದಿ ದಂಡೆ ಮೇಲಿನ ಪ್ರತಿ ಗ್ರಾಮವೂ ಸ್ವಂತದ್ದೊಂದು ಕೆರೆ ಹೊಂದಿ, ಜಲಸಮೃದ್ಧಿಯಿಂದ ನಳನಳಿಸುತ್ತಿತ್ತು. ನೀರಾವರಿಗೂ ಕೆರೆ ನೀರೇ ಬಳಕೆ ಆಗುತ್ತಿತ್ತು. ಉತ್ತಮ ಫಸಲಿನೊಂದಿಗೆ ಜನಜೀವನ ನೆಮ್ಮದಿಯಿಂದ ಇತ್ತು.

ನೀರಿಗೆ ವಿಷ ಬೆರೆತ ಮೇಲೆ ಇಲ್ಲಿನ ವ್ಯವಸಾಯದ ದಿಕ್ಕೇ ಬದಲಾಯಿತು. ಅದು ಜನಜೀವನದ ಮೇಲೂ ನೇರ ಪರಿಣಾಮ ಬೀರಿತು. ತರಕಾರಿಗಳ ಮೂಲಕ ಊಟದ ತಟ್ಟೆಯಲ್ಲೂ ವಿಷದ ಆಗಮನ ಆಯಿತು. ರೋಗಗಳು ಉಲ್ಬಣಗೊಂಡವು. ಚರ್ಮದ ತುರಿಕೆ ಸಮಸ್ಯೆ ಬೆನ್ನಿಗೆ ಅಂಟಿಕೊಂಡಿತು. ಈ ರೋಗಗಳ ಸರಣಿಗೆ ಇನ್ನು ಕೊನೆ ಎಂಬುದೇ ಇಲ್ಲ ಎನ್ನುತ್ತಾರೆ ಭೂವಿಜ್ಞಾನಿ ಡಾ. ಎಲೆ ಲಿಂಗರಾಜು.ಕತ್ತು ಹಿಸುಕಿದ ಗಣಿಗಾರಿಕೆ: ಅರ್ಕಾವತಿ ನದಿಯ ಕತ್ತು ಹಿಸುಕಿದ್ದು ಅದರ ಪಾತ್ರದುದ್ದಕ್ಕೂ ನಡೆದಿರುವ ಕಲ್ಲು ಮತ್ತು ಮರಳು ಗಣಿಗಾರಿಕೆ. ಈ ಪ್ರದೇಶದಲ್ಲಿ ಗಣಿಗಾರಿಕೆಗೆ ನಿರ್ಬಂಧ ವಿಧಿಸಿದ ಸರ್ಕಾರಿ ಆದೇಶ ಕಾಗದದಲ್ಲಿ ಮಾತ್ರ ಇದೆ. ನೆಲಮಂಗಲದ ಬಳಿ ಈಗಲೂ 20ಕ್ಕೂ ಅಧಿಕ ಗಣಿಗಾರಿಕೆಗಳು ಸಕ್ರಿಯವಾಗಿವೆ. ಇಂತಹ ಚಟುವಟಿಕೆಗಳಿಂದ ನದಿಯ ನರ-ನಾಡಿಗಳೆಲ್ಲ ಮುಚ್ಚಿಹೋಗಿವೆ.ಹೆಸರುಘಟ್ಟದವರೆಗೆ ಅಂತರ್ಗಾಮಿನಿಯಾಗಿ ಹರಿಯುತ್ತಿದ್ದಳು ಅರ್ಕಾವತಿ. ಅವಳ ಸುಳಿವೇ ಈಗಿಲ್ಲ. ಹೆಸರುಘಟ್ಟದಿಂದ ಮುಂದೆ ಹರಿಯುವ ನದಿ ಮಹಾಚರಂಡಿಯಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಗಳ ಜನಕ್ಕೆ ಕುಡಿಯಲೂ ನೀರಿಲ್ಲ; ಕೃಷಿಗೂ ನೀರಿಲ್ಲ.ನದಿ ಪಾತ್ರದ ಉದ್ದಕ್ಕೂ ಸಿಗುವ 200 ಗ್ರಾಮ ಪಂಚಾಯ್ತಿಗಳು ಜನರಿಗೆ ನೀರು ಪೂರೈಸಲು ಸಾವಿರಾರು ಅಡಿ ಆಳದಿಂದ ನೀರೆತ್ತಲು ವಿದ್ಯುತ್ ಬಿಲ್ ತೆತ್ತು, ತೆತ್ತು `ಪಾಪರ್' ಆಗಿವೆ. ಅಭಿವೃದ್ಧಿ ಕಾರ್ಯಗಳಿಗೆ ಬಂದ ಹಣವೂ ವಿದ್ಯುತ್ ಬಾಕಿ ತುಂಬಲು ಪೂರೈಕೆ ಆಗುತ್ತಿದೆ. ನೀರಿನ ಟ್ಯಾಂಕರ್‌ಗಳು ಹಳ್ಳಿ-ಹಳ್ಳಿಗಳಲ್ಲಿ ಓಡಾಡುತ್ತಿವೆ. ಆಧುನಿಕ ಭಗೀರಥರು 1,800 ಅಡಿಗೂ ಅಧಿಕ ಆಳದವರೆಗೆ ಬಗೆದು ಫ್ಲೋರೈಡ್‌ಯುಕ್ತ ನೀರನ್ನೇ ಮೇಲೆತ್ತುತ್ತಿದ್ದಾರೆ.ಪೀಣ್ಯ ಕೈಗಾರಿಕೆ ಸಹ ಅರ್ಕಾವತಿ ಕಣ್ಮುಚ್ಚಲು ತನ್ನ ಕೊಡುಗೆ ನೀಡಿದೆ. ಕಾರ್ಖಾನೆಗಳಲ್ಲಿ ಬಳಸಿದ ನೀರನ್ನು ಶುದ್ಧೀಕರಣ ಮಾಡದೆ ನೇರವಾಗಿ ಕಾಲುವೆಗಳಿಗೆ ಹರಿಸಲಾಗುತ್ತದೆ. ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಶೇಖರಣೆ ಆಗುವ ನೀರು ಅಂತಹ ರಾಸಾಯನಿಕಗಳಿಂದ ತುಂಬಿಹೋಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಶಿವರಾಂ ದೂರುತ್ತಾರೆ.ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಕಿತ್ನಹಳ್ಳಿ ಸೇತುವೆ ಸಮೀಪ ಸೇರುವ ನೀರಿನ ಮಾದರಿಯನ್ನು ನಗರದ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಪರೀಕ್ಷೆಗೆ ಒಳಡಿಸಲಾಗಿದೆ. ಸಂಸ್ಥೆ ನೀಡಿದ ವರದಿ ಪ್ರಕಾರ ಒಂದು ಲೀಟರ್ ನೀರಿನಲ್ಲಿ 2,390 ಮಿ.ಗ್ರಾಂ ಘನತ್ಯಾಜ್ಯ ಪದಾರ್ಥಗಳಿವೆ. ನಿಯಮಾವಳಿ ಪ್ರಕಾರ ಪ್ರತಿ ಲೀಟರ್‌ಗೆ 500 ಮಿ.ಗ್ರಾಂಗಿಂತ ಅಧಿಕ ಘನ ಪದಾರ್ಥ ಇರುವಂತಿಲ್ಲ. 528 ಮಿ.ಗ್ರಾಂ (300 ಮಿ.ಗ್ರಾಂ ನಿಗದಿತ ಮಟ್ಟ) ಗಡಸುತನವಿದೆ. ಅತಿಯಾದ ಕ್ಲೋರೈಡ್, ಕಬ್ಬಿಣ ಜತೆಗೆ ಹೆಚ್ಚಿನ ಪ್ರಮಾಣದ ರಾಸಾಯನಿಕಗಳು ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ.`ಸಂಗ್ರಹಿಸಿದ ನೀರಿನ ಮಾದರಿ ಕಂದು ಬಣ್ಣದಿಂದ ಕೂಡಿದ್ದು, ನೀರು ಕುಡಿಯಲು ಯೋಗ್ಯವಲ್ಲ' ಎಂದು ಪ್ರಯೋಗಾಲಯದ ವರದಿ ಹೇಳುತ್ತದೆ. ಬ್ಯಾಕ್ಟೀರಿಯಾ ವಿಶ್ಲೇಷಣೆಗೆ ಒಳಪಡಿಸಿದ ತಜ್ಞರು ಈ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(ನಾಳಿನ ಸಂಚಿಕೆ: ಮರೆಯಾದ ಸೌಜನ್ಯ; ಮೆರೆಯುವ ಮಾಲಿನ್ಯ)

ಪ್ರತಿಕ್ರಿಯಿಸಿ (+)