ನೀರಿದೆ ಆದರೂ ತಪ್ಪದ ಹಾಹಾಕಾರ..!

7

ನೀರಿದೆ ಆದರೂ ತಪ್ಪದ ಹಾಹಾಕಾರ..!

Published:
Updated:
ನೀರಿದೆ ಆದರೂ ತಪ್ಪದ ಹಾಹಾಕಾರ..!

ಗಜೇಂದ್ರಗಡ: ಈ ಗ್ರಾಮದಲ್ಲಿ ಯಥೇಚ್ಛ ನೀರಿದೆ. ಹೀಗಿದ್ದರೂ ನೀರಿಗಾಗಿ ಪರಿತಪ್ಪಿಸಬೇಕಾದ ಅನಿವಾರ್ಯ ಗ್ರಾಮಸ್ಥರದ್ದು.

ಹೌದು, ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಿಗೇರಿ ಗ್ರಾಮಸ್ಥರಿಗೆ ಅಗತ್ಯವಿರುವ ನೀರು ಲಭ್ಯವಿದ್ದರೂ ಅವೈಜ್ಞಾನಿಕ ನೀರು ಸರಬರಾಜು ಪ್ರಕ್ರಿಯೆಯಿಂದಾಗಿ ಜನತೆ ನೀರು ಸಂಗ್ರಹಿಸಲು ಸರದಿ ಸಾಲಿನಲ್ಲಿ  ನಿಲ್ಲಬೇಕಾದ ಅನಿವಾರ್ಯತೆ ಗ್ರಾಮಸ್ಥರಿಗೆ ಎದುರಾಗಿದೆ.ರೋಣ ತಾಲ್ಲೂಕಿನ ಗಡಿ ಗ್ರಾಮ ಹಾಗೂ ಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತಗೊಂಡ ಪುಟ್ಟ ಕುಗ್ರಾಮ ಎಂದೇ ಬಣ್ಣಿಸುವ ಜಿಗೇರಿ ಗ್ರಾಮಸ್ಥರು ತಲೆಮಾರುಗಳಿಂದಲೂ ಸಮರ್ಪಕ ನೀರು ಪೂರೈಕೆಗಾಗಿ ಪರಿತಪ್ಪಿಸುತ್ತಿದ್ದಾರೆ. ಆದರೆ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಅಸಡ್ಡೆಯಿಂದಾಗಿ ಗ್ರಾಮಸ್ಥರು ಹನಿ ನೀರಿಗೂ ಪರಿತಪ್ಪಿಸುವಂತಹ ದುಸ್ಥಿತಿ ನಿರ್ಮಾಣ ವಾಗಿರುವುದು ವಿಪರ್ಯಾಸವೇ ಸರಿ.ಕಳೆದ ಎರಡು ವರ್ಷಗಳಿಂದ ತಲೆದೋರಿರುವ ನಿರಂತರ ಭೀಕರ ಬರಕ್ಕೆ ಈ ಭಾಗದ ಬಹುತೇಕ ಗ್ರಾಮಗಳ ನಾಗರಿಕರ ಜಲ ದಾಹ ನೀಗಿಸುತ್ತಿದ್ದ ಕೊಳವೆ ಬಾವಿಗಳು ಅಸ್ತಿತ್ವ ಕಳೆದುಕೊಂಡು ಬರಡಾಗಿ ನಿಂತಿವೆ. ಇದರ ಮುಂದುವರೆದ ಭಾಗವಾಗಿ ಇಂದು ಬಹುತೇಕ ಗ್ರಾಮಗಳಲ್ಲಿ ಜಲಕ್ಷಾಮದ ಭೀತಿ ಎದುರಾಗಿದೆ. ಪರಿಣಾಮ ಹನಿ ನೀರಿಗೂ ಹಾಹಾಕಾರ ಉಂಟಾಗಿದೆ. ಆದರೆ, ಜಿಗೇರಿ ಗ್ರಾಮದಲ್ಲಿ ಸಾಕಷ್ಟು ಪ್ರಮಾಣದ ನೀರಿದೆ. ಆದರೆ, ಅವೈಜ್ಞಾನಿಕ ನೀರು ಸರಬರಾಜು ಪ್ರಕ್ರಿಯೆಯಿಂದಾಗಿ ಗ್ರಾಮಸ್ಥರಿಗೆ ಅಗತ್ಯವಿರುವ ನೀರು ದೊರೆಯದಿರುವುದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ಕುಂಟೋಜಿ ಗ್ರಾಮ ಪಂಚಾಯಿತಿ ಒಳಪಡುವ ಜಿಗೇರಿ ಗ್ರಾಮದಲ್ಲಿ ಬಹುತೇಕ ಕೃಷಿ ಪ್ರಧಾನ ಕುಟುಂಬಗಳೇ ನೆಲೆಸಿವೆ. 206 ಕುಂಬಗಳು ಹಾಗೂ 1,190 ಜನಸಂಖ್ಯೆ ಇದೆ. ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ನಿತ್ಯ 47,600 ಲೀಟರ್ ನೀರು ಪೂರೈಕೆಯಾಗಬೇಕು. ಆದರೆ, ಇಡೀ ಗ್ರಾಮಕ್ಕೆ ಕೇವಲ ಒಂದು ಸಾರ್ವಜನಿಕ ಮಧ್ಯಮ ಗಾತ್ರದ ನೀರು ಸಂಗ್ರಹ ತೊಟ್ಟಿ ಇದೆ.ಇದಕ್ಕೆ ಎರಡು ಬದಿಗಳಲ್ಲಿ ನಳಿಗಳಿವೆ. ವಿದ್ಯುತ್ ಸಂಪರ್ಕವಿದ್ದಾಗ ಮಾತ್ರ ಗ್ರಾಮಸ್ಥರು ನೀರು ಸಂಗ್ರಹಿಸಬಹುದು. ವಿದ್ಯುತ್ ಸ್ಥಗಿತಗೊಂಡಾಗ ನೀರು ಸರಬರಾಜು ನಿಂತು ಬಿಡುತ್ತದೆ. ಹೀಗಾಗಿ ಗ್ರಾಮಸ್ಥರು ನೀರು ಸಂಗ್ರಹಿಸುವುದಕ್ಕಾಗಿ ನಾ ಮುಂದು... ತಾ ಮುಂದು... ಎಂದು ನೂಕು ನುಗ್ಗಲ ಉಂಟಾಗುತ್ತದೆ.ಜಿಗೇರಿ ಗ್ರಾಮದಲ್ಲಿ ಸಾಕಷ್ಟು ನೀರಿದೆ. ಹೀಗಿದ್ದರೂ ನೀರು ಸರಬರಾಜು ವಿಧಾನ ಗೊಂದಲದಿಂದ ಕೂಡಿದ್ದರಿಂದ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಎದುರಾಗಿದೆ ಎನ್ನುವುದು ಅಧಿಕಾರಿಗಳ ಉತ್ತರವಾಗಿದೆ.ಹೀಗಾಗಿ ಇನ್ನು ಕೆಲವೇ ತಿಂಗಳಲ್ಲಿ ಅರ್ಧಕ್ಕೆ ನಿಂತ ಯೋಜನೆಯನ್ನು ಪೂರ್ಣಗೊಳಿಸಿ, ಸಮರ್ಪಕ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದು ಜಿ.ಪಂ ಇಂಜಿನಿಯರ್ ಮಹಾದೇವಪ್ಪ `ಪ್ರಜಾವಾಣಿ'ಗೆ ಅವರು ತಿಳಿಸಿದರು.

ನೆನೆಗುದಿಗೆ ಬಿದ್ದ ಸರಬರಾಜು ಯೋಜನೆ

ಹತ್ತಾರು ದಶಕಗಳ ಗ್ರಾಮಸ್ಥರ ನೀರಿನ ಸಮಸ್ಯೆ ಪರಿಹರಿಸುವುದಕ್ಕಾಗಿ 2007 ರಲ್ಲಿ 30 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದನ್ನು ರೂಪಿಸಲಾಯಿತು. ಈ ಯೋಜನೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೀರು ಸರಬರಾಜು ಪೈಪ್‌ಗಳನ್ನು ಹಾಕುವುದು. ಗ್ರಾಮದ ನಾಲ್ಕೈದು ಕಡೆಗಳಲ್ಲಿ ಸಾರ್ವಜನಿಕ ನಳಿಗಳನ್ನು ಹಾಕುವುದು. ಗ್ರಾಮದ ಹೊರ ವಲಯದಲ್ಲಿ 50,000 ಲೀಟರ್ ಸಾಮರ್ಥ್ಯದ ಮೇಲ್ದರ್ಜೆಯ ನೀರು ಸಂಗ್ರಹ ತೊಟ್ಟಿಯನ್ನು ನಿರ್ಮಿಸಿ, ಕೊಳವೆ ಬಾವಿಯ ನೀರನ್ನು ಸಂಗ್ರಹಗಾರದಲ್ಲಿ ಸಂಗ್ರಹಿಸಿ, ಬಳಿಕ ಪೈಪ್‌ಗಳ ಮೂಲಕ ಗ್ರಾಮಸ್ಥರಿಗೆ ಸರಬರಾಜು ಮಾಡುವುದು ಯೋಜನೆಯ ಉದ್ದೇಶ.ಆದರೆ,ಯೋಜನೆ ಆರಂಭಗೊಂಡಾಗ ತಲೆಮಾರುಗಳ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ದೊರೆಯುತ್ತದೆ ಎಂದು ಗ್ರಾಮಸ್ಥರು ಭಾವಿಸಿದ್ದರು. ಆದರೆ, ಗ್ರಾಮದ ಹೊರ ವಲಯದಲ್ಲಿ ಮೇಲ್ದರ್ಜೆ ನೀರು ಸಂಗ್ರಹಾರ ತೊಟ್ಟಿಯನ್ನು ನಿರ್ಮಿಸಿದ ಬಳಿಕ, ಗುತ್ತಿಗೆದಾರ ಯೋಜನೆಗೆ ಸಂಬಂಧಿಸಿದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೀರು ಸರಬರಾಜು ಪೈಪ್‌ಗಳನ್ನು ಜೋಡಿಸದೆ, ನೀರು ಸಂಗ್ರಹ ನಿರ್ಮಾಣ ಕಾಮಗಾರಿಯನ್ನು ಸಹ ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳದೆ, ಯೋಜನೆಯಲ್ಲಿನ ಎಲ್ಲ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿ ಅರ್ಧ ದಶಕ ಉರುಳಿವೆ. ಹೀಗಾಗಿ ಗ್ರಾಮಸ್ಥರಿಗೆ ನೀರಿನ ಬವಣೆ ತಪ್ಪಿಲ್ಲ ಎಂದು ಗ್ರಾಮದ ಮುಖಂಡರಾದ ಪರಶುರಾಮ ಮೇಟಿ, ಶೇಖಪ್ಪ ಮಾಳೋತ್ತರ ದೂರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry