ಶನಿವಾರ, ಜುಲೈ 31, 2021
24 °C

ನೀರಿನ ಅದಾಲತ್ ಅಕ್ರಮ ನೀರಿನ ಸಂಪರ್ಕ ಕಡಿತಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ಇಲ್ಲಿನ ವಾರ್ಡ್ ನಂ. 25 ಮತ್ತು 26ರ ವ್ಯಾಪ್ತಿಯ ಬಹುತೇಕ ಬಡಾವಣೆಗಳಿಗೆ ಅಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂಬ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಅನಧಿಕೃತ ನೀರಿನ ಸಂಪರ್ಕ ಕಡಿತಗೊಳಿಸುವುದಕ್ಕೆ ಕ್ರಮ ಜರುಗಿಸಲು ಮಂಗಳವಾರ ನಡೆದ ನೀರಿನ ಅದಾಲತ್‌ನಲ್ಲಿ ತೀರ್ಮಾನಿಸಲಾಗಿದೆ.ಐಟಿಐ ಕಾಲೊನಿ ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ನಡೆದ ಅದಾಲತ್‌ನಲ್ಲಿ, ‘ಕೆಲವು ನಿವಾಸಿಗಳು ಕೊಳವೆ ಬಾವಿಗಳಿಂದ ಅನಧಿಕೃತವಾಗಿ ನೀರಿನ ಸಂಪರ್ಕ ಹೊಂದಿದ್ದಾರೆ. ಇದರಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆಯೂ ಮರೀಚಿಕೆಯಾಗಿದೆ’ ಎಂದು ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಆಂಜಿನಪ್ಪ ದೂರಿದರು.ರಾಮಯ್ಯ ಬಡಾವಣೆ ನಿವಾಸಿ ರವಿ ಮಾತನಾಡಿ, ‘ಕಾಲ ಕಾಲಕ್ಕೆ ಕಂದಾಯ ಪಾವತಿ ಮಾಡಿದ್ದೇವೆ. ಆದರೆ ಬಡಾವಣೆಗೆ ಮೂಲ ಸೌಕರ್ಯ ಒದಗಿಸಿಲ್ಲ. ಕಾವೇರಿ ಕುಡಿಯುವ ನೀರು ಪೂರೈಸಲು ಜಲಮಂಡಳಿಗೆ 2004ರಲ್ಲಿಯೇ ಹಣ ಸಂದಾಯ ಮಾಡಿದ್ದೇವೆ. ಇದುವರೆಗೆ ಚರಂಡಿ ಹಾಗೂ ನೀರಿನ ವ್ಯವಸ್ಥೆಯಾಗಿಲ್ಲ’ ಎಂದು ಆರೋಪಿಸಿದರು.ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿದ ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮುರಳಿ, ‘ಸಾರ್ವಜನಿಕರು ಸಹಕರಿಸಿದಲ್ಲಿ ಅನಧಿಕೃತ ಕುಡಿಯುವ ನೀರಿನ ಸಂಪರ್ಕಗಳನ್ನು ಶೀಘ್ರ ಕಡಿತಗೊಳಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ಕೊಳೆಗೇರಿ ನಿವಾಸಿಗಳಿಗೆ ಉಚಿತವಾಗಿ ಟ್ಯಾಂಕರ್ ನೀರನ್ನು ಒದಗಿಸಲಾಗುತ್ತಿದೆ.ಇತರೆ ಬಡಾವಣೆಯ ನಿವಾಸಿಗಳು ಮನೆಗಳ ಶೇಖರಣಾ ತೊಟ್ಟಿಗೆ ತುಂಬಿಸಲು ಒತ್ತಡ ಹೇರಿದ್ದರಿಂದ ಟ್ಯಾಂಕರ್ ಮೂಲಕ ನೀರು ಪೂರೈಸುವುದನ್ನು ನಿಲ್ಲಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.‘ರಾಮಯ್ಯ ಬಡಾವಣೆಗೆ ಕಾವೇರಿ ನೀರು ಪೂರೈಕೆಯಾಗುವ ಸಂದರ್ಭದಲ್ಲಿ ಸಂಪರ್ಕ ಕಲ್ಪಿಸಲಾಗುವುದು.

 

ಉಳಿದ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಉಪ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸುವುದು ಸೂಕ್ತ’ ಎಂದು ಸಲಹೆ ಮಾಡಿದರು. ಅದಾಲತ್‌ನಲ್ಲಿ ಸುಮಾರು 8-10 ಬಡಾವಣೆಗಳ ಪ್ರತಿನಿಧಿಗಳು ಭಾಗವಹಿಸಿ ಸಮರ್ಪಕ ನೀರಿನ ಪೂರೈಕೆಗೆ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.