ನೀರಿನ ಓಕುಳಿಯಾಟದಲ್ಲಿ ಮಿಂದೆದ್ದ ಜನತೆ

7

ನೀರಿನ ಓಕುಳಿಯಾಟದಲ್ಲಿ ಮಿಂದೆದ್ದ ಜನತೆ

Published:
Updated:
ನೀರಿನ ಓಕುಳಿಯಾಟದಲ್ಲಿ ಮಿಂದೆದ್ದ ಜನತೆ

ಚಿತ್ರದುರ್ಗ: ನಗರದಲ್ಲಿ ಬುಧವಾರ ಹಿರಿಯರು-ಕಿರಿಯರು ಕುಪ್ಪಳಿಸಿ ಕುಣಿದರು. ನೀರಿನ ಓಕುಳಿಯಾಟದಲ್ಲಿ ಮಿಂದು ತೇಲಿದರು.ಯುಗಾದಿ ಹಬ್ಬದ ಅಂಗವಾಗಿ ನಡೆಯುವ ಪರಸ್ಪರ ನೀರೆರೆಚುವ ಸಂಪ್ರದಾಯ ಈ ಬಾರಿಯೂ ಸಂಭ್ರಮದಿಂದ ನಡೆಯಿತು. ಚಂದ್ರದರ್ಶನದ ಮರುದಿನ ಪರಸ್ಪರ ನೀರೆರಚುವುದು ಇಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ.ಎಲ್ಲ ವಯೋಮಾನದವರು ನೀರೆರಚುವುದರಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೇಸಿಗೆ ಬಿರುಬಿಸಿಲಿನಲ್ಲಿ ಈ ಹಬ್ಬ ತುಸು ತಂಪೆರೆಯಿತು. ಯುವಕರು, ಮಹಿಳೆಯರು, ಚಿಣ್ಣರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದರು. ಯುವಕರು ಪರಸ್ಪರ ಕೆಸರು ಎರಚಿದ ಪ್ರಸಂಗಗಳು ನಡೆದವು.ನಗರದ ಉಳಿದೆಡೆ ಬಣ್ಣ ಇಲ್ಲದ ನೀರು ಎರಚಿದರೆ, ಕೆಳಗೋಟೆಯಲ್ಲಿ ಮಾತ್ರ ಹೋಳಿ ಹಬ್ಬದ ಪುನರಾವರ್ತನೆಯಾಯಿತು. ಪರಸ್ಪರ ಬಣ್ಣ ಮತ್ತು ನೀರು ಎರಚಿ ಯುವಕರು, ಮಕ್ಕಳು ಸಂಭ್ರಮಿಸಿದರು. ಹಲಗೆ ಬಾರಿಸುತ್ತಾ ಯುವಕರ ದಂಡು ಕುಣಿದು ಕುಪ್ಪಳಿಸಿತು.ಯುಗಾದಿ ಹಬ್ಬದ ಅಂಗವಾಗಿ ಕಳೆದ ಎರಡು ದಿನಗಳಿಂದ ಭರ್ಜರಿ ಸಿಹಿ ಊಟ ನಡೆದಿತ್ತು. ಚಂದ್ರದರ್ಶನದ ನಂತರ ಮಾಂಸಾಹಾರಿಗಳು ವಿಶೇಷ ಪುಷ್ಕಳ ಭೋಜನ ಸೇವಿಸುವುದು ಸಾಮಾನ್ಯ. ಒಂದು ರೀತಿಯಲ್ಲಿ ಮಾಂಸಾಹಾರ ಸೇವಿಸುವುದು ಕಡ್ಡಾಯವೂ ಹೌದು. ಕೆಲವರು ಮಂಗಳವಾರ ರಾತ್ರಿಯೇ ಮಾಂಸಾಹಾರದ ಭೋಜನ ಸಿದ್ಧಪಡಿಸಿದರು.ಉಳಿದಂತೆ ಬಹುತೇಕ ಮಂದಿ ಬುಧವಾರ ವಿಶೇಷ ಅಡುಗೆ ಸಿದ್ಧಪಡಿಸಿದರು. ಇದರಿಂದಾಗಿ ಬುಧವಾರ ಮಾಂಸಾಹಾರದ ಮಾರುಕಟ್ಟೆ ಜನದಟ್ಟಣೆಯಿಂದ ಕೂಡಿತ್ತು.ಬೆಳಿಗ್ಗೆಯಿಂದಲೇ ನಾಗರಿಕರು ಮಾರುಕಟ್ಟೆಗೆ ಮುಗಿಬಿದ್ದಿದ್ದರು. ಪ್ರತಿ ಕೆಜಿ ಮಟನ್ 300ರಿಂದ 325 ರೂಪಾಯಿಗೆ ಮಾರಾಟವಾದರೆ, ಚಿಕನ್ 150ರಿಂದ 170ರವರೆಗೆ ಮಾರಾಟವಾಯಿತು. ಮಾರುಕಟ್ಟೆಯಲ್ಲಿ ನೂರಾರು ಕೆಜಿ ಮಟನ್ ಮತ್ತು ಚಿಕನ್ ಮಾರಾಟ ನಡೆಯಿತು. ಯುಗಾದಿ ಹಬ್ಬದ ಅಂಗವಾಗಿ ಹೋಟೆಲ್‌ಗಳಲ್ಲಿನ ಕಾರ್ಮಿಕರು ಸಹ ತಮ್ಮ ಗ್ರಾಮಗಳಿಗೆ ತೆರಳಿದ್ದರಿಂದ ನಗರದಲ್ಲಿನ ಕೆಲವು ಹೋಟೆಲ್‌ಗಳು ಬಾಗಿಲು ಮುಚ್ಚಬೇಕಾದ ಪರಿಸ್ಥಿತಿಯೂ ಉಂಟಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry