ಗುರುವಾರ , ಮೇ 6, 2021
23 °C

ನೀರಿನ ಕರ ಏರಿಕೆ: ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕಂದಾಯವನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.ನೀರಿನ ಕಂದಾಯವನ್ನು ರೂ. 660ರಿಂದ ರೂ. 2,100ಕ್ಕೆ ಏರಿಸಲಾಗಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ. ಇದನ್ನು ಶಾಸಕ ಶಾಮನೂರು ಶಿವಶಂಕರಪ್ಪ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಾಗ, ಸರ್ಕಾರ ನೀರಿನ ದರ ಇಳಿಸುವ ಭರವಸೆ ನೀಡಿತ್ತು. ಆದರೆ, ಸರ್ಕಾರ ನೀಡಿದ ಆಶ್ವಾಸನೆಯಂತೆ ನಡೆದುಕೊಳ್ಳದೇ ಜನರಿಗೆ ದ್ರೋಹ ಬಗೆದಿದೆ. ನಂತರ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಇದುವರೆಗೆ ಹೊಸ ಆದೇಶ ಹೊರಡಿಸಿಲ್ಲ ಎಂದು ದೂರಿದರು.ಮೊದಲು ಒಳಚರಂಡಿ ಉಪಯೋಗಿಸುವ ಮನೆಗಳಿಗೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ. ಈಗ ಒಳಚರಂಡಿ ಉಪಯೋಗಿಸುವ ಪ್ರತಿ ಮನೆಗಳಿಗೆ ವರ್ಷಕ್ಕೆ ರೂ.180 ಶುಲ್ಕ ನಿಗದಿ ಮಾಡಿದ್ದಾರೆ. ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಮಾಡುವಲ್ಲಿ ಪಾಲಿಕೆಯ ಬಿಜೆಪಿ ಆಡಳಿತ ಸಂಪೂರ್ಣ ವಿಫಲವಾಗಿದೆ. 5-6ದಿನಕ್ಕೆ ಒಮ್ಮೆ ನೀರು ಸರಬರಾಜು ಮಾಡಲೂ ಸಾಧ್ಯವಾಗಿಲ್ಲ. ಆದರೂ, ನೀರಿನ ದರ ಗಣನೀಯವಾಗಿ ಏರಿಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಜನ ಗುಳೆ ಹೋಗುತ್ತಿದ್ದಾರೆ. ಜಿಲ್ಲೆಯ ಸ್ಥಿತಿಗೆ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಈ ವಿಚಾರದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಕೋರಿದರು.ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಕೆ. ಮಲ್ಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಕೆ. ಜಬ್ಬಾರ್, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿರೋಧ ಪಕ್ಷದ ನಾಯಕ ಡಿ.ಎನ್. ಜಗದೀಶ್, ಕೆಪಿಸಿಸಿ ಸದಸ್ಯ ಡಿ. ಬಸವರಾಜ್, ನಗರಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ್, ಪಿ. ರಾಜಕುಮಾರ್, ಎಸ್. ಮಲ್ಲಿಕಾರ್ಜುನ್, ಶಿವನಹಳ್ಳಿ ರಮೇಶ್, ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಅಜ್ಜಂಪುರ ಶೆಟ್ರು ಮೃತ್ಯುಂಜಯ ಹಾಜರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.