ನೀರಿನ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

7

ನೀರಿನ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

Published:
Updated:

ರಾಯಚೂರು: ಕುಡಿವ ನೀರು ಪೂರೈಕೆ ಯೋಜನೆ ಸಮರ್ಪಕ ರೀತಿ ಅನುಷ್ಠಾನಗೊಳಿಸಬೇಕು. ಬಿಸಿಲು ಕಾಲ ಆರಂಭವಾಗುತ್ತಿದೆ. ಬೇಸಿಗೆ ದಿನಗಳಲ್ಲಿ ಕುಡಿವ ನೀರು ಪೂರೈಕೆಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ತನ್ವೀರಾ ಬಷಿರುದ್ದೀನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕುಡಿವ ನೀರು ಪೂರೈಕೆ ಯೋಜನೆ ಯಾವುದೇ ರೀತಿ ವಿಳಂಬ ಮಾಡುವಂತಿಲ್ಲ. ನೀರು ಪೂರೈಕೆ ಕುರಿತು ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕವೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಅಂಗನವಾಡಿಗೆ ಬರುವ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಸಮರ್ಪಕ ರೀತಿ ನಡೆಯುತ್ತಿದೆಯೆ ಎಂದು ಪರಿಶೀಲಿಸಬೇಕು. ಅಂಗನವಾಡಿಗಳಲ್ಲಿ ಇರುವ ಖಾಲಿ ಹುದ್ದೆಗಳೆಷ್ಟು ಎಂದು ಪ್ರಶ್ನಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೋಹಿಣಿ ಹಿರೇಮಠ ಮಾತನಾಡಿ, 49 ಕಾರ್ಯಕರ್ತರು ಹಾಗೂ 499 ಸಹಾಯಕರ ಹುದ್ದೆಗೆ ಅರ್ಜಿ ಕರೆಯುವ ಪ್ರಕ್ರಿಯೆ ಆಯಾ ತಾಲ್ಲೂಕು ಮಟ್ಟದಲ್ಲಿ ಆರಂಭಿಸಲಾಗಿತ್ತು. ಪ್ರಕ್ರಿಯೆ ಅಸಮರ್ಪಕ ಎಂಬ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ವಿವರಿಸಿದರು.ಪ್ರಕ್ರಿಯೆ ಅಸಮರ್ಪಕವಾಗಿರುವುದಕ್ಕೆ ಏನು ಕಾರಣ? ಲೋಪಗಳನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷರಾದ ಭೂಪನಗೌಡ ಪಾಟೀಲ್, ಜಾಫರ ಅಲಿ ಪಟೇಲ್ ಈ ಸಂದರ್ಭದಲ್ಲಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry