ನೀರಿನ ಕೂಗೇ ಬಲು ಜೋರು

7

ನೀರಿನ ಕೂಗೇ ಬಲು ಜೋರು

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ಅಂತಃಕಲಹದಿಂದ ನಲುಗುತ್ತಿರುವ ಆಡಳಿತಾರೂಢ ಬಿಜೆಪಿ ಕೊನೆಗೂ `ಕಂಟಕ'ವೊಂದರಿಂದ ಪಾರಾಗಿದೆ. ಪಕ್ಷದಲ್ಲಿನ ಒಡಕಿನಿಂದಾಗಿ ಬಿಜೆಪಿಗೆ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲದ ಮೊದಲ ಅಧಿವೇಶನ ಒಂದು ರೀತಿ ತಂತಿಯ ಮೇಲಿನ ನಡಿಗೆ ಆಗಿತ್ತು. ಅಧಿವೇಶನ ಮುಗಿಯುತ್ತಲೇ ಪಕ್ಷ ನಿಟ್ಟುಸಿರು ಬಿಟ್ಟು ನಿರಾಳ ಆಗಿದೆ.ಪ್ರತಿಪಕ್ಷಗಳ ಹಿಂದೇಟು: ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳಿಗೆ ಹೇರಳ ಅವಕಾಶಗಳು ಇದ್ದವು. ಆದರೆ, ದೊರೆತ ಅವಕಾಶಗಳನ್ನು ಪ್ರತಿಪಕ್ಷಗಳು ತಾವಾಗಿಯೇ ಕೈಚೆಲ್ಲಿದವು. ಚುನಾವಣೆ ಸಮೀಪಿಸಿದೆ. ಈ ಹಂತದಲ್ಲಿ ಸರ್ಕಾರಕ್ಕೆ ತೊಂದರೆ ನೀಡಿದರೆ ಅದು ತಮಗೇ ತಿರುಗುಬಾಣ ಆಗಬಹುದು ಎಂಬ ಆತಂಕದಿಂದ ಪ್ರತಿಪಕ್ಷಗಳ ಮುಖಂಡರು ಸರ್ಕಾರದ ಬುಡ ಅಲುಗಾಡಿಸುವ ಸಣ್ಣ ಪ್ರಯತ್ನಕ್ಕೂ ಕೈಹಾಕಲಿಲ್ಲ. ಅಂತಹ ದುಸ್ಸಾಹಸಕ್ಕೆ ಹೋಗುವುದಿಲ್ಲ ಎಂದು ವಿರೋಧ ಪಕ್ಷಗಳ ಮುಖಂಡರು ಖಾಸಗಿಯಾಗಿಯೂ ಹೇಳಿಕೊಳ್ಳುತ್ತಿದ್ದರು.ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದ ಜೊತೆ ಗುರುತಿಸಿಕೊಂಡಿರುವ ಶಾಸಕರೂ ಸರ್ಕಾರವನ್ನು ಪೇಚಿಗೆ ಸಿಲುಕಿಸುವ ಪ್ರಯತ್ನಕ್ಕೆ ಹೋಗಲಿಲ್ಲ. ಕೊನೆಯ ದಿನ ಗುರುವಾರ ಮಾತ್ರ ಆಡಳಿತ ಪಕ್ಷದಲ್ಲಿನ ಒಡಕು ಎದ್ದುಕಂಡಿತು. ಯಡಿಯೂರಪ್ಪ `ಹಿಟ್ ಲಿಸ್ಟ್'ನಲ್ಲಿರುವ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರು ಮಂಡಿಸಿದ ಹಲವು ಮಸೂದೆಗಳ ವಿರುದ್ಧ ಭಿನ್ನರು ದನಿ ಎತ್ತಿದರು.ಹಾವೇರಿ ಶಾಸಕ ನೆಹರೂ ಓಲೇಕಾರ ಒಂದು ಹಂತದಲ್ಲಿ ಮಸೂದೆಯೊಂದನ್ನು ಮತಕ್ಕೆ ಹಾಕುವಂತೆ ಒತ್ತಾಯಿಸಿದರು. ಆದರೆ, ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಓಲೇಕಾರ ಆಗ್ರಹವನ್ನು ಮಾನ್ಯ ಮಾಡಲಿಲ್ಲ. ಆ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸದಸ್ಯರು ಸದನದಲ್ಲಿ ಇರಲಿಲ್ಲ. ಆಡಳಿತ ಪಕ್ಷದ ಒಂದು ಗುಂಪಿನ ಸದಸ್ಯರೇ ಪ್ರತಿಪಕ್ಷಗಳ ಜವಾಬ್ದಾರಿಯನ್ನು ನಿರ್ವಹಿಸಿದರು.ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಮೂರು ದಿನಗಳ ಕಾಲ ಕಲಾಪವನ್ನು ಆವರಿಸಿತು. ಕೃಷ್ಣಾ ನೀರಿನ ಬಳಕೆ ಕುರಿತು ದೀರ್ಘ ಚರ್ಚೆ ನಡೆಯಿತು. ಕೊನೆಯ ದಿನ ಹತ್ತಾರು ಮಸೂದೆಗಳು ಚರ್ಚೆ ಇಲ್ಲದೆ ಅಂಗೀಕಾರ ಪಡೆದವು. ಕರ್ನಾಟಕ ಗೋವಧೆ ಪ್ರತಿಬಂಧಕ ಮಸೂದೆ ಮಂಡನೆಗೆ ವಿಧಾನಸಭೆಯಲ್ಲಿ ಬುಧವಾರ ವಿರೋಧ ಪಕ್ಷಗಳು ಅವಕಾಶವನ್ನೇ ನೀಡಿರಲಿಲ್ಲ. ವಿಪರ್ಯಾಸ ಎಂದರೆ ಅದೇ ಮಸೂದೆಗೆ ಗುರುವಾರ ಯಾವುದೇ ಚರ್ಚೆ ಇಲ್ಲದೆ ಸದನದ ಒಪ್ಪಿಗೆ ದೊರೆಯಿತು!ಕಾಟಾಚಾರದ ಕಸರತ್ತು: ವಿರೋಧ ಪಕ್ಷಗಳು ಕಲಾಪ ಬಹಿಷ್ಕರಿಸಿದ್ದವು. ಆ ಸಂದರ್ಭದಲ್ಲಿ ಒಂದು ತಾಸು ಅವಧಿಯಲ್ಲಿ ಗೋವಧೆ ನಿಷೇಧ ಮಸೂದೆ ಸೇರಿದಂತೆ ಒಟ್ಟು 13 ಮಸೂದೆಗಳಿಗೆ ಅಂಗೀಕಾರದ ಮುದ್ರೆ ಬಿತ್ತು. ವಿಧಾನಸಭೆಯಲ್ಲಿ ಶಾಸನ ರಚನೆಗೆ ಮೊದಲ ಮರ್ಯಾದೆ ದೊರೆಯಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅದು ಕೊನೆ ಗಳಿಗೆಯ ಕಾಟಾಚಾರದ ಕಸರತ್ತು ಆಗಿದೆ. ಈ ರೂಢಿಗೆ ಚಳಿಗಾಲದ ಅಧಿವೇಶನವೂ ಹೊರತಾಗಲಿಲ್ಲ.ಸದನದ ಒಳಗೆ `ಗದ್ದಲ' ಕಡಿಮೆ ಇತ್ತು. ಆದರೆ ವಿಧಾನಸೌಧ ಹೊರಗೆ ಪ್ರತಿನಿತ್ಯ ಪ್ರತಿಭಟನೆ, ಮುತ್ತಿಗೆ ಪ್ರಯತ್ನಗಳು ನಡೆದೇ ಇದ್ದವು. ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರ ಮುತ್ತಿಗೆ ಯತ್ನ ವಿಕೋಪಕ್ಕೆ ತಿರುಗಿ ಸದನದ ಗಮನವನ್ನೂ ಸೆಳೆಯಿತು.ಅಧಿವೇಶನ ನಡೆದಷ್ಟೂ ದಿನ ಉಭಯ ಸದನಗಳ ಮೊಗಸಾಲೆಯಲ್ಲಿ ಮುಂದಿನ ಚುನಾವಣೆ ಕುರಿತ ಲೆಕ್ಕಾಚಾರಗಳೇ ಹೆಚ್ಚಾಗಿ ಚರ್ಚೆಗೆ ಒಳಗಾಗಿದ್ದವು. ಯಡಿಯೂರಪ್ಪ ಬಿಜೆಪಿ ತೊರೆದಿದ್ದರಿಂದ ಆಗುವ ಪರಿಣಾಮಗಳು, ಯಾರು ಯಾವ ಕಡೆ ಜಿಗಿಯಬಹುದು, ಯಾವ ಪಕ್ಷ ಎಷ್ಟು ಸೀಟು ಪಡೆಯಬಹುದು, ಮುಂದಿನ ಸರ್ಕಾರ ಸಮ್ಮಿಶ್ರವೋ ಸ್ವತಂತ್ರವೋ ಎಂಬಿತ್ಯಾದಿ ವಿಷಯಗಳು ಹರಟೆಯ ವಸ್ತುವಾಗಿದ್ದವು.ಯಡಿಯೂರಪ್ಪ ದಿಢೀರನೆ ಒಂದು ದಿನ ಸುವರ್ಣ ವಿಧಾನಸೌಧಕ್ಕೆ ಬಂದು ಹವೆ ಎಬ್ಬಿಸಿದರು. ಚಿತ್ರನಟಿ ತಾರಾ ಮೇಲ್ಮನೆಗೆ ತಾರಾ ರಂಗು ತಂದಿದ್ದರು. ಚೊಕ್ಕವಾಗಿ ಮಾತನಾಡಿ ಸದನದ ಗಮನ ಸೆಳೆದರು. ಅವರಿಗೆ ಇದು ಮೊದಲ ಅಧಿವೇಶನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry