ನೀರಿನ ಖಾಸಗೀಕರಣ ಹೇಯ ಕೃತ್ಯ

7

ನೀರಿನ ಖಾಸಗೀಕರಣ ಹೇಯ ಕೃತ್ಯ

Published:
Updated:
ನೀರಿನ ಖಾಸಗೀಕರಣ ಹೇಯ ಕೃತ್ಯ

ಬೆಂಗಳೂರು: `ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ವಿಕಲಗೊಳಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣಿಗಳು ನೀರನ್ನು ಖಾಸಗೀಕರಣ ಮಾಡುತ್ತಿರುವುದು ವ್ಯವಸ್ಥೆಯ ಲೋಪವನ್ನು ಸೂಚಿಸುತ್ತದೆ~ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.ನೀರಿನ ಹಕ್ಕಿಗಾಗಿ ಜನಾಂದೋಲನ ಕರ್ನಾಟಕ ಸಂಘಟನೆಯು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೀರಿನ ಹಕ್ಕಿಗಾಗಿ ಜನ ಸಮಾವೇಶದಲ್ಲಿ ಅವರು ಮಾತನಾಡಿದರು.`ಆರ್ಯ ಸಂಸ್ಕೃತಿಯಲ್ಲಿ ಅಗ್ನಿಗೆ ಮಹತ್ವ ನೀಡಿದ್ದರೆ, ಆರ್ಯೇತರ ಸಂಸ್ಕೃತಿಯಲ್ಲಿ ನೀರು ವಿಶೇಷ ಸ್ಥಾನವನ್ನು ಪಡೆಯುತ್ತದೆ. ಜೀವಕ್ಕೆ ಆಧಾರವಾಗಿರುವ ಜಲವನ್ನು ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡುತ್ತಿರುವುದು ಹೇಯ ಕೃತ್ಯ~ ಎಂದು ಖಂಡಿಸಿದರು.`ನೀರಿಗೂ ದುಬಾರಿ ಬೆಲೆ ತೆತ್ತು ಬದುಕುವ ಸ್ಥಿತಿ ಬರುವುದಾದರೆ, ಸಾಮಾನ್ಯ ಜನರು ಜೀವನ ನಡೆಸಲು ಸಾಧ್ಯವಿದೆಯೇ?~ ಎಂದು ಪ್ರಶ್ನಿಸಿದ ಅವರು, `ಚುನಾವಣೆ ಸಂದರ್ಭದಲ್ಲಿ ಮತ ಕೇಳುವ ರಾಜಕಾರಣಿಗಳು ಜನರ ಸಮಸ್ಯೆಗಳ ಬಗ್ಗೆ ಮೌನ ವಹಿಸುತ್ತಾರೆ. ರಾಜಕಾರಣಿಗಳ ಇಂತಹ ಮನೋಧೋರಣೆ ವಿರುದ್ಧ ಜನರು ಸಂಘಟಿತರಾಗಿ ಹೋರಾಡಬೇಕು~ ಎಂದು ಕರೆ ನೀಡಿದರು.`ವಿದೇಶಗಳಲ್ಲಿ ನೀರಿನ ವಿತರಣೆಯನ್ನು ಖಾಸಗೀಕರಣಗೊಳಿಸಿದ ಪರಿಣಾಮ ಅಲ್ಲಿನ ಜನರು ಸಂಬಳದ ಶೇ 25ರಷ್ಟು ಹಣವನ್ನು ನೀರಿಗಾಗಿ ವ್ಯಯಿಸುತ್ತಿದ್ದಾರೆ. ನೀರಿನ ವಿತರಣೆಯನ್ನು ಖಾಸಗೀಕರಣ ಮಾಡುವ ಕುರಿತು ಜನಾಭಿಪ್ರಾಯ ಸಂಗ್ರಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ~ ಎಂದರು.ಇತಿಹಾಸ ತಜ್ಞ ಪ್ರೊ.ನಂಜರಾಜ್ ಅರಸ್, `ಮೈಸೂರು, ಹುಬ್ಬಳ್ಳಿ, ಗುಲ್ಬರ್ಗ, ಬೆಳಗಾವಿಯಲ್ಲಿ ಸರ್ಕಾರ ಈಗಾಗಲೇ ನೀರಿನ ಪೂರೈಕೆಯನ್ನು ಖಾಸಗೀಕರಣಗೊಳಿಸಿದೆ. ಕುಡಿಯುವ ನೀರನ್ನು ಪೂರೈಸುವುದು ಮತ್ತು ಶುದ್ಧೀಕರಣದ ಕೆಲಸವನ್ನು ಪಾಲಿಕೆ ನಿರ್ವಹಿಸುತ್ತದೆ. ಆದರೆ ವಿತರಣೆಗಾಗಿ ಖಾಸಗಿ ಕಂಪೆನಿಗಳ ನೆರವನ್ನು ಅಪೇಕ್ಷಿಸಿರುವುದು ನಿಜಕ್ಕೂ ಖಂಡನೀಯ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು~ ಎಂದರು.`ಕಾವೇರಿ ನದಿಯ ನೀರನ್ನು ಒಂಟಿಕೊಪ್ಪಲದಲ್ಲಿ ಶುದ್ದೀಕರಿಸುವ ಮೈಸೂರಿನ ಪಾಲಿಕೆಯು ಅದನ್ನು ಮನೆ-ಮನೆಗೆ ಹಂಚುವುದಕ್ಕೆ ಮತ್ತು ನಿರ್ವಹಣೆಗೆ ಖಾಸಗಿ ಕಂಪೆನಿಗಳ ಮೊರೆ ಹೋಗಿದೆ. ಮೈಸೂರಿನಲ್ಲಿ ನಡೆದ ನೀರಿನ ಖಾಸಗೀಕರಣ ಪ್ರಕ್ರಿಯೆಗೆ ಅಂದಿನ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಅಂದಿನ ಜಿಲ್ಲಾಧಿಕಾರಿ ಪಿ.ಮಣಿವಣ್ಣನ್ ಅವರೇ ಕಾರಣವಾಗಿದ್ದಾರೆ~ ಎಂದು ಆರೋಪಿಸಿದರು.

ಲೇಖಕ ಡಾ.ಬಂಜಗೆರೆ ಜಯ ಪ್ರಕಾಶ್ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry