ಗುರುವಾರ , ಮೇ 13, 2021
24 °C

ನೀರಿನ ಗುಣಮಟ್ಟ ಪರೀಕ್ಷೆ: ಜಲಮಂಡಳಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಡೆಂಗೆ ಮತ್ತಿತರ ಸಾಂಕ್ರಾಮಿಕ ರೋಗಗಳ ಪ್ರಮಾಣ ಗಣನೀಯ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ `ಶುದ್ಧ ನೀರು' ಬಳಕೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಜಲಮಂಡಳಿ ಮುಂದಾಗಿದೆ.ಮುಂಗಾರು ಮಳೆಯ ವಿಳಂಬ ಹಾಗೂ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿರುವ ಜಲಾಶಯಗಳು ಬತ್ತಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕೆಲವು ಭಾಗಗಳಲ್ಲಿ ಕೊಡ ನೀರಿಗೂ ಪರದಾಡುವ ಸ್ಥಿತಿ ಇದೆ. ದುಬಾರಿ ಬೆಲೆಗೆ ನೀರು ಖರೀದಿ ಮಾಡುವ ಪ್ರಮೇಯ ಎದುರಾಗಿದೆ. ಇದೇ ಹೊತ್ತಿನಲ್ಲಿ ಸಾರ್ವಜನಿಕರು ಶುದ್ಧ ನೀರು ಬಳಕೆ ಮಾಡುವುದು ಮುಖ್ಯ. ಈ ನಿಟ್ಟಿನಲ್ಲಿ ಸುರಕ್ಷತಾ ಸೂಚನೆಗಳನ್ನು ಪಾಲಿಸಬೇಕು ಎಂದು ಜಲಮಂಡಳಿ ಮನವಿ ಮಾಡಿದೆ.`ಮನೆ ಸಮೀಪದ ನೀರಿನ ಪೈಪ್‌ನಲ್ಲಿ ದೋಷ ಕಾಣಿಸಿಕೊಂಡು ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಸೇರುವ ಉದಾಹರಣೆಗಳು ಇವೆ. ಇದರಿಂದ ನೀರು ಕಲುಷಿತಗೊಳ್ಳುತ್ತದೆ. ನೀರು ನಿಧಾನವಾಗಿ ಸಾಗುವ ಮಾರ್ಗಗಳಲ್ಲಿ ಜನರು ಗುಂಡಿಗಳನ್ನು ನಿರ್ಮಾಣ ಮಾಡಿ ಬಕೆಟ್ ಮೂಲಕ ನೀರು ಎತ್ತುತ್ತಾರೆ. ಈ ಗುಂಡಿಯಲ್ಲಿ ಮಳೆ ನೀರು, ಕೊಳಚೆ ನೀರು ಸೇರಿ ಕುಡಿಯುವ ನೀರಿನೊಂದಿಗೆ ಸೇರುತ್ತದೆ. ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಜಾಸ್ತಿ. ಈ ನಿಟ್ಟಿನಲ್ಲಿ ಜನರು ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಬೇಕು' ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ ಟಿ.ವೆಂಕಟರಾಜು ತಿಳಿಸಿದರು.`ನೀರು ಕಲುಷಿತವಾಗಿದೆ ಎಂಬ ಸಂಶಯ ಮೂಡಿದ ಕೂಡಲೇ ಸಮೀಪದಲ್ಲಿರುವ ಜಲಮಂಡಳಿಯ ಸೇವಾ ಠಾಣೆ ಹಾಗೂ ಕಚೇರಿಗೆ ಮಾಹಿತಿ ನೀಡಬೇಕು. ಸ್ಥಳದಲ್ಲಿ ನೀರು ಮಲಿನವಾಗಿದ್ದರೆ ತಕ್ಷಣ ಸರಿಪಡಿಸಿ ನೀರಿನ ಮಾದರಿಯನ್ನು ಪರೀಕ್ಷಿಸಿ ಶುದ್ಧತೆಯನ್ನು ಕಾತರಿಪಡಿಸಲಾಗುತ್ತದೆ' ಎಂದು ಅವರು ತಿಳಿಸಿದರು.`ಜಲಮಂಡಳಿ 85 ಸೇವಾ ಠಾಣೆಗಳನ್ನು ಹೊಂದಿದ್ದು, ಈ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ನಲ್ಲಿ, ಮನೆಗಳ ನೀರಿನ ಸಂಪರ್ಕ ಅಥವಾ ಭೂಮಟ್ಟದ ಜಲಾಗಾರಗಳಿಂದ ಪ್ರತಿ ವಾರಕ್ಕೆ ನಾಲ್ಕು ನೀರಿನ ಮಾದರಿಗಳನ್ನು ಸಂಗ್ರಹಿಸಿ ಮಂಡಳಿಯ ಕೇಂದ್ರ ಪರೀಕ್ಷಣಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ. ಪ್ರತಿ ಸೇವಾ ಠಾಣೆ ವ್ಯಾಪ್ತಿಯಿಂದ ತಿಂಗಳಲ್ಲಿ 16 ನೀರಿನ ಮಾದರಿಗಳಂತೆ 85 ಸೇವಾ ಠಾಣೆಗಳಿಂದ ಪ್ರತಿತಿಂಗಳು 1360 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದಲ್ಲದೆ ಮಂಡಳಿಯ ಸಂಚಾರಿ ನೀರು ಪರೀಕ್ಷಣಾ ವಾಹನಗಳು ಪ್ರತಿ ತಿಂಗಳು 400ರಿಂದ 600 ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ' ಎಂದು ಅವರು ಹೇಳುತ್ತಾರೆ.`ಕೇಂದ್ರ ಸರ್ಕಾರ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಎಂಜಿನಿಯರಿಂಗ್ ಸಂಸ್ಥೆಯ ಮಾನದಂಡದ ಪ್ರಕಾರ ಪ್ರತಿ ತಿಂಗಳೂ 10,000 ಜನರಿಗೆ ಒಂದು ಮಾದರಿಯಂತೆ, ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಈ ಪ್ರಕಾರ ನಗರ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸುಮಾರು 800ರಿಂದ 1,000 ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಿ ಕುಡಿಯುವ ನೀರಿನ ಶುದ್ಧತೆಯನ್ನು ಖಾತ್ರಿ ಮಾಡಿಕೊಳ್ಳಲಾಗುತ್ತದೆ. ಮಂಡಳಿ ಸರಾಸರಿ 1600 ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸುತ್ತಿದ್ದು, ಮಾದರಿ ನೀರನ್ನು ಬ್ಯಾಕೀರಿಯಾ ಹಾಗೂ ವಿಶೇಷ ಸಂದರ್ಭಗಳಲ್ಲಿ ಪರೀಕ್ಷೆಗೂ ಒಳಪಡಿಸಲಾಗುತ್ತದೆ ಎಂದು ಅವರು ತಿಳಿಸುತ್ತಾರೆ.`ಪರೀಕ್ಷೆ ವೇಳೆ ನೀರಿನಲ್ಲಿನ ಪಿ.ಎಚ್ ಮತ್ತು ಟರ್ಬಿಡಿಟಿ ಪರೀಕ್ಷೆ (ನೀರಿನ ಬಣ್ಣ) ಹಾಗೂ ನೀರಿನ ಕ್ಲೋರಿನ್ ಪ್ರಮಾಣವನ್ನು ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯ ನೀರಿನಲ್ಲಿ ಪ್ರತಿ ಲೀಟರ್ ನೀರಿನಲ್ಲಿ ಕ್ಲೋರಿನ್ ಪ್ರಮಾಣ 0.20 ಮಿಲಿಗ್ರಾಂ ಇದ್ದರೆ ಆ ನೀರು ಸುರಕ್ಷಿತ ಎಂದು ಅರ್ಥ. ಒಂದು ವೇಳೆ ಕ್ಲೋರಿನ್ ಪ್ರಮಾಣ ಪತ್ತೆಯಾಗದೆ ಇದ್ದಲ್ಲಿ ಅಂತಹ ನೀರು ಕಲುಷಿತವಾಗಿರುವ ಸಾಧ್ಯತೆ ಇರುವ ಕಾರಣ ಅಂತಹ ನೀರನ್ನು ತಕ್ಷಣ ಬ್ಯಾಕ್ಟೀರಿಯಾ ಪರೀಕ್ಷೆಗೆ (ಇ-ಕೋಲಿ) ಹಾಗೂ ಕೆಲವೊಮ್ಮೆ ರಾಸಾಯನಿಕ ಪರೀಕ್ಷೆಗೂ ಒಳಪಡಿಸಲಾಗುತ್ತದೆ. ಮಾದರಿ ಸಂಗ್ರಹ ಮಾಡಲಾದ ಸ್ಥಳದಲ್ಲಿ ನೀರು ಮಲಿನವಾಗಿರುವ ಸಾಧ್ಯತೆ ಪರಿಶೀಲಿಸಿ ಪತ್ತೆ ಹಚ್ಚಲಾಗುತ್ತದೆ ಎಂದು ಅವರು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.