ಭಾನುವಾರ, ಆಗಸ್ಟ್ 9, 2020
21 °C

ನೀರಿನ ತೊಟ್ಟಿಗೆ ಬಿದ್ದು ಮಗು ಸೇರಿ ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿನ ತೊಟ್ಟಿಗೆ ಬಿದ್ದು ಮಗು ಸೇರಿ ಇಬ್ಬರ ಸಾವು

ಬೆಂಗಳೂರು: ನಗರದ ಬ್ಯಾಟರಾಯನಪುರ ಮತ್ತು ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ವರ್ಷದ ಗಂಡು ಮಗು ಹಾಗೂ ವ್ಯಕ್ತಿಯೊಬ್ಬರು ನೀರಿನ ತೊಟ್ಟಿಗೆ (ಸಂಪ್) ಬಿದ್ದು ಮೃತಪಟ್ಟಿದ್ದಾರೆ.ಬ್ಯಾಟರಾಯನಪುರ ಸಮೀಪದ ಪ್ರಮೋದ್ ಲೇಔಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ಶಂಕರ್ ಎಂಬ ಮಗು ನಿರ್ಮಾಣ ಹಂತದ ಕಟ್ಟಡದಲ್ಲಿನ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ.ಶಂಕರ್, ಕೂಲಿ ಕಾರ್ಮಿಕರಾದ ಹೊನ್ನೂರುಸ್ವಾಮಿ ಮತ್ತು ಲಕ್ಷ್ಮಿ ದಂಪತಿಯ ಮಗು. ಆಂಧ್ರಪ್ರದೇಶ ಮೂಲದ ಹೊನ್ನೂರುಸ್ವಾಮಿ ದಂಪತಿ, ಪ್ರಮೋದ್ ಲೇಔಟ್ ಏಳನೇ ಅಡ್ಡರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಮನೆಯೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ದಂಪತಿ ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಶಂಕರ್‌ನನ್ನು ಕಟ್ಟಡದ ಆವರಣದಲ್ಲಿ ಬಿಟ್ಟು ಕೆಲಸದಲ್ಲಿ ನಿರತರಾಗಿದ್ದರು.ಆಟವಾಡುತ್ತಿದ್ದ ಮಗು, ಸಮೀಪದಲ್ಲೇ ಇದ್ದ ನೀರಿನ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದೆ. ಮಗು ಕಾಣದಿದ್ದಾಗ ಆತಂಕಗೊಂಡ ಪೋಷಕರು, ಎಲ್ಲೆಡೆ ಹುಡುಕಾಡುತ್ತಿದ್ದಾಗ ನೀರಿನ ತೊಟ್ಟಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ಬ್ಯಾಟರಾುನಪುರ ಪೊಲೀಸರು ತಿಳಿಸಿದ್ದಾರೆ.ಘಟನೆ ಸಂಬಂಧ ಕಟ್ಟಡದ ಮಾಲೀಕರು ಹಾಗೂ ಕೆಲಸದ ಮೇಸ್ತ್ರಿ ನಾಗರಾಜ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಮತ್ತೊಂದು ಪ್ರಕರಣ: ಕಾಡುಗೋಡಿ ಬಳಿಯ ಕೊಡಿಗೇಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ಗೋಪಾಲಕೃಷ್ಣ (36) ಎಂಬುವರು ಮನೆಯ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾರೆ.ಆಟೊ ಚಾಲಕರಾಗಿದ್ದ ಗೋಪಾಲಕೃಷ್ಣ, ಕೆಲ ತಿಂಗಳಿಂದ ಖಿನ್ನತೆಗೆ ಒಳಗಾಗಿದ್ದರು. ಕುಟುಂಬ ಸದಸ್ಯರು ಅವರಿಗೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಸಹ ಕೊಡಿಸುತ್ತಿದ್ದರು. ಕುಟುಂಬ ಸದಸ್ಯರೆಲ್ಲ ಮಧ್ಯಾಹ್ನ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅವರು ಮನೆಯ ಮುಂದಿನ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಆಕಸ್ಮಿಕವಾಗಿ ಅವರು ಸಂಪ್‌ಗೆ ಬಿದ್ದು ಮೃತಪಟ್ಟಿದ್ದಾರೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಾಗಿದೆ.ಹಳೆಯ ಪ್ರಕರಣಗಳು

ಸುಬ್ರಹ್ಮಣ್ಯಪುರದ ಗೌಡನಪಾಳ್ಯದಲ್ಲಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಒಂದರಲ್ಲಿ ಲಿಫ್ಟ್ ಅಳವಡಿಕೆಗಾಗಿ ತೆಗೆಯಲಾಗಿದ್ದ ಗುಂಡಿಗೆ ಬಿದ್ದು ಐದು ವರ್ಷದ ನಕುಲ್ ಎಂಬ ಬಾಲಕ ಮೃತಪಟ್ಟಿದ್ದ. ಭಾನುವಾರ (ಜು.1) ಈ ದುರ್ಘಟನೆ ನಡೆದಿತ್ತು.ಪೀಣ್ಯ ಬಳಿಯ ಕರಿಹೋಬನಹಳ್ಳಿಯಲ್ಲಿ ಭಾನುವಾರ (ಜು.1) ಕೀರ್ತೇಶ್ ಎಂಬ ಒಂದು ವರ್ಷದ ಗಂಡು ಮಗು ನೀರಿನ ಬಕೆಟ್‌ಗೆ ಬಿದ್ದು ಸಾವನ್ನಪ್ಪಿತ್ತು. ಪೀಣ್ಯ ಬಳಿಯ ಶಿವಪುರದಲ್ಲಿ ಜೂ.18ರಂದು ನಿಖಿಲ್ ಎಂಬ ಐದು ವರ್ಷದ ಬಾಲಕ ನಿರ್ಮಾಣ ಹಂತದ ಕಟ್ಟಡದಲ್ಲಿನ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದ.

 

ತಲಘಟ್ಟಪುರ ಸಮೀಪದ ಅಂಜನಾಪುರದಲ್ಲಿ ಮಾ.15ರಂದು ನಡೆದಿದ್ದ ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ಪುನೀತ್ ಎಂಬ ಮೂರೂವರೆ ವರ್ಷದ ಗಂಡು ಮಗು ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿತ್ತು.ಮರುಕಳಿಸುತ್ತಿರುವ ಘಟನೆಗಳು

ಕಟ್ಟಡ ಮಾಲೀಕರು ಮತ್ತು ಗುತ್ತಿಗೆದಾರರು ನೀರಿನ ತೊಟ್ಟಿಗಳ ಬಳಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣದಿಂದಲೂ ಅಥವಾ ಪೋಷಕರ ನಿರ್ಲಕ್ಷ್ಯದಿಂದಲೂ ನಗರದಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಕಳೆದ ಮೂರ‌್ನಾಲ್ಕು ತಿಂಗಳಲ್ಲಿ ಇದೇ ರೀತಿಯ ಅನೇಕ ಘಟನೆಗಳು ನಡೆದಿದ್ದು, ಹಲವು ಮುಗ್ಧ ಮಕ್ಕಳು ಸಾವನ್ನಪ್ಪಿವೆ.`ಕಟ್ಟಡ ನಿರ್ಮಾಣ ಮಾಡುವಾಗ ಸಂಪ್‌ಗಳ ಬಳಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಕಟ್ಟಡದ ಮಾಲೀಕರು ಹಾಗೂ ಗುತ್ತಿಗೆದಾರರ ಕರ್ತವ್ಯ. ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪಾಲಿಕೆ ಈವರೆಗೂ ಯಾವುದೇ ಮಾರ್ಗಸೂಚಿಗಳನ್ನು ರೂಪಿಸಿಲ್ಲ. ಮಕ್ಕಳು ಸಂಪ್‌ಗೆ ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿರುವುದರಿಂದ ಕೆಲ ನಿಯಮಾವಳಿಗಳನ್ನು ರೂಪಿಸುವ ಅಗತ್ಯವಿದೆ.

 

ಸಂಪ್‌ಗಳ ಬಳಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಕಟ್ಟಡಗಳ ಮಾಲೀಕರಿಗೆ ಹಾಗೂ ಗುತ್ತಿಗೆದಾರರಿಗೆ ಸಲಹೆ ಸೂಚನೆಗಳನ್ನು ನೀಡುವಂತೆ ವಲಯ ಮಟ್ಟದ ಎಂಜಿನಿಯರ್‌ಗಳಿಗೆ ಆದೇಶಿಸಲಾಗುವುದು~ ಎಂದು ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ `ಪ್ರಜಾವಾಣಿ~ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.