ನೀರಿನ ದರ: ಮರುಪರಿಶೀಲನೆ

7

ನೀರಿನ ದರ: ಮರುಪರಿಶೀಲನೆ

Published:
Updated:

ಗುಲ್ಬರ್ಗ: ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಪಾಲಿಕೆಯ ಸಹಮತವಿಲ್ಲದೇ ನೀರಿನ ದರ ಏರಿಕೆ ಮಾಡಿರುವ ಬಗ್ಗೆ ಮಹಾನಗರ ಪಾಲಿಕೆ ವಿಶೇಷ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.ಇಂದಿರಾ ಸ್ಮಾರಕ ಭವನದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ `ಸಮರ್ಪಕವಾಗಿ ನೀರು ನೀಡಲು ಮಂಡಳಿಯು ಶಕ್ತವಿಲ್ಲ. ಆದರೆ ಪಾಲಿಕೆ ಜೊತೆ ಮಾಡಿದ ಒಪ್ಪಂದವನ್ನು ಮುರಿದು ದರ ಏರಿಕೆ ಮಾಡಿದೆ. ಇದನ್ನು ಕೂಡಲೇ ಮರುಪರಿಶೀಲಿಸಬೇಕು.

 

ನೀರಿಲ್ಲದೇ ದುಡ್ಡು ನೀಡುವ ಸಂಕಷ್ಟಕ್ಕೆ ಜನತೆ ತುತ್ತಾಗಿದ್ದಾರೆ~ ಎಂದು ಸದಸ್ಯರು ಆಗ್ರಹಿಸಿದರು. ಸದಸ್ಯರ ಬೇಡಿಕೆಗೆ ಸ್ಪಂದಿಸಿದ ಮೇಯರ್ ಅಷ್ಫಕ್ ಚುಲ್‌ಬುಲ್, `ನೀರಿನ  ದರ ಮರುನಿಗದಿ ಮಾಡುವ ಬಗ್ಗೆ ಮಂಡಳಿ ಜೊತೆ ಮತ್ತೆ ಮಾತುಕತೆ ನಡೆಸಲಾಗುವುದು. ನಿಯಮಾವಳಿ ಅನುಸಾರ ನೀರಿನ ದರ ಪರಿಶೀಲಿಸಿ, ಇಳಿಸಲಾಗುವುದು. ಕೊಳಚೆ ಮತ್ತಿತರ ಹಿಂದುಳಿದ ಪ್ರದೇಶದ ಸಾರ್ವಜನಿಕ ನಳದ ನೀರಿನ ದರ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.ಉಪವಾಸ: ಈ ಮಧ್ಯೆ ಮಾತನಾಡಿದ ಅಹ್ಮದ್, `ಸಯ್ಯದ್ ಗಲ್ಲಿ, ರಾಜಾ ಕಾಲೋನಿ, ಮದೀನಾ ಕಾಲೋನಿ ಸೇರಿದಂತೆ ವಾರ್ಡ್ 5, 9,11ರಲ್ಲಿ ನೀರಿನ ತೀವ್ರ ಸಮಸ್ಯೆ ಇದೆ. ಎರಡು ದಿನದಿಂದ ನೀರು ಬಂದಿಲ್ಲ. ಹದಿನೈದು ದಿನಗಳ ಒಳಗೆ ಸಮಸ್ಯೆ ಪರಿಹರಿಸದಿದ್ದಲ್ಲಿ ಮಂಡಳಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ಕೂರುತ್ತೇನೆ. ಅಲ್ಲದೇ ನಗರದ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛವಾಗಿರಿಸಿಕೊಂಡು ಬಳಸಬೇಕು~ ಎಂದರು.ಪರಭಾರೆ: ಕೋಟನೂರ ಸಮೀಪದ ಘಾಬ್ರೆ ಲೇಔಟ್‌ನಲ್ಲಿ ಉದ್ಯಾನಕ್ಕೆ ಮೀಸಲಿರಿಸಿದ 1.5 ಎಕರೆ ಜಾಗೆಯನ್ನು ಒತ್ತುವರಿ ಮಾಡಿದ ಜನರಿಗೆ ಪಾಲಿಕೆಯು ಖಾತೆ ನೀಡಿದೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದು ಲಾಲ್ ಅಹ್ಮದ್ ಆಗ್ರಹಿಸಿದರು.ಪ್ರತಿಭಟನೆ: ಪಾಲಿಕೆಯು ಎರಡನೇ ಭಾಷೆಯಾಗಿ ಉರ್ದು ಅಂಗೀಕರಿಸಿರುವುದನ್ನು ವಿರೋಧಿಸಿ ಕೆಲವು ಕನ್ನಡ ಪರ ಸಂಘಟನೆಗಳು ಪಾಲಿಕೆ ಸಭೆ ನಡೆಯುತ್ತಿದ್ದ ಸಭಾಂಗಣದ ಮುಂಭಾಗ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry