ಬುಧವಾರ, ಜೂನ್ 3, 2020
27 °C

ನೀರಿನ ಬವಣೆ ನಿವಾರಣೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ತಾಲ್ಲೂಕಿನ ಅತಿ ದೊಡ್ಡ ಜಿ.ಪಂ. ಕ್ಷೇತ್ರವಾಗಿರುವ ಪರಶುರಾಂಪುರದಲ್ಲಿ ಕಳೆದ ಬಾರಿ ರಂಗಸ್ವಾಮಿ ಸದಸ್ಯರಾಗಿದ್ದರು. ಈಗ ಅವರ ಪತ್ನಿ ಸಣ್ಣತಿಮ್ಮಕ್ಕ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.ಮಹಿಳೆಯಾಗಿರುವ ಕಾರಣ ಪತಿ ರಂಗಸ್ವಾಮಿ ಮಾರ್ಗದರ್ಶನದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಭರವಸೆ ನೀಡುವ ಇವರು ‘ಪ್ರಜಾವಾಣಿ’ ಜತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.* ಕಳೆದ ಬಾರಿ ನಿಮ್ಮ ಪತಿ, ಈ ಬಾರಿ ನೀವು ಆಯ್ಕೆ ಆಗಿದ್ದೀರಿ ಏನೆನಿಸುತ್ತದೆ?

ಕಳೆದ ಬಾರಿ ಪರಶುರಾಂಪುರ ಕ್ಷೇತ್ರ ಪ್ರತಿಷ್ಠೆಯ ಕಣವಾಗಿತ್ತು. ಆದರೂ ನಮ್ಮ ಪತಿ ರಂಗಸ್ವಾಮಿ ಆಯ್ಕೆಯಾಗಿದ್ದರು. ಅವರು ಮಾಡಿರುವ ಜನಪರ ಕೆಲಸಗಳಿಂದ ಈ ಬಾರಿ ನನ್ನನ್ನು ಕ್ಷೇತ್ರದ ಜನತೆ ಆರಿಸಿದ್ದಾರೆ. ಸಹಜವಾಗಿಯೇ ಸಂತೋಷವಾಗಿದೆ. ಜನತೆ ನೀಡಿದ ಅಭಿಮಾನಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದೇ ನನ್ನ ಗುರಿಯಾಗಿದೆ.* ನಿಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಿಳಿದಿದ್ದೀರಾ?

ಖಂಡಿತ ತಿಳಿದಿದ್ದೇನೆ. ಕಳೆದ ಅವಧಿಯಲ್ಲಿ ನಮ್ಮ ಪತಿ ಪರಿಶಿಷ್ಟ ಕಾಲೊನಿಗೆ ಸಿಮೆಂಟ್ ರಸ್ತೆ, ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರಿಗೂ ಕೆಲಸ ನೀಡಿದ್ಧಾರೆ. ಈ ಬಾರಿ ಕುಡಿಯುವ ನೀರಿನ ಬವಣೆ ನೀಗಿಸಲು ನಾನು ಶ್ರಮ ವಹಿಸುತ್ತೇನೆ. ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವುದೇ ನನ್ನ ಉದ್ದೇಶ.* ಗಡಿ ಭಾಗದಲ್ಲಿರುವ ಈ ಕ್ಷೇತ್ರದ ಅಭಿವೃದ್ದಿಗೆ ನಿಮ್ಮ ಯೋಜನೆಗಳು ಏನು?

ಈಗಾಗಲೇ ಜನತೆಗೆ ಆಶ್ವಾಸನೆ ನೀಡಿದಂತೆ ಪರಶುರಾಂಪುರದ ಹತ್ತಿರ ಇರುವ ವೇದಾವತಿ ನದಿಗೆ ಬ್ಯಾರೇಜ್ ನಿರ್ಮಿಸಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಒತ್ತು ನೀಡಲಾಗುವುದು.

ಪ್ರತಿಯೊಂದು ಗ್ರಾಮದಲ್ಲಿಯೂ ವಸತಿ ಸಮಸ್ಯೆ ಇರುವುದರಿಂದ ಇದರ ಬಗ್ಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಹಾಗೂ ಶಾಲಾ ಕಾಂಪೌಂಡ್ ನಿರ್ಮಿಸಲು ಅಗತ್ಯ ಕ್ರಮಕ್ಕೆ ಮುಂದಾಗುತ್ತೇನೆ.* ಎರಡು ಅವಧಿಯಲ್ಲೂ ನಿಮ್ಮ ಕುಟುಂಬದವರ ಆಯ್ಕೆ ಗುಟ್ಟು ಏನು?

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನತೆ ನೀಡಿರುವ ತೀರ್ಪು ಇದಾಗಿದೆ. ಅಭಿವೃದ್ಧಿಯತ್ತ ಕ್ಷೇತ್ರವನ್ನು ಮುನ್ನಡೆಸಿದ ನಮ್ಮ ಪತಿ ಜನತೆಯ ವಿಶ್ವಾಸ ಗಳಿಸಿ ಈ ಬಾರಿ ನನ್ನ ಆಯ್ಕೆಗೆ ಸಹಕರಿಸಿದ್ದಾರೆ. ನನ್ನ ಪತಿಯವರ ಮೇಲಿಟ್ಟಿರುವ ಜನತೆಯ ಪ್ರೀತಿ, ಅಭಿಮಾನಕ್ಕೆ ಕುಂದು ಬಾರದ ರೀತಿಯಲ್ಲಿ ನಡೆದುಕೊಂಡು ಹೋಗುತ್ತೇನೆ. ಈ ಬಾರಿ ನನ್ನ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನಡೆದಿದ್ದು ಎಲ್ಲರಿಗೂ ತಿಳಿದ ವಿಷಯ. ಅಂತಹ ಪೈಪೋಟಿಯಲ್ಲೂ ನನ್ನ ಆಯ್ಕೆ ಮಾಡಿರುವ ಜನತೆಗೆ ಸದಾ ಆಭಾರಿಯಾಗಿರುತ್ತೇನೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.