ನೀರಿನ ಬಾಕಿ ತುಂಬಲು ನಿರಾಸಕ್ತಿ

ಭಾನುವಾರ, ಜೂಲೈ 21, 2019
22 °C

ನೀರಿನ ಬಾಕಿ ತುಂಬಲು ನಿರಾಸಕ್ತಿ

Published:
Updated:

ಹುಬ್ಬಳ್ಳಿ: ನೀರಿನ ಬಾಕಿಯನ್ನು ಬಡ್ಡಿರಹಿತವಾಗಿ ಒಂದೇ ಕಂತಿನಲ್ಲಿ ಪಾವತಿಸಲು ರಾಜ್ಯ ಸರ್ಕಾರ ನೀಡಿದ್ದ ಅವಕಾಶವನ್ನು ಬಳಸಿಕೊಳ್ಳಲು ಅವಳಿನಗರದ ಜನ ನಿರಾಸಕ್ತಿ ತೋರಿದ್ದಾರೆ. ಜಲಮಂಡಳಿಗೆ ಒಟ್ಟಾರೆ ರೂ. 44 ಕೋಟಿ ಬಾಕಿ ಬರಬೇಕಿದ್ದು, ಸರ್ಕಾರ ಒದಗಿಸಿದ್ದ ಮೂರು ತಿಂಗಳ ಕಾಲಾವಕಾಶದಲ್ಲಿ ಕೇವಲ ರೂ. 6.4 ಕೋಟಿ ಪಾವತಿಯಾಗಿದೆ.ಜಲಮಂಡಳಿಗೆ ಬರಬೇಕಿದ್ದ ಬಾಕಿ ಮೊತ್ತ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗಿದ್ದರಿಂದ `ಬಾಕಿ ತುಂಬಿದರೆ ಬಡ್ಡಿ ಮನ್ನಾ~ ಎಂಬ ಅವಕಾಶವನ್ನು ಗ್ರಾಹಕರಿಗೆ ಒದಗಿಸಗಿತ್ತು. ಮಾರ್ಚ್ ಒಂದರಿಂದ ಮೇ 31ರವರೆಗೆ ಬಡ್ಡಿರಹಿತ ಬಾಕಿ ತುಂಬಲು ಕಾಲಾವಕಾಶ ನೀಡಲಾಗಿತ್ತು. ಮೊದಲ ಎರಡು ತಿಂಗಳ ಅವಧಿಯಲ್ಲಿ ಈ ಯೋಜನೆಯತ್ತ ಸುಸ್ತಿದಾರರು ಕಣ್ಣೆತ್ತಿಯೂ ನೋಡಲಿಲ್ಲ. ಕೊನೆಯ ತಿಂಗಳಲ್ಲಿ ಮಾತ್ರ ದೊಡ್ಡ ಮೊತ್ತದ ಬಾಕಿ ವಸೂಲಾಗಿದೆ.ಮೇ ತಿಂಗಳಲ್ಲೇ ರೂ. 4 ಕೋಟಿಯಷ್ಟು ಬಾಕಿ ಸಂಗ್ರಹವಾಗಿದೆ. `ಅವಧಿಯೊಳಗೆ ಬಾಕಿ ತುಂಬದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುವುದು ಎಂಬ ಭಯವೇ ಕೊನೆಯ ತಿಂಗಳಲ್ಲಿ ಹೆಚ್ಚಿನ ಮೊತ್ತ ಸಂಗ್ರಹ ವಾಗಲು ಕಾರಣವಾಗಿದೆ~ ಎಂದು ಅಧಿಕಾರಿಗಳು ವಿಶ್ಲೇಷಿಸುತ್ತಾರೆ.ಹುಬ್ಬಳ್ಳಿ-ಧಾರವಾಡಗಳಲ್ಲಿ ಒಟ್ಟಾರೆ 1.07 ಲಕ್ಷ ನಳದ ಸಂಪರ್ಕಗಳಿವೆ. ಈ ಪೈಕಿ 34 ಸಾವಿರಕ್ಕೂ ಅಧಿಕ ಸಾವಿರ ಸಂಪರ್ಕಗಳು ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿವೆ. ರೂ. ಒಂದು ಸಾವಿರದಿಂದ ರೂ. 1.5ಲಕ್ಷದವರೆಗೆ ಬಾಕಿ ಉಳಿಸಿಕೊಂಡ ಸುಸ್ತಿದಾರರು ಅವಳಿನಗರದಲ್ಲಿ ಇದ್ದಾರೆ. ಆ ಪೈಕಿ ಕೆಲವು ಜನ ಸುಸ್ತಿದಾರರು ಬಾಕಿ ಚುಕ್ತಾ ಮಾಡಿದ್ದಾರೆ.`ಸಾಕಷ್ಟು ಪ್ರಚಾರ ಕಾರ್ಯ ಕೈಗೊಳ್ಳಲಾಗಿತ್ತು. ಕೆಲವು ಪ್ರದೇಶಗಳಲ್ಲಿ ವಿಶೇಷ ಕೌಂಟರ್‌ಗಳನ್ನೂ ತೆರೆಯಲಾಗಿತ್ತು. ಹೀಗಿದ್ದೂ ನಿರೀಕ್ಷಿತ ಪ್ರಮಾಣದಲ್ಲಿ ಬಾಕಿ ಸಂಗ್ರಹವಾಗಿಲ್ಲ~ ಎಂದು ಜಲಮಂಡಳಿ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳಾದ ಕೆ.ಪಿ. ಜಯರಾಂ ಮತ್ತು ಎಸ್.ಬಿ. ಸಿದ್ದನಾಯಕ ವಿಷಾದ ವ್ಯಕ್ತ ಪಡಿಸುತ್ತಾರೆ.ಜೂನ್ ಒಂದರಿಂದ ಮೂರು ತಿಂಗಳ ಅವಧಿಯಲ್ಲಿ ಒಂದೇ ಕಂತಿನಲ್ಲಿ ಬಾಕಿಯನ್ನು ಪಾವತಿಸಿದರೆ ಬಡ್ಡಿ ಯಲ್ಲಿ ಶೇ. 50ರಷ್ಟು ರಿಯಾಯ್ತಿ ನೀಡುವ ಯೋಜನೆ ಯನ್ನು ರಾಜ್ಯ ಸರ್ಕಾರ ಈಗ ಜಾರಿಗೆ ತಂದಿದೆ. ಪಾಲಿಕೆ ಸದಸ್ಯರು ಬಡ್ಡಿರಹಿತ ಕಾಲಾವಕಾಶವನ್ನೇ ಇನ್ನೂ ಮೂರು ತಿಂಗಳ ಅವಧಿಗೆ ಮುಂದುವರಿಸಬೇಕು ಎಂಬ ಒತ್ತಾಯ ಮಾಡಿದ್ದರು. ಆ ಬೇಡಿಕೆಗೆ ಇನ್ನೂ ಪುರಸ್ಕಾರ ಸಿಕ್ಕಿಲ್ಲ.ಕೊಳಚೆ ಪ್ರದೇಶದ ನಿವಾಸಿಗಳೇ ಅಧಿಕ ಪ್ರಮಾಣದ ಬಾಕಿಯನ್ನು ಉಳಿಸಿಕೊಂಡಿದ್ದಾರೆ. ಅವರಿಗೆ ಸಾಕಷ್ಟು ತಿಳಿವಳಿಕೆ ನೀಡಿ, ಬಾಕಿಯನ್ನು ತುಂಬುವಂತೆ ಪ್ರೇರೇಪಿಸಲು ಇನ್ನಷ್ಟು ಕಾಲಾವಕಾಶಬೇಕು ಎಂಬುದು ಬಹುತೇಕ ಪಾಲಿಕೆ ಸದಸ್ಯರ ಅಭಿಪ್ರಾಯವಾಗಿದೆ. ಹಳೇ ಹುಬ್ಬಳ್ಳಿ ಪ್ರದೇಶದಲ್ಲೇ ನೀರಿನ ಬಾಕಿ ದೊಡ್ಡ ಪ್ರಮಾಣದಲ್ಲಿ ಉಳಿದುಕೊಂಡಿದೆ.ಬೇಸಿಗೆ ಕಾಲದಲ್ಲೇ ಈ ಯೋಜನೆ ಜಾರಿಗೆ ಬಂತು. ಆ ಅವಧಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದರಿಂದ ಬಹಳಷ್ಟು ಜನ ಬಾಕಿ ತುಂಬಲಿಲ್ಲ ಎಂದು ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕರೂ ಆದ, ಹಾಲಿ ಸದಸ್ಯ ಗಣೇಶ ಟಗರಗುಂಟಿ ಹೇಳುತ್ತಾರೆ.`ಗೃಹಬಳಕೆಗೆ ಮಾಸಿಕ ಕನಿಷ್ಠ ರೂ. 90 ದರ ನಿಗದಿಪಡಿ ಸಲಾಗಿದೆ. ಅದೇ ಅನ್ಯ ಉದ್ದೇಶದ ಬಳಕೆಗೆ ಕನಿಷ್ಠ ದರ ರೂ. 180 ವಿಧಿಸ ಲಾಗುತ್ತದೆ. ಹೆಚ್ಚುವರಿ ನೀರು ಬಳಕೆ ಮಾಡಿ ದರೆ ಅಧಿಕ ಮೊತ್ತವನ್ನು ತೆರಬೇಕಾಗುತ್ತದೆ. ಅಧಿಕ ನೀರನ್ನು ಬಳಸಿಕೊಂಡೂ ವರ್ಷಗಟ್ಟಲೆ ಬಾಕಿ ಉಳಿಸಿ ಕೊಂಡು ಬರಲಾಗಿದೆ~ ಎಂದು ಕೆ.ಪಿ. ಜಯರಾಂ ವಿವರಿಸುತ್ತಾರೆ.ಹಲವು ಜನ ಗ್ರಾಹಕರು ಕಳೆದ 20 ವರ್ಷಗಳಿಂದ ಬಾಕಿಯನ್ನು ತುಂಬದೆ ಹಾಗೇ ಉಳಿಸಿಕೊಂಡಿದ್ದಾರೆ. ಮತ್ತೆ ಹಲವು ಪ್ರಕರಣಗಳಲ್ಲಿ ವಿವಾದವಿದ್ದು, ಬಗೆಹರಿಯದೆ ಕಗ್ಗಂಟಾಗಿ ಹಾಗೇ ಉಳಿದಿದೆ. ಕೆಲವು ಪ್ರಕರಣಗಳು ಕೋರ್ಟ್ ಕಟ್ಟೆಯನ್ನೂ ಏರಿವೆ. ಎಲ್ಲವೂ ಬಾಕಿಯ ಹೊರೆಯನ್ನು ಹೆಚ್ಚಿಸಿವೆ. ಧಾರವಾಡದಲ್ಲಿ ಬಾಕಿ ಉಳಿಸಿಕೊಂಡಿರುವ ಜನರ ಸಂಖ್ಯೆ ಕಡಿಮೆಯಿದ್ದರೂ ಉಳಿದ ಮೊತ್ತವನ್ನು ತುಂಬಲು ಸುಸ್ತಿದಾರರು ಹಿಂದೇಟು ಹಾಕುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry