ನೀರಿನ ಬಿಲ್‌ಗೆ ಸ್ಮಾರ್ಟ್ ಕಾರ್ಡ್

7

ನೀರಿನ ಬಿಲ್‌ಗೆ ಸ್ಮಾರ್ಟ್ ಕಾರ್ಡ್

Published:
Updated:

ಮಂಗಳೂರು: ‘ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಿಲ್ ಸಂಗ್ರಹದಲ್ಲಿ ಪಾರದರ್ಶಕತೆ ಜಾರಿಗೆ ತರಲು ಸ್ಮಾರ್ಟ್‌ಕಾರ್ಡ್ ಬಳಕೆಗೆ ಪಾಲಿಕೆ ಚಿಂತನೆ ನಡೆಸಿದೆ’ ಎಂದು ಮೇಯರ್ ರಜನಿ ದುಗ್ಗಣ್ಣ ತಿಳಿಸಿದರು.ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೀರಿನ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಲೋಪಗಳಿರುವುದು ಕಂಡುಬಂದಿದೆ. ಸ್ಮಾರ್ಟ್‌ಕಾರ್ಡ್ ಬಳಕೆ ಜಾರಿಗೆ ತಂದರೆ ಬಿಲ್ ಸಂಗ್ರಹಗಾರರು ಪ್ರತಿಮನೆಗೆ ಭೇಟಿ ನೀಡಿಯೇ ಬಿಲ್ ರೀಡಿಂಗ್ ನಡೆಸಬೇಕಾಗುತ್ತದೆ. ಈ ವ್ಯವಸ್ಥೆಯಲ್ಲಿ ಬಿಲ್ ರೀಡಿಂಗ್ ದಾಖಲಾದ ತಕ್ಷಣ ಮನೆಯ ಯಜಮಾನರ ಮೊಬೈಲ್‌ಗೂ ಎಸ್‌ಎಂಎಸ್ ರವಾನೆ ವ್ಯವಸ್ಥೆ ಇದೆ. ಈ ಯೋಜನೆಯನ್ನು ಅಚ್ಚುಕಟ್ಟಾಗಿ ಜಾರಿಗೆ ತರುವ ಹೊಣೆಯನ್ನು ದೊಡ್ಡ ಕಂಪೆನಿಗೆ ವಹಿಸಿಕೊಡಲು ಪಾಲಿಕೆ ನಿರ್ಧರಿಸಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ’ ಎಂದರು.ಬಸ್ ನಿಲ್ದಾಣಕ್ಕೆ 5 ಕೋಟಿ: ಪಂಪ್‌ವೆಲ್ ಬಸ್ ನಿಲ್ದಾಣಕ್ಕಾಗಿ ಭೂಸ್ವಾಧೀನ ಸಂಬಂಧ ಈಗಾಗಲೇ ರೂ. 8.23 ಕೋಟಿ ಪಾವತಿಸಲಾಗಿದ್ದು, 7 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇನ್ನೂ 11 ಎಕರೆ ಭೂಮಿ ಅಗತ್ಯವಿದ್ದು, ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ರೂ. 5 ಕೋಟಿ ಕಾದಿರಿಸಲಾಗಿದೆ. ಬಾಕಿ ಹಣವನ್ನು ರಾಜ್ಯ ಹಣಕಾಸು ನಿಧಿಯಿಂದ (ಎಸ್‌ಎಫ್‌ಸಿ) ಬಳಸಿಕೊಳ್ಳಲಾಗುವುದು’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ ತಿಳಿಸಿದರು.ವಿದ್ಯುತ್ ಉಳಿತಾಯ: ‘ವಿದ್ಯುತ್ ಉಳಿಸುವ ನಿಟ್ಟಿನಲ್ಲಿ ಸೋಡಿಯಂ ದಾರಿದೀಪದ ಬದಲು ಸಿಎಫ್‌ಎಲ್‌ಸಿ ಬಳಸಲು ಪಾಲಿಕೆ ನಿರ್ಧರಿಸಿದೆ. ಉಪಯೋಗಿಸದೇ ಇರುವ ಕೊಳವೆ ಬಾವಿಗಳನ್ನು ಮುಚ್ಚಲು, ರೇಚಕ ಸ್ಥಾವರಗಳ ಹಳೆಯಂತ್ರ ಬದಲಾಯಿಸಲು, ನೀರು ಸರಬರಾಜಿನ ಪಂಪಿಂಗ್ ಸ್ಥಾವರಗಳಲ್ಲಿ ಕೆಪಾಸಿಟರ್ ಹಾಗೂ ಪವರ್ ಫ್ಯಾಕ್ಟರ್ ಅಳವಡಿಸಲು, ಎಲ್ಲ ದಾರಿದೀಪಗಳಿಗೂ ತುರ್ತುಮಾಪಕ ಅಳವಡಿಸಲು, ಟ್ರಾನ್ಸ್‌ಫಾರ್ಮರ್‌ಗಳ ಜೆಒಎಸ್‌ಗಳನ್ನು ಸುಸ್ಥಿತಿಯಲ್ಲಿಡಲು’ ಕ್ರಮ ಕೈಗೊಳ್ಳಲಾಗಿದೆ’ ಎಂದು ಮೇಯರ್ ವಿವರಿಸಿದರು.‘ಪ್ರಸಕ್ತ ಸಾಲಿನಲ್ಲಿ ರೂ. 27.8 ಕೋಟಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಇದ್ದು, ಜನವರಿ ಅಂತ್ಯದವರೆಗೆ ರೂ. 23.26 ಕೋಟಿ ತೆರಿಗೆ ಸಂಗ್ರವಾಗಿದೆ’ ಎಂದು ಮಾಹಿತಿ ನೀಡಿದರು.ಉಪ ಮೇಯರ್ ರಾಜೇಂದ್ರ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಾಂತಾ, ರೂಪಾ ಡಿ.ಬಂಗೇರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry