ನೀರಿನ ರಾಜಕೀಯ

7

ನೀರಿನ ರಾಜಕೀಯ

Published:
Updated:

ಬೆಂಗಳೂರು: `ಕಾವೇರಿ ನದಿ ನೀರಿನ ವಿಚಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಕುತಂತ್ರದ ರಾಜಕಾರಣ ಮಾಡುತ್ತಿವೆ~ ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.ನಗರದ ಎಚ್.ಎಸ್.ಆರ್ ಲೇಔಟ್‌ನಲ್ಲಿ ಬುಧವಾರ ವಾಸನ್ ಆರೋಗ್ಯ ಸಂಸ್ಥೆಯ ವಿವಿಧ ಶಾಖೆಗಳ ಉದ್ಘಾಟನಾ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.`ಕಾವೇರಿ ನದಿ ನೀರು ಬಿಡುಗಡೆಯ ವಿಚಾರವಾಗಿ ನಡೆದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ವಿರೋಧಪಕ್ಷಗಳ ನಾಯಕರು ತಮಿಳುನಾಡಿಗೆ ಅಗತ್ಯ ಪ್ರಮಾಣದ ನೀರು ಬಿಡುಗಡೆ ಮಾಡಲು ಸಮ್ಮತಿಸಿದ್ದರು. ಆದರೆ, ಸಭೆಯಿಂದ ಹೊರಬಂದು ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ನೀರಿನ ವಿಚಾರದಲ್ಲಿ ವಿರೋಧಪಕ್ಷಗಳ ನಾಯಕರು ರಾಜಕಾರಣಕ್ಕೆ ಮುಂದಾಗಿದ್ದಾರೆ~ ಎಂದು ಅವರು ದೂರಿದರು.`ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಲಿಸಲು ಸದ್ಯ ತಾತ್ಕಾಲಿಕವಾಗಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಸಮಸ್ಯೆಯ ಪರಿಹಾರಕ್ಕೆ ಇರುವ ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ನ್ಯಾಯಾಲಯದ ಆದೇಶ ಪಾಲಿಸುತ್ತಿರುವ ಸರ್ಕಾರದ ಕ್ರಮವನ್ನು ಟೀಕಿಸುವುದು ಸರಿಯಲ್ಲ~ ಎಂದರು.`ನದಿ ನೀರಿನ ವಿಚಾರದಲ್ಲಿ ರಾಜಕಾರಣ ಮಾಡಿದರೆ ಜನತೆ ಕ್ಷಮಿಸುವುದಿಲ್ಲ. ನಾವು ಇಂದು ಏನು ಮಾಡುತ್ತಿದ್ದೇವೆ ಎಂಬ ಸತ್ಯ ಭವಿಷ್ಯದಲ್ಲಿ ಜನತೆಗೆ ತಿಳಿಸಲಿದೆ. ಯಾರು ತಪ್ಪು ಮಾಡಿದರು ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗಗೊಳ್ಳಲಿದೆ~ ಎಂದು ಅವರು ಹೇಳಿದರು.`ಕಾವೇರಿ ನದಿ ಪ್ರಾಧಿಕಾರದ ಸಭೆಯ ನಿರ್ಣಯವನ್ನು ವಿರೋಧಿ ಸಭೆಯಿಂದ ಹೊರಬಂದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನಡೆಯನ್ನು ಪ್ರಶಂಸಿಸಿದ್ದ ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಈಗ ಸರ್ಕಾರವನ್ನು ದೂರುತ್ತಿದ್ದಾರೆ. ಸುಪ್ರೀಂಕೋಟ್‌ನ ಆದೇಶವನ್ನು ಸರ್ಕಾರ ಪಾಲಿಸುತ್ತಿದೆ ಎಂಬುದನ್ನು ವಿರೋಧಪಕ್ಷದ ನಾಯಕರು ಅರಿಯಬೇಕು. ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರದ ಸಚಿವರು ಕಾವೇರಿ ವಿಚಾರದಲ್ಲಿ ಮೌನವಹಿಸುತ್ತಿರುವುದೇಕೆ~ ಎಂದು ಅವರು ಪ್ರಶ್ನಿಸಿದರು.ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, `ಸಾರ್ವಜನಿಕರ ಆರೋಗ್ಯ ಕಾಪಾಡುವುದು ಸರ್ಕಾರಿ ಆಸ್ಪತ್ರೆಗಳ ಜವಾಬ್ದಾರಿ. ಆದರೆ, ಖಾಸಗಿ ಆಸ್ಪತ್ರೆಗಳು ಉತ್ತಮವಾದ ಆರೋಗ್ಯ ಸೇವೆಯ ಮೂಲಕ ಹೆಸರಾಗಿವೆ. ಸರ್ಕಾರಿ ಕ್ಷೇತ್ರಕ್ಕಿಂತ ಉತ್ತಮ ರೀತಿಯ ಸೇವೆಯನ್ನು ಅವುಗಳು ನೀಡುತ್ತಿವೆ~ ಎಂದು ಅವರು ನುಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry