ಶನಿವಾರ, ಜನವರಿ 25, 2020
29 °C
ರಾಷ್ಟ್ರೀಯ ಪ್ರಾಯೋಗಿಕ ಕುಡಿಯುವ ನೀರು ಭದ್ರತಾ ಯೋಜನೆ

ನೀರಿನ ಲಭ್ಯತೆ ಅಳೆಯಲು ಮಾಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿನ ಲಭ್ಯತೆ ಅಳೆಯಲು ಮಾಪನ

ಕೋಲಾರ: ರಾಷ್ಟ್ರೀಯ  ಪ್ರಾಯೋಗಿಕ ಕುಡಿಯುವ ನೀರು ಭದ್ರತಾ ಯೋಜ­ನೆಗೆ ಆಯ್ಕೆಯಾಗಿರುವ ಜಿಲ್ಲೆಯ ಮುಳಬಾಗಲು ತಾಲ್ಲೂಕಿನಲ್ಲಿ ನೀರಿನ ಲಭ್ಯತೆಯನ್ನು ಅಳೆಯುವ ಸಲು­ವಾಗಿಯೇ ತಾಲ್ಲೂಕಿನ ಎಲ್ಲ 30  ಗ್ರಾಮ ಪಂಚಾಯತಿಗಳ 186 ಕೊಳವೆ­ಬಾವಿಗಳಿಗೆ ಮಾಪಕ ವ್ಯವಸ್ಥೆ­ಯನ್ನು ಅಳವಡಿಸಲಾಗಿದೆ ಎಂದು ಯೋಜನೆ ಅನುಷ್ಠಾನ ತಂಡದ ಮುಖ್ಯಸ್ಥ ಎಂ,ಎಸ್.ರವಿಪ್ರಕಾಶ್‌ ತಿಳಿಸಿದರು.ತಾಲ್ಲೂಕಿನ ಐದು ಗ್ರಾಮ ಪಂಚಾ­ಯತಿಗಳಲ್ಲಿ ಯೋಜನೆ ಅನುಷ್ಠಾನದ ಕುರಿತು ಜಿಲ್ಲಾ ಪಂಚಾಯತಿ ವತಿ­ಯಿಂದ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮ ಪ್ರವಾಸದ ಸಂದರ್ಭದಲ್ಲಿ ಅವರು ಊರುಕುಂಟೆ ಮಿಟ್ಟೂರು ಕೆರೆಯ ಕೊಳವೆಬಾವಿಗೆ ಅಳವಡಿಸಿದ ಮಾಪಕದ ವಿವರಣೆ ನೀಡಿದರು.ಕೊಳವೆಬಾವಿಗೆ ಮೋಟರ್ ಚಾಲನೆ­­ಗೊಳ್ಳುವ ಮುನ್ನ ಮತ್ತು  ಚಾಲನೆ­ಗೊಳ್ಳುವ ಸಂದರ್ಭದಲ್ಲಿ ಕೊಳವೆ­­ಬಾವಿಯಲ್ಲಿ ನೀರಿನ ಮಟ್ಟ­ವನ್ನು ಅಳೆಯಲಾಗುವುದು.ನೀರು ಯಾವ ವೇಗದಲ್ಲಿ ಎಷ್ಟು ದೊರಕುತ್ತದೆ. 100 ಲೀಟರ್ ಡ್ರಂ ತುಂಬಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಪ್ರತಿ 15 ದಿನಕ್ಕೊಮ್ಕೆ ಪರಿಶೀಲಿಸಲಾಗುವುದು. ಕೊಳವೆಬಾವಿಯಲ್ಲಿ ನೀರು ಹೆಚ್ಚಾಗು­ತ್ತದೆಯೇ, ಕಡಿಮೆಯಾಗುತ್ತದೆಯೇ ಎಂಬ ಸ್ಪಷ್ಟ ಚಿತ್ರಣ ದೊರಕುವುದ­ರಿಂದ ನೀರು ಪೂರೈಕೆಯ ಹೊಸ ಯೋಜನೆಗಳ ಅನುಷ್ಠಾನಕ್ಕೆ ಅನು­ಕೂಲ­ಕರ­ವಾಗುತ್ತದೆ ಎಂದರು.ದಿನಕ್ಕೆ 28 ಲೀಟರ್ ನೀರು: ಮಾನದಂಡದ ಪ್ರಕಾರ ತಾಲ್ಲೂಕಿನ ಜನರಿಗೆ ದಿನವೊಂದಕ್ಕೆ ತಲಾ 55ಲೀ. ನೀರನ್ನು ಪೂರೈಸಬೇಕು. ಆದರೆ ಈಗ ಕೇವಲ 28 ಲೀ. ನೀರನ್ನಷ್ಟೇ ಪೂರೈಸ­ಲಾಗುತ್ತಿದೆ. ಈ ಪ್ರಮಾಣವನ್ನು ಹೆಚ್ಚಿಸಬೇಕಾದರೆ ಅಂತರ್ಜಲ ಮರು­ಪೂರಣ ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಕೆರೆ ಅಂಗಳದಲ್ಲಿ ನೀರು ಮರುಪೂರಣ ತೊಟ್ಟಿಗಳನ್ನು ನಿರ್ಮಿ­ಸುವ ಕಾಮಗಾರಿಗಳನ್ನೂ ನಡೆಸ­ಲಾಗುತ್ತಿದೆ ಎಂದರು.ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 50 ರೂಪಾಯಿಗೆ 10 ಸಾವಿರ ಲೀ. ನೀರನ್ನು ಪ್ರತಿ ಮನೆಗೂ ನೀಡುವ ಅದ್ಭುತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಷ್ಟು ದೊಡ್ಡ­ಮಟ್ಟದಲ್ಲಿ ಅಲ್ಲವಾದರೂ ತಾಲ್ಲೂಕಿ­ನಲ್ಲೂ ಅಂಥದೊಂದು ವ್ಯವಸ್ಥೆಯನ್ನು ರೂಪಿಸುವ ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಅಧಿಕಾರಿ–ಪ್ರತಿನಿಧಿಗಳನ್ನು ಅಲ್ಲಿಗೆ ಅಧ್ಯಯನದ ಸಲುವಾಗಿ ಕರೆದೊಯ್ಯ­ಲಾಗುವುದು ಎಂದು ಅವರು ಮಾಹಿತಿ ನೀಡಿದರು.ಟಿ.ಅಗರ ಕೆರೆಯ ಅಂಗಳದಲ್ಲಿ 100 ಮೀ. ಅಗಲ, 100 ಮೀ ಉದ್ದ ಹಾಗೂ 1 ಮೀಟರ್ ಆಳದ ಹೊಂಡ­ಗಳನ್ನು ನಿರ್ಮಿಸಲಾಗುತ್ತಿದೆ. ಸುತ್ತಲಿನ ರಾಜಕಾಲುವೆಗಳ ನೀರೆಲ್ಲರೂ ಈ ಹೊಂಡದಲ್ಲಿ ಬಂದು ಇಂಗುವ ಮೂಲಕ ಸುತ್ತಮುತ್ತಲಿನ ಕೊಳವೆ­ಬಾವಿಗಳ ಅಂತರ್ಜಲ ಮರುಪೂರಣ­ವಾಗುತ್ತದೆ. ಇಂಥ ಸುಸ್ಥಿರ ಅಭಿ­ವೃದ್ಧಿ ಮಾದರಿಗಳನ್ನು ಅನು­ಸರಿಸಿಯೇ ನೀರಿನ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ ಎಂದರು.ಕುಪ್ಪಂ ಪಾಳ್ಯ: ತಾಲ್ಲೂಕಿನ ಗಡಿ ಗ್ರಾಮವಾದ ಮೋತಕಪಲ್ಲಿ ಗ್ರಾಮ ಪಂಚಾಯಿತಿಯ ಕುಪ್ಪಂಪಾಳ್ಯದ ಎಲ್ಲ 90 ಮನೆಗಳಲ್ಲೂ ಶೌಚಾಲಯವನ್ನು ನಿರ್ಮಿಸಲಾಗಿದೆ. ಇದೇ ರೀತಿ ಇಡೀ ತಾಲ್ಲೂಕಿನಲ್ಲಿ ಎಲ್ಲರಿಗೂ ಶೌಚಾ­ಲಯ ನಿರ್ಮಿಸುವ ಕಾರ್ಯಕ್ರಮವೂ ಭರದಿಂದ ನಡೆದಿದೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯ­ನಿರ್ವಹಣಾಧಿಕಾರಿ ಅರುಣಕುಮಾರ್ ತಿಳಿಸಿದರು.ಬಳಕೆಗೆ ಆದ್ಯತೆ: ಇದುವರೆಗೂ ಶೌಚಾಲಯಗಳ ನಿರ್ಮಾಣದ ಕಡೆಗೆ ಗಮನ ಹರಿಸಲಾಗುತ್ತಿತ್ತು. ಆದರೆ ಈಗ ನಿರ್ಮಾಣಗೊಂಡ ಶೌಚಾ­ಲಯಗಳ ಬಳಕೆಯ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಬಹಳಷ್ಟು ಮಂದಿ ಶೌಚಾಲಯಗಳನ್ನು ನಿರ್ಮಿಸಿ ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದರು.ನಿಜವಾದ ಉದ್ದೇಶಕ್ಕೆ ಬಳಸಿದರೆ ಮಾತ್ರ ಅನುದಾನವನ್ನು ಬಿಡುಗಡೆ ಮಾಡುವ ವ್ಯವಸ್ಥೆಯನ್ನು ರೂಪಿಸ­ಲಾಗಿದೆ. ಶೌಚಾಲಯವನ್ನು ನಿರ್ಮಿ­ಸಿದ ಬಳಿಕ ಉದ್ಯೋಗಖಾತ್ರಿ ಯೋಜನೆ ಅನುದಾನವಾದ ₨ 4700 ನೀಡಲಾಗುವುದು. ನಂತರ, ಶೌಚಾ­ಲಯ ಬಳಕೆಯನ್ನು ಪರಿಶೀಲಿಸಿ ನಿರ್ಮಲ ಭಾರತ ಅಭಿಯಾನದ ಅನುದಾನ ₨ 4500 ಫಲಾನುಭವಿ­ಗಳ ಬ್ಯಾಂಕ್ ಖಾತೆಗೆ ನೀಡಲಾಗು­ವುದು ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)