ನೀರಿನ ವಾಲ್ವ್ ಹಾಳು ಮಾಡಬೇಡಿ

7

ನೀರಿನ ವಾಲ್ವ್ ಹಾಳು ಮಾಡಬೇಡಿ

Published:
Updated:

ಚನ್ನಗಿರಿ: ತಾಲ್ಲೂಕಿನ ರೈತರ ಬಹುದಿನದ ಕನಸಾದ ್ಙ 102 ಕೋಟಿ ವೆಚ್ಚದ ಉಬ್ರಾಣಿ -ಅಮೃತಾಪುರ ಏತ ನೀರಾವರಿ ಯೋಜನೆಯನ್ನು ಈಗಾಗಲೇ ರೈತರಿಗೆ ಲೋಕಾರ್ಪಣೆ ಮಾಡಲಾಗಿದೆ. ಇದರಿಂದ ತಾಲ್ಲೂಕಿನ 89 ಕೆರೆಗಳಿಗೆ ಭದ್ರಾ ನದಿಯ ನೀರು ಹರಿದು ಬರಲಿದೆ. ರೈತರು ತಾಳ್ಮೆಯಿಂದ ಇರಬೇಕು. ಅನಧಿಕೃತವಾಗಿ ನೀರನ್ನು ಪಡೆದುಕೊಳ್ಳಲು ಬೃಹತ್ ನೀರಿನ ವಾಲ್ವ್‌ಗಳನ್ನು ಹಾಳು ಮಾಡಬಾರದು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನವಿ ಮಾಡಿದರು.ತಾಲ್ಲೂಕಿನ ಉಬ್ರಾಣಿ ಏತ ನೀರಾವರಿ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿರುವ ಗ್ರಾಮಗಳ ಕೆರೆಗಳಿಗೆ ಶುಕ್ರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ  ನಡೆಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಉಬ್ರಾಣಿ, ಕಗ್ಗಿ, ಮಲಹಾಳ್ ಹಾಗೂ ಮೇದುಗೊಂಡನಹಳ್ಳಿ ಸೀರಿಸ್‌ನ 89 ಕೆರೆಗಳಿಗೆ ವರ್ಷದ 245 ದಿನ ಭದ್ರಾ ನದಿಯ ನೀರನ್ನು ಹರಿಸಲಾಗುವುದು. ಬೇಸಿಗೆ ಆರಂಭವಾಗುತ್ತಿರುವುದರಿಂದ ಮತ್ತೆ ಮಳೆಗಾಲ ಪ್ರಾರಂಭವಾಗುವ ತನಕ ನೀರನ್ನು ಕೆರೆಗಳಿಗೆ ಹಾಯಿಸುವುದಿಲ್ಲ. ಆದರೆ ತಾಲ್ಲೂಕಿನ ಶಂಕರಿಪುರ, ಗೌರಾಪುರ ಹಾಗೂ ಕಲ್ಕೆರೆ ಗ್ರಾಮಗಳಲ್ಲಿ ಬೃಹತ್ ಪ್ರಮಾಣದ ನೀರಿನ ವಾಲ್ವ್‌ಗಳನ್ನು ಹಾಳು ಮಾಡಲಾಗಿದೆ.

 

ಕೆಲವು ರೈತರು ಅನಧಿಕೃತವಾಗಿ ನೀರನ್ನು ತಮ್ಮ ಜಮೀನುಗಳಿಗೆ ಹಾಗೂ ತೋಟಗಳಿಗೆ ಹಾಯಿಸಿಕೊಳ್ಳುತ್ತಿರುವುದು  ಕಂಡುಬಂದಿದೆ. ಹೀಗೆ ವಾಲ್ವ್‌ಗಳನ್ನು ಹಾಳು ಮಾಡುವುದರಿಂದ ಮುಂದಿನ ಕೆರೆಗಳಿಗೆ ನೀರು ಹರಿದು ಹೋಗುವುದಿಲ್ಲ.  ಮುಂದೆ ಇದೇ ರೀತಿ ಘಟನೆಗಳು ಪುನರಾವರ್ತನೆಯಾದರೆ ಅಂತಹವರ ವಿರುದ್ಧ ಪೊಲೀಸ್ ಕೇಸನ್ನು ಇಲಾಖೆಯವರು ದಾಖಲಿಸುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರು ಪೈಪ್ ಅಥವಾ ನೀರಿನ ವಾಲ್ವ್‌ಗಳನ್ನು ಹಾಳು ಮಾಡಬಾರದೆಂದು ವಿನಂತಿ ಮಾಡಿಕೊಂಡರು.ನೀರಾವರಿ ನಿಗಮದ ಎಇಇ ಚಂದ್ರಶೇಖರಪ್ಪ, ಬಾಲರಾಜ್, ಮಹೇಶ್, ರಾಮಪ್ಪ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಿ.ಆರ್. ತಿಪ್ಪೇಶಪ್ಪ, ಶಂಕರಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry