ನೀರಿನ ಸಮಸ್ಯೆ: ಎಂಪಿಆರ್ ಸಿಡಿಮಿಡಿ

7

ನೀರಿನ ಸಮಸ್ಯೆ: ಎಂಪಿಆರ್ ಸಿಡಿಮಿಡಿ

Published:
Updated:
ನೀರಿನ ಸಮಸ್ಯೆ: ಎಂಪಿಆರ್ ಸಿಡಿಮಿಡಿ

ಹೊನ್ನಾಳಿ: ತಾಲ್ಲೂಕಿನ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ನೀವೇನು ಕೆಲಸ ಮಾಡುತ್ತಿದ್ದೀರಿ ಎಂದು ಜಿ.ಪಂ. ಎಇಇ ತಿಮ್ಮಪ್ಪ ಮತ್ತು ಎಇ ಜಯಪ್ರಕಾಶ್ ಅವರನ್ನು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ತರಾಟೆಗೆ ತೆಗೆದುಕೊಂಡರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಕುಡಿಯುವ ನೀರು ಕುರಿತಂತೆ ನಡೆದ ತುರ್ತುಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಕುಂಬಳೂರು ಗ್ರಾಮದಲ್ಲಿ ಈಚೆಗೆ ಕುಡಿಯುವ ನೀರು ತರಲು ತೆರಳಿದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈ ಘಟನೆ ನಡೆದ ನಂತರ ನೀವು ಗ್ರಾಮಕ್ಕೆ ತೆರಳಿ ಪರಿಶೀಲಿಸಿದ್ದೀರಾ ಎಂದು ಪ್ರಶ್ನಿಸಿದರು.

ಎಇಇ ತಿಮ್ಮಪ್ಪ ಈ ಪ್ರಶ್ನೆಗೆ ಹೌದು, ಭೇಟಿ ನೀಡಿದ್ದೇವೆ ಎಂದು ಸುಳ್ಳು ಹೇಳಿದ್ದರಿಂದ ತೀವ್ರವಾಗಿ ಸಿಟ್ಟಿಗೆದ್ದ ರೇಣುಕಾಚಾರ್ಯ, ನಿಮಗೆ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಲು ಆಗುವುದಿಲ್ಲವೇ? ಇದರಿಂದ ಜನತೆ ತಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಿದ್ದಾರೆ ಎಂದರು.

ಎಇಇ ತಿಮ್ಮಪ್ಪ ಮತ್ತೆ ವಾದ ಮಾಡಲು ಮುಂದಾದಾಗ ಪ್ರಭಾರ ಇಒ ಕೆ.ಸಿ. ಮಲ್ಲಿಕಾರ್ಜುನ್ ಮಧ್ಯೆ ಪ್ರವೇಶಿಸಿ, ಕುಂಬಳೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಪೂರೈಕೆಯಲ್ಲಿ ಕೆಲವೊಮ್ಮೆ ವ್ಯತ್ಯಯವಾಗಿರಬಹುದು. ಅಲ್ಲದೇ, ಗ್ರಾಮದ ಜನರು ಹರಲೀಪುರ ಗ್ರಾಮದ ಕುಡಿಯುವ ನೀರಿಗೆ ಹೊಂದಿಕೊಂಡಿದ್ದಾರೆ. ಆ ಕಾರಣದಿಂದಾಗಿ ಅಲ್ಲಿಂದ ನೀರು ತರುತ್ತಿದ್ದಾರೆ ಎಂದು ವಿವರಿಸಿದರು. 

ಸಚಿವ ರೇಣುಕಾಚಾರ್ಯ ಮಾತನಾಡಿ, ಕುಂಬಳೂರು ಗ್ರಾಮದಲ್ಲಿ 9 ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದರು. ಯಾವುದೇ ಗ್ರಾಮಕ್ಕೆ ತೆರಳಿದರೂ ಅಲ್ಲಿನ ಜನಪ್ರತಿನಿಧಿಗಳೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಹಿಡಿಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನ್ಯಾಮತಿ-ಸುರಹೊನ್ನೆ ಗ್ರಾಮಗಳ ಕುಡಿಯುವ ನೀರು ಪೂರೈಕೆಗೆ ರೂ. 9.50ಕೋಟಿ ಮಂಜೂರಾಗಿತ್ತು. ಆದರೆ, ಸುರಹೊನ್ನೆ ಗ್ರಾಮಕ್ಕೆ ಮಾತ್ರ ನೀರು ಪೂರೈಸಲು ಸಾಕಾಗುತ್ತಿದೆ. ಇತರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಇದಕ್ಕೆ ಸಂಬಂಧಪಟ್ಟ  ಕಾಮಗಾರಿ ಪೂರ್ಣಗೊಳ್ಳುವವರೆಗೂ ಗುತ್ತಿಗೆದಾರರ ಬಿಲ್ ಪಾವತಿಸದಂತೆ ತಡೆಹಿಡಿಯಲು ಎಇಇಗೆ ಸೂಚಿಸಿದರು.

ತಾಲ್ಲೂಕಿನ ಬೋರ್‌ವೆಲ್ ಮತ್ತು ಕೈಪಂಪ್ ಕಾಮಗಾರಿಗೆ ರೂ. 22ಲಕ್ಷ ಬಿಡುಗಡೆಯಾಗಿದೆ. ಬರ ಪರಿಹಾರ ಕಾಮಗಾರಿಯಡಿ ಕುಡಿಯುವ ನೀರಿಗೆ ರೂ. 60 ಲಕ್ಷ ಬಿಡುಗಡೆಯಾಗಿದೆ. 35 ಬೋರ್‌ವೆಲ್‌ಗಳನ್ನು ಕೊರೆಸುವ ಗುರಿ ಇದ್ದು, 12 ಬೋರ್‌ವೆಲ್ ಕೊರೆಸಲಾಗಿದೆ. ತುಂಗಾ ಎಡನಾಲೆ ಆಧುನೀಕರಣಕ್ಕೆ ರೂ. 3.20ಕೋಟಿ ಹಾಗೂ ಸವಳಂಗ ಏತ ನೀರಾವರಿ ಯೋಜನೆಗೆ ರೂ. 68 ಕೋಟಿ ಮಂಜೂರಾಗಿದೆ ಎಂದರು. ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ, ಪ್ರಭಾರ ಇಒ ಕೆ.ಸಿ. ಮಲ್ಲಿಕಾರ್ಜುನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry