ನೀರಿನ ಸಮಸ್ಯೆ ನೀಗಲು ಒತ್ತಾಯ

7

ನೀರಿನ ಸಮಸ್ಯೆ ನೀಗಲು ಒತ್ತಾಯ

Published:
Updated:

ಬೆಂಗಳೂರು: ಸಮಗ್ರ ಕುಡಿಯುವ ನೀರಿನ ಪೂರೈಕೆಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಎಮ್ಮೆಯ ಮೇಲೆ ಖಾಲಿ ಕೊಡಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ `ಬೆಂಗಳೂರು, ಚಿಕ್ಕಬಳ್ಳಾಪುರ ಕೋಲಾರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬೇಸಿಗೆಯ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ~ ಎಂದರು.

`ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಸರ್ಕಾರ ಗ್ರಾಮೀಣ ಜನರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಗಣಿಸುತ್ತಿಲ್ಲ. ಮುಂದಿನ ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂಪಾಯಿಗಳನ್ನು ಕುಡಿಯುವ ನೀರಿನ ಪೂರೈಕೆಗಾಗಿಯೇ ಮೀಸಲಿಡಬೇಕು ಹಾಗೂ ರಾಜ್ಯದ ಎಲ್ಲಾ ನದಿ ಪಾತ್ರಗಳಿಂದ ಕುಡಿಯುವ ನೀರನ್ನು ಪಡೆಯುವ ವ್ಯವಸ್ಥೆಯಾಗಬೇಕು~ ಎಂದು ಆಗ್ರಹಿಸಿದರು.ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಭಾಗಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರ ಇದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಕಿ ಬಿದ್ದಾಗ ಬಾವಿ ತೋಡುವ ನೀತಿಯನ್ನು ಬಿಟ್ಟು, ಕೂಡಲೇ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು. ನಗರದಲ್ಲೂ ಈಗಾಗಲೇ ನೀರಿನ ಸಮಸ್ಯೆ ಉಂಟಾಗಿದ್ದು, ಪ್ರತಿ ವಾರ್ಡ್‌ಗಳಲ್ಲೂ ಜನರು ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ವಾಟಾಳ್ ಅವರು ಎಮ್ಮೆಯ ಮೇಲೆ ಕುಳಿತು ಪ್ರತಿಯೊಂದು ಜಿಲ್ಲೆಯ ಹೆಸರು ಬರೆದಿದ್ದ ಖಾಲಿ ಕೊಡಗಳನ್ನು ಪ್ರದರ್ಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry