ಶುಕ್ರವಾರ, ಏಪ್ರಿಲ್ 16, 2021
20 °C

ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿನಕ್ಕೆ ಉಲ್ಬಣಿಸುತ್ತಿದೆ. ಬೇಸಿಗೆಯಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆಯುವ ಮುನ್ನವೇ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಿಂದಗಿ ತಾಲ್ಲೂಕು ಪಂಚಾಯಿತಿ ಸದಸ್ಯರು ಪಕ್ಷಾತೀತವಾಗಿ ಒತ್ತಾಯಿಸಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಿತ್ರಾ ಮಾರ್ಸನಳ್ಳಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು ತಾಲ್ಲೂಕಿನ ಕೆರೂಟಗಿ, ಹಂಚಲಿ, ನೀರಲಗಿ ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಸಮಸ್ಯೆ ನಿವಾರಣೆಗೆ ಯಾವ ಮುಂಜಾಗ್ರತಾ ಯೋಜನೆ ರೂಪಿಸಲಾಗಿದೆ ಎಂದು ಪ್ರಶ್ನಿಸಿದರು.ಸದಸ್ಯರಾದ ಗಂಗಾರಾಮ ಚವ್ಹಾಣ, ಲಕ್ಷ್ಮೀಬಾಯಿ ಮೆಟಗಾರ, ಹಳ್ಳೆಪ್ಪಗೌಡ ಚೌಧರಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದೆ. ಅದಕ್ಕೆ ತುರ್ತಾಗಿ ಪರಿಹಾರ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಯಾವ ಯೋಜನೆ ರೂಪಿಸಿದೆ ಎಂದರು. ಜಿಪಂ ಎಂಜಿನಿಯರಿಂಗ್ ಕುಡಿಯುವ ನೀರು ನಿರ್ವಹಣೆ ವಿಭಾಗದ ಎಇಇ ಆರ್.ಪಿ. ಬಿರಾದಾರ ಮಾತನಾಡಿ, ನೀರು ಸಾಕಷ್ಟು ಇದ್ದರೂ ಸಮರ್ಪಕವಾಗಿ ನಿರ್ವಹಣೆ ಮಾಡಲಾಗದ ಕಾರಣ ನೀರಿನ ಸಮಸ್ಯೆ ಆಗುತ್ತಿದೆ. ಇದಕ್ಕೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.ತಾಲ್ಲೂಕಿನಲ್ಲಿ ತ್ರಿಫೇಸ್‌ನಂತೆ ಆರು ಗಂಟೆ ಕಾಲ ಮತ್ತು ಸಿಂಗಲ್ ಫೇಸ್ 12 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕೆಂಬ ಸರ್ಕಾರದ ಸೂಚನೆ ಇದ್ದರೂ, ವಿದ್ಯುತ್ ಉತ್ಪಾದನೆ ಕಡಿಮೆ ಆಗಿರುವ ಕಾರಣಕ್ಕಾಗಿ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು ಹೆಸ್ಕಾಂ ಎಇಇ  ಬಿರಾದಾರ ಸ್ಪಷ್ಟಪಡಿಸಿದರು.ಆರಂಭದಲ್ಲಿ ಸ್ಥಾಯಿ ಸಮಿತಿ ರಚನೆ ಮತ್ತು ಗ್ರಾಮ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರ ಆಯ್ಕೆ ಮಾಡುವ ಕುರಿತಾಗಿ ಚರ್ಚೆ ನಡೆದ ಸಂದರ್ಭದಲ್ಲಿ ತಾಪಂ ಅಧ್ಯಕ್ಷರು ಮಾತನಾಡಬೇಕಿತ್ತು. ಆದರೆ ಉಪಾಧ್ಯಕ್ಷ ಸಿದ್ದನಗೌಡ ಹರನಾಳ ಈ ಆಯ್ಕೆ ಮತ್ತು ರಚನಾ ಕಾರ್ಯ ಮತಕ್ಷೇತ್ರದ ಶಾಸಕರಿಗೆ ಗೊತ್ತು ಅವರೇ ಆಯ್ಕೆ ಮಾಡುತ್ತಾರೆ ಎಂದರು.

ತಾಪಂ ಪ್ರಥಮ ಸಾಮಾನ್ಯ ಸಭೆಯಲ್ಲಿ ಮೂವರು ಸದಸ್ಯೆಯರು ತಮ್ಮ ಮಕ್ಕಳೊಂದಿಗೆ ಹಾಜರಾಗಿದ್ದರು. ಒಟ್ಟು 30 ಸದಸ್ಯರ ಪೈಕಿ 17 ಜನ ಮಹಿಳೆಯರು ಮತ್ತು ಉಳಿದವರು ಪುರುಷ ಸದಸ್ಯರಿದ್ದಾರೆ. ಪ್ರಥಮ ಸಭೆಯಲ್ಲಿ ಬಂದಾಳ ಕ್ಷೇತ್ರದ ಗುರಲಿಂಗಪ್ಪ ಮೂಡಗಿ ಮತ್ತು ಮೋರಟಗಿ ಕ್ಷೇತ್ರದ ಮಹಾದೇವಿ ಅಡಗಲ್ ಭಾಗವಹಿಸಿರಲಿಲ್ಲ. ಉಪಾಧ್ಯಕ್ಷ ಸಿದ್ದನಗೌಡ ಹರನಾಳ, ತಾಪಂ ಇಓ ಕಗ್ಗೋಡ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.