ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ

7

ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ

Published:
Updated:
ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಬೆಂಗಳೂರು: ಸರ್ಕಾರ ರಾಜ್ಯದ ಪ್ರತಿಹಳ್ಳಿಗಳಿಗೂ ಸಮರ್ಪಕ ಹಾಗೂ ಶಾಶ್ವತ ಕುಡಿಯುವ ನೀರು ಪೂರೈಕೆಯ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಎತ್ತಿನ ಗಾಡಿಯ ಮೇಲೆ ಖಾಲಿ ಕೊಡಗಳನ್ನು ಇಟ್ಟು ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, `ರಾಜ್ಯದ ಜನತೆ  ಕುಡಿಯುವ ನೀರಿಲ್ಲದೇ ಪರದಾಡುತ್ತಿದ್ದಾರೆ.

 

ಬೇಸಿಗೆಯ ಆರಂಭದ ದಿನಗಳಲ್ಲೇ ರಾಜ್ಯದ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದೆ. ಆದರೆ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ~ ಎಂದು ಆರೋಪಿಸಿದರು.ಬರ ಪರಿಸ್ಥಿತಿ ಇರುವ ಜಿಲ್ಲೆಗಳಲ್ಲಿ ಕೂಡಲೇ ರಾಜ್ಯ ಸರ್ಕಾರ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕು. ಪ್ರತಿ ಬಾರಿಯ ಬೇಸಿಗೆಯಲ್ಲೂ ರಾಜ್ಯ ಸರ್ಕಾರ ಕುಡಿಯುವ ನೀರಿಗಾಗಿ ನೂರು ಕೋಟಿ ರೂ.ಗಳ ವಿಶೇಷ ಅನುದಾನದ ನಾಟಕವನ್ನು ಮುಂದುವರೆಸಿಕೊಂಡೇ ಬರುತ್ತಿದೆ.

 

ರಾಜ್ಯದ ಅಣೆಕಟ್ಟೆಗಳ ನೀರಿನ ಮೂಲದಿಂದ ಶಾಶ್ವತ ಕುಡಿಯುವ ನೀರಿನ ಪೂರೈಕೆಯ ಯೋಜನೆ ರೂಪಿಸಲು ಸರ್ಕಾರ ಮುಂದಾಗಬೇಕು. ರಾಜ್ಯದ ನೀರಿನ ಸಮಸ್ಯೆ ಪರಿಹಾರಕ್ಕಾಗಿ ವಿಶೇಷ ವಿಧಾನಸಭಾ ಅಧಿವೇಶನವನ್ನು ಕರೆಯಬೇಕು ಎಂದು ಆಗ್ರಹಿಸಿದರು.ಉತ್ತರ ಕರ್ನಾಟಕ ಭಾಗವೂ ಸೇರಿದಂತೆ ರಾಜ್ಯದ ಕುಡಿಯುವ ನೀರಿನ ಅಭಾವವನ್ನು ತಗ್ಗಿಸಲು ಮುಂಬರುವ ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕು~ ಎಂದು ಅವರು ಒತ್ತಾಯಿಸಿದರು.ಮೈಸೂರು ಬ್ಯಾಂಕ್ ವೃತ್ತದಿಂದ ಅವೆನ್ಯೂ ರಸ್ತೆ ಹಾಗೂ ಬಳೇಪೇಟೆ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣದ ವರೆಗೆ ಎತ್ತಿನ ಗಾಡಿಗಳ ಮೇಲೆ ಖಾಲಿ ಕೊಡಗಳ ಮೆರವಣಿಗೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry