ಶುಕ್ರವಾರ, ನವೆಂಬರ್ 22, 2019
25 °C

ನೀರಿನ ಸಮಸ್ಯೆ ಪರಿಹಾರಕ್ಕೆ ಭರವಸೆ

Published:
Updated:

ಚಿಂಚೋಳಿ: ತಾಲ್ಲೂಕಿನ ಪಸ್ತಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಜಗೇರಾ ಗ್ರಾಮದಲ್ಲಿ ತಲೆದೋರಿರುವ ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಸೋಮವಾರ ತಾಲ್ಲೂಕು ಪಂಚಾಯತ ಕಚೇರಿ ಎದುರು ಧರಣಿ ನಡೆಸಿದರು.`ಗ್ರಾಮದಲ್ಲಿ ಜಲ ನಿರ್ಮಲ ಯೋಜನೆ ಅಡಿಯಲ್ಲಿ ನಿರ್ಮಿಸಿದ ಮೇಲ್ಮಟ್ಟದ ಜಲ ಸಂಗ್ರಹಾಗಾರ ಕಳಪೆ ಗುಣಮಟ್ಟದ್ದಾಗಿದೆ. ಜತೆಗೆ ಅದಕ್ಕೆ ನೀರು ಪೂರೈಸಲು 2 ಕೀ.ಮೀ ದೂರದ ಜಲ ಮೂಲದ ಬಳಿ ಸ್ಥಾಪಿಸಿದ್ದ 8 ಅಶ್ವಶಕ್ತಿಯ ಮೋಟಾರ್ ಬದಲಿಸಿ ಪಂಚಾಯತಿ 4 ಅಶ್ವಶಕ್ತಿಯ ಮೋಟಾರ್ ಕೂಡಿಸಿದೆ. ಇದರಿಂದ ನೀರು ಎತ್ತಲಾಗದೇ ತೀವ್ರ ಸಮಸ್ಯೆ ಎದುರಾಗಿದೆ' ಎಂದು ಧರಣಿ ನಿರತರು ಅಳಲು ತೋಡಿಕೊಂಡರು.ಮನವಿ ಸ್ವೀಕರಿಸಿದ ಕಾರ್ಯನಿರ್ವಹಣಾಧಿಕಾರಿ ಜಗದೇವ ಬೈಗೊಂಡ, `ಇಂದೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಖುದ್ದು ಪರಿಶೀಲಿಸಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ'  ಎಂದು ಭರವಸೆ  ನೀಡಿದ ಮೇಲೆ ಧರಣಿ ವಾಪಸ್ ಪಡೆದರು.ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶರಣಬಸಪ್ಪ ಮಮಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯೆ ಸುಗುಣಾಬಾಯಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪ್ರದೀಪ ತಿರ್ಲಾಪುರ, ಸಿದ್ದಲಿಂಗಯ್ಯ ಸ್ವಾಮಿ ಯಂಪಳ್ಳಿ, ಸಿದ್ದು ತಳವಾರ್ ಹಾಗೂ ಗ್ರಾಮದ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)