ನೀರಿಲ್ಲದ ಬಸಾಪುರದಲ್ಲಿ ಈಗ ಸಮೃದ್ಧ ನೀರು

7

ನೀರಿಲ್ಲದ ಬಸಾಪುರದಲ್ಲಿ ಈಗ ಸಮೃದ್ಧ ನೀರು

Published:
Updated:

ಹೂವಿನಹಡಗಲಿ: ಈ ಹಿಂದೆ ‘ನೀರಿಲ್ಲದ ಬಸಾಪುರ’ ಎಂಬ ಅಪಖ್ಯಾತಿಗೆ ಗುರಿಯಾಗಿದ್ದ  ನಾಗತಿಬಸಾಪುರ  ಇಂದು ಶುದ್ಧ ಕುಡಿಯುವ ನೀರು  ಪಡೆದ ತಾಲ್ಲೂಕಿನ ಮೊದಲ ಹಳ್ಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಹಿಂದೆ ಗ್ರಾಮದ ಮಧ್ಯೆ ಇದ್ದ  ತೆರೆದ ಬಾವಿಯೊಂದೇ   ಇಡೀ ಊರಿನ ನೀರಿನ ದಾಹ ತಣಿಸಬೇಕಿತ್ತು. ಬಾವಿಯಿಂದ  ಹಗ್ಗದ ಮೂಲಕ  ನೀರು ಜಗ್ಗಿ ತರು ವುದೇ  ಒಂದು ಸಾಹಸದ ಕೆಲಸವಾಗಿತ್ತು.ಗ್ರಾಮದಲ್ಲಿದ್ದ  ನೀರಿನ ತತ್ವಾರದ ಹಿನ್ನೆಲೆಯಲ್ಲಿ  ಬೇರೆ  ಊರುಗಳ ಜನ ‘ನೀರಿಲ್ಲದ ಬಸಾಪುರ’ ಎಂದು ಆಡಿಕೊಳ್ಳುತ್ತಿದ್ದರು.  ಆದರೆ  ಇಂದು ಪ್ರತಿ ಮನೆ ಮನೆಗೂ ಶುದ್ಧ ನೀರು ಪೂರೈಕೆಯಾಗುವ ಮೂಲಕ ಮಾದರಿ ಗ್ರಾಮವಾಗಿದೆ. ಅಂತರ್ಜಲಮಟ್ಟ ತೀವ್ರ ಕುಸಿತ ಕಂಡಿರುವದರಿಂದ  ಕೊಳವೆಬಾವಿಯ ನೀರಿನಲ್ಲಿ  ಫ್ಲೋರೈಡ್ ಮತ್ತು ಆರ್ಸೆನಿಕ್ ವಿಷಕಾರಿ  ಅಂಶಗಳು ಪತ್ತೆಯಾಗಿದ್ದವು. ಅನಿವಾರ್ಯವಾಗಿ ಇದೇ ನೀರನ್ನು ಕುಡಿಯಬೇಕಿದ್ದರಿಂದ ಗ್ರಾಮದ ಜನತೆ  ಕೀಲುನೋವು, ಸಂಧಿವಾತ, ಯುವಕರು ಕೂಡ ವೃದ್ಧರಂತೆ ಕಾಣುವ ವಿಚಿತ್ರ ಕಾಯಿಲೆಗಳು ಬಾಧಿಸುತ್ತಿದ್ದವು.ಈ ಬಗ್ಗೆ ಜನಾಂದೋಲನ ರೂಪಿಸಿದ್ದ ಗದಗ ಕೆ.ಎಚ್. ಪಾಟೀಲ್  ಪ್ರತಿಷ್ಠಾನದ ಬಳಿ ತಾಲ್ಲೂಕಿನ ಹತ್ತಾರು ಹಳ್ಳಿಯ ಜನ, ತಾ.ಪಂ. ಸದಸ್ಯ ಐಗೋಳ ಚಿದಾನಂದ ನೇತೃತ್ವದಲ್ಲಿ  ನಿಯೋಗ ತೆರಳಿ ಮನವಿ ಸಲ್ಲಿಸಿದ್ದರಿಂದ ಪ್ರತಿಷ್ಠಾನದ ಅಧ್ಯಕ್ಷ ಎಚ್.ಕೆ. ಪಾಟೀಲರೇ ನಾಗತಿ ಬಸಾಪುರ ಸೇರಿದಂತೆ ಫ್ಲೋರೈಡ್ ಅಧಿಕವಿರುವ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮಸ್ಥರು ವಂತಿಗೆ ನೀಡುವು ದಾದಲ್ಲಿ  ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಭರವಸೆ ನೀಡಿದ್ದರು.ಸ್ಥಳೀಯ ಗ್ರಾಮಾಭಿವೃದ್ಧಿ ಸಮಿತಿ ಕಾಯ್ದಿಟ್ಟ ಹಣ ಮತ್ತು ಗ್ರಾಮಸ್ಥರಿಂದ ದೇಣಿಗೆ ಸೇರಿಸಿ 4 ಲಕ್ಷಕ್ಕೂ ಹೆಚ್ಚು ಹಣವನ್ನು ವಿನಿಯೋಗಿಸಿದ್ದರಿಂದ  ಗದುಗಿನ ಕೆ.ಎಚ್.ಪ್ರತಿಷ್ಠಾನದ ಸಹ ಭಾಗಿತ್ವದಲ್ಲಿ ಅಂದಾಜು 8 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ  ಪ್ರಾರಂಭಗೊಂಡಿದೆ.ಗ್ರಾಮದ ಎಲ್ಲಾ ಕುಟುಂಬಗಳು ಇದರ ಪ್ರಯೋಜನ  ಪಡೆಯುತ್ತಿದ್ದು, ರೂ. 3 ಪಾವತಿಸಿ 20 ಲೀಟರ್ ಶುದ್ಧ ಕುಡಿಯುವ ನೀರನ್ನು ಕೊಂಡೊಯ್ಯು ತ್ತಿದ್ದಾರೆ.  ಘಟಕದಲ್ಲಿ  ಪ್ರತಿದಿನ 4 ಸಾವಿರ ಲೀಟರ್‌ ಶುದ್ಧ ನೀರು ಪೂರೈಕೆ ಆಗುತ್ತಿದೆ. ಒಪ್ಪಂದದ ಪ್ರಕಾರ ಘಟಕದ ನಿರ್ವಹಣೆಯ ಹೊಣೆ ಹೊತ್ತಿರುವ ಕೆ.ಎಚ್.ಪಾಟೀಲ್ ಪ್ರತಿಷ್ಠಾನಕ್ಕೆ ರೂ. 2200ಗಳನ್ನು ಪಾವತಿಸಲಾಗುತ್ತಿದೆ.ಗ್ರಾಮಸ್ಥರ ದೇಣಿಗೆ ಮತ್ತು ಕೆ.ಎಚ್. ಪಾಟೀಲ್ ಪ್ರತಿಷ್ಠಾನದ ಸಹಕಾರ ದೊಂದಿಗೆ ಪ್ರಾರಂಭಗೊಂಡಿರುವ  ಶುದ್ಧ ಕುಡಿಯುವ ನೀರಿನ ಘಟಕದಿಂದ ಊರಿಗೆ ಒಳ್ಳೆಯದಾಗಿದೆ ಎನ್ನುತ್ತಾರೆ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಎಂ. ಆನಂದಯ್ಯ.ಫ್ಲೋರೈಡ್‌ಯುಕ್ತ ನೀರು ಕುಡಿಯ ಬೇಕಿದ್ದರಿಂದ  ಗ್ರಾಮದ ಅನೇಕ ಜನ ಕೀಲು ನೋವಿನಿಂದ ಬಳಲುತ್ತಿದ್ದರು. ಈಗ ಶುದ್ಧ ಕುಡಿಯುವ ನೀರು ಸಿಗುವ ಕಾರಣ ರೋಗಗಳಿಂದ ಮುಕ್ತಿ ಸಿಕ್ಕಿದೆ ಎಂದು ಘಟಕದ ಮೇಲ್ವಿಚಾರಕ ಮಲ್ಲನಕೆರೆ ನಿಂಗಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry