ನೀರಿಲ್ಲ, ನಿರ್ವಹಣೆ ಇಲ್ಲ: ಈಜುಕೊಳ ಬಂದ್

7

ನೀರಿಲ್ಲ, ನಿರ್ವಹಣೆ ಇಲ್ಲ: ಈಜುಕೊಳ ಬಂದ್

Published:
Updated:
ನೀರಿಲ್ಲ, ನಿರ್ವಹಣೆ ಇಲ್ಲ: ಈಜುಕೊಳ ಬಂದ್

ಹಾವೇರಿ: ಅದೊಂದು ಸುಂದರ ಈಜುಕೊಳ, ನಿರ್ಮಾಣಗೊಂಡು ಕೇವಲ ಎರಡು ವರ್ಷ ಗತಿಸಿದೆ. ಆಗಲೇ ಅದಕ್ಕೆ ನೀರಿನ ಸಮಸ್ಯೆ ಎದುರಾಗಿದೆ. ಸಮರ್ಪಕ ನಿರ್ವಹಣೆ ಹಾಗೂ ನೀರು ಸರಬರಾಜು ಇಲ್ಲದ್ದರಿಂದ ಈಜುಕೊಳ ಕಳೆದ ಎರಡು ತಿಂಗಳಿನಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.ಒಂದು ವಾರದಲ್ಲಿ ದುರಸ್ತಿ ಮಾಡಲಾಗುವುದು, ಹದಿನೈದು ದಿನದಲ್ಲಿ ಮತ್ತೆ ಶುರುವಾಗಲಿದೆ ಎಂದು ಈಜುಕೊಳಕ್ಕೆ ಬರುವ ಜನರಿಗೆ ಹೇಳಲಾಗುತ್ತಿದೆಯಾದರೂ, ಅದರ ದುರಸ್ತಿಗೆ ಈವರೆಗೆ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಈಜುಕೊಳದ ಸ್ಥಿತಿ  ನೋಡಿದ ಪ್ರತಿಯೊಬ್ಬರಿಗೆ ಅನಿಸದೇ ಇರಲಾರದು.ನಗರದ ಜಿಲ್ಲಾ ಕ್ರೀಡಾಂಗಣ ಪಕ್ಕದಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಸುಂದರ ಈಜುಕೊಳ  ನಿರ್ಮಿಸಲಾಗಿತ್ತಲ್ಲದೇ, ಅದಕ್ಕೆ ಯಾವುದೇ ರೀತಿಯಲ್ಲಿ ನೀರಿನ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಪ್ರತ್ಯೇಕ ಬೋರವೆಲ್ ಸಹ ಕೊರೆಯಿಸಲಾಗಿತ್ತು. ಆದರೆ, ಬೋರವೆಲ್ ಕೆಟ್ಟು ನಿಂತು ಹಲವು ತಿಂಗಳು ಗತಿಸಿದರೂ ಅದನ್ನು ದುರಸ್ತಿ ಮಾಡಿಸುವ ಗೋಜಿಗೆ ಇಲಾಖೆಯಾಗಲಿ, ಅದನ್ನು ನಿರ್ವಹಣೆ ಮಾಡುವವರಾಗಲಿ ಹೋಗಿಲ್ಲ. ಇದೇ ಕಾರಣಕ್ಕೆ ಸುಂದರ ಈಜುಕೊಳ  ಹಾಳಾಗುವ ಸ್ಥಿತಿ ತಲುಪಿದೆ ಎಂಬುದು ಈಜುಪ್ರಿಯ ನಾಗರಿಕರ ಆರೋಪ.

ಎರಡೇ ಅಡಿ ನೀರು: ನೀರು ಪೂರೈಕೆ ಇಲ್ಲದ್ದರಿಂದ ಈಜುಕೊಳ ದ ನಿರ್ವಹಣೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ. ಅದರಲ್ಲಿದ್ದ ನೀರು ಹಸಿರು ಬಣ್ಣಕ್ಕೆ ತಿರುಗಿ ಅಲ್ಲಲ್ಲಿ ಪಾಚಿ ಗಟ್ಟಿದೆ. ಆರು ಅಡಿ ಎತ್ತರದ ಈಜುಕೊಳ ದಲ್ಲಿ ಕೇವಲ ಎರಡು ಅಡಿ ಮಾತ್ರ ನೀರು ನಿಂತುಕೊಂಡಿದೆಯಲ್ಲದೇ ಆ ನೀರು ಕೂಡಾ ಕೆಟ್ಟು ವಾಸನೆ ಬೀರುತ್ತಿದೆ.ಜನತೆಗೆ ನಿರಾಸೆ: `ಬೇಸಿಗೆಯಲ್ಲಿ ಸ್ವಲ್ಪಹೊತ್ತು ನೀರಿನಲ್ಲಿಳಿದು ಮೈ ತಂಪು ಮಾಡಿಕೊಳ್ಳಬೇಕೆಂಬ ನಗರದ ಜನತೆಯ ಆಸೆಸಯನ್ನು ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಕಮರಿ ಹೋಗುವಂತೆ ಮಾಡಿದೆ. ನಗರದಲ್ಲಿ ಈಜುಕೊಳ  ನಿರ್ಮಾಣವಾದಾಗ ಖುಷಿಯಿಂದ ಕುಣಿದಾಡಿದ್ದರು. ಆದರೆ, ಆರಂಭದಿಂದಲೂ ಅದರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡುತ್ತಾ ಬಂದಿರುವ ಇಲಾಖೆ ಹಲವಾರು ಬಾರಿ ಸ್ಥಗಿತಗೊಳಿಸಿ ಮತ್ತೆ ಆರಂಭಿಸಿತ್ತು. ಆದರೆ, ಈಗ ಬಂದ್ ಮಾಡಿ ಎರಡು ತಿಂಗಳಾದರೂ ಅದನ್ನು ಆರಂಭಿಸುವ ಬಗ್ಗೆ ಯಾವುದೇ ಭರವಸೆಯನ್ನು ಅಧಿಕಾರಿಗಳು ನೀಡುತ್ತಿಲ್ಲ' ಎಂದು ನಿತ್ಯ ಈಜುಕೊಳ ಕ್ಕೆ ತೆರಳುವ ಡಾ.ರವಿ ಮಲ್ಲಾಡದ ಆರೋಪಿಸುತ್ತಾರೆ.ಹಿಂದೆ ಎಷ್ಟೋ ಸಲ ಈಜುಗೋಳದ ನೀರು ವೈಜ್ಞಾನಿಕವಾಗಿ ಬದಲಾವಣೆ ಮಾಡಲು ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಸ್ವಚ್ಛಗೊಳಿಸುವ ರಸಾಯನಿಕವನ್ನು ಬಳಸುವಂತೆ ಹೇಳಿದರೂ ನಿರ್ವಹಣೆ ಮಾಡುವ ಅಧಿಕಾರಿಗಳು ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿ ಈಜುಕೊಳ ಕ್ಕೆ ಬರುವ ಬಹಳಷ್ಟು ಜನರು ಚರ್ಮರೋಗದಿಂದ ಬಳಲುವಂತಾಗಿತ್ತು ಎಂದು ಅವರು ತಿಳಿಸುತ್ತಾರೆ.ಜನರ ಪ್ರತಿಭಟನೆ:  ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಈಜುಕೊಳ  ನಿರ್ವಹಣೆ ಬಗ್ಗೆ ವಹಿಸಿರುವ ನಿರ್ಲಕ್ಷವನ್ನು ವಿರೋಧಿಸಿ ಹಾಗೂ ಅದರ ಪುನರ್ ಆರಂಭಕ್ಕೆ ಒತ್ತಾಯಿಸಿ ನಗರದ ನಿವಾಸಿಗಳು ಈಜುಕೊಳ ದ ಎದುರು ಕುಳಿತು ಪ್ರತಿಭಟನೆ ಸಹ ನಡೆಸಿದ್ದಾರೆ. ಆದಷ್ಟು ಬೇಗ ಈಜುಕೊಳ  ಆರಂಭಿಸದಿದ್ದರೆ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನೆ ನಡೆಸಿದ ಡಾ.ರಾಜಕುಮಾರ ಮರೋಳ, ವಿ.ಎಂ.ಪತ್ರಿ, ಶಿವಯೋಗಿ ಬಸೇಗಣ್ಣಿ ಎಚ್ಚರಿಸಿದ್ದಾರೆ.ಮತ್ತೊಂದು ಬೋರವೆಲ್: ಈಗಿರುವ ಬೋರವೆಲ್ ಕೆಟ್ಟು ಹೋಗಿದ್ದು, ಅದರ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಈಗ ಅದನ್ನು ದುರಸ್ತಿಗೊಳಿಸಿದರೂ ಅಗತ್ಯಕ್ಕೆ ತಕ್ಕಂತೆ ನೀರು ಸಿಗುವುದಿಲ್ಲ. ಮತ್ತೊಂದು ಪಾಯಿಂಟ್‌ನಲ್ಲಿ ಬೋರವೆಲ್ ಕೊರೆಯಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮುತ್ತುರಾಜ ಕಾಮಚ್ಚಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry