ನೀರಿಲ್ಲ- ನೆರಳಿಲ್ಲ: ಜಾತ್ರೆ ಮಾತ್ರ ಜೋರು

7

ನೀರಿಲ್ಲ- ನೆರಳಿಲ್ಲ: ಜಾತ್ರೆ ಮಾತ್ರ ಜೋರು

Published:
Updated:
ನೀರಿಲ್ಲ- ನೆರಳಿಲ್ಲ: ಜಾತ್ರೆ ಮಾತ್ರ ಜೋರು

ಕೋಲಾರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಮುಳಬಾಗಲು ತಾಲ್ಲೂಕಿನ ಆವಣಿ ಗ್ರಾಮದಲ್ಲಿ ಪ್ರಸನ್ನ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವದ ಪ್ರಯುಕ್ತ ನಡೆಯುವ ದನಗಳ ಭಾರಿ ಜಾತ್ರೆ  ಪ್ರಸಿದ್ಧಿ. ಆದರೆ ಅಲ್ಲಿಗೆ ಸುತ್ತಮುತ್ತಲ ಗ್ರಾಮಗಳು ಮತ್ತು ಆಂಧ್ರಪ್ರದೇಶ - ತಮಿಳುನಾಡು ಗಡಿ ಪ್ರದೇಶದಿಂದ ಬರುವ ನೂರಾರು ರೈತರಿಗೆ, ಸಾವಿರಾರು ರಾಸುಗಳಿಗೆ ನೀರು, ನೆರಳಿಲ್ಲದ ದುರ್ಗತಿ ಎದುರಾಗಿದೆ. ನೀರಿಲ್ಲ, ನೆರಳಿಲ್ಲ, ಜಾತ್ರೆ ಮಾತ್ರ ಜೋರು ಎಂಬ ಸನ್ನಿವೇಶ ನಿರ್ಮಾಣವಾಗಿದೆ.ಪ್ರತಿ ವರ್ಷ ಜಾತ್ರೆಯಲ್ಲಿ ರಾಸುಗಳ ವಹಿವಾಟು ಕೋಟಿ ರೂಪಾಯಿ ಮೀರುತ್ತದೆ ಎಂಬುದು ಒಂದು ಅಂದಾಜು. (ಒಂದು ಜೋಡಿ ರಾಸಿನ ಬೆಲೆ ಕನಿಷ್ಠ 25 ರಿಂದ 50 ಸಾವಿರ ರೂಪಾಯಿ ಇರುತ್ತದೆ) ಆದರೆ ಅಲ್ಲಿಗೆ ಬರುವ ರೈತರು ಮತ್ತು ರಾಸುಗಳು ನೀರು, ನೆರಳಿಲ್ಲದೆ ಬಸವಳಿಯುವುದು ಅನಿವಾರ್ಯ ಎಂಬಂತಾಗಿದೆ.ಮಂಗಳವಾರ ರಥೋತ್ಸವ ನಡೆದಿದೆ. ಅದಕ್ಕೂ ಒಂದೆರಡು ದಿನ ಮುಂಚೆಯಿಂದಲೇ ರೈತರು ರಾಸು ಗಳೊಂದಿಗೆ ಬಂದಿದ್ದಾರೆ. ಆದರೆ ರಾಸುಗಳ ಜೊತೆಗೇ ಕಲ್ಲು, ಮಣ್ಣು ಎನ್ನದೆ ನೆಲದಲ್ಲೆ ಮಲಗಬೇಕು. ಸುಸ್ತಾದರೆ ಅಲ್ಲೇ ಒರಗಬೇಕು. ಉಳ್ಳವರು ಪ್ಲಾಸ್ಟಿಕ್ ಶೀಟುಗಳನ್ನು ತಂದು ತಾತ್ಕಾಲಿಕ ಡೇರೆ ನಿರ್ಮಿಸಿ ಕೊಳ್ಳುತ್ತಾರೆ. ದನಗಳಿಗೆ ತೆಂಗಿನಗರಿಯ ಚಪ್ಪರ ಹಾಕುತ್ತಾರೆ. ಬಹಳಷ್ಟು ಮಂದಿಗೆ ಅನುಕೂಲವೂ ಇಲ್ಲ. ಹೀಗಾಗಿ ರಾಸುಗಳೊಂಡನೆ ತಾವೂ ಬಿಸಿಲಿನಲ್ಲೆ ಬಸವಳಿಯುತ್ತಾರೆ.ರಥೋತ್ಸವಕ್ಕೂ ಕೆಲವು ಗಂಟೆಗಳ ಮುಂಚಿ ನಿಂದಲೇ ರಥ ಸಾಗುವ ಮುಖ್ಯಬೀದಿಗಳಲ್ಲಿ ದಾನಿಗಳು ಟ್ರ್ಯಾಕ್ಟರ್‌ಗಳಲ್ಲಿ ಸಾವಿರಾರು ಪ್ಯಾಕೆಟ್ ನೀರು, ಮಜ್ಜಿಗೆಯನ್ನು ಜನಕ್ಕೆ ವಿತರಿಸುತ್ತಿದ್ದ ಹೊತ್ತಿನಲ್ಲೆ, ರಾಸುಗಳನ್ನು ಹೊಡೆದುಕೊಂಡು ರೈತರು ಹತ್ತಿರದಲ್ಲಿ ಎಲ್ಲಾದರೂ ನೀರಿದೆಯೇ ಎಂದು ಹುಡುಕುತ್ತಿದ್ದರು. ಹೋಗಲಾಗದವರು ಒಂದೆಡೆ ಕುಳಿತಿದ್ದರು. ಪ್ಲಾಸ್ಟಿಕ್ ಶೀಟು, ತೆಂಗಿನಗರಿ, ಎತ್ತಿನಗಾಡಿಗಳ ಕೆಳಗಿನ ಜಾಗ ತಂಗುದಾಣಗಳಾಗಿದ್ದವು.

 

ಅಲ್ಲಿ ಮರಗಳಿಲ್ಲದೆ ನೆರಳಿಲ್ಲದ್ದರಿಂದ ಮೂಕ ರಾಸುಗಳು ಮಾತ್ರ ಬಿಸಿಲಬೇಗೆಗೆ ಮೌನವಾಗಿದ್ದವು. ಸಮೀಪದಲ್ಲೆ ನಿರ್ಮಿಸಿದ್ದ ಎರಡು ನೀರಿನ ತೊಟ್ಟಿಗಳಲ್ಲಿ ನೀರು ಇಲ್ಲದೆ ಒಣಗಿದ್ದವು. ರೈತರು ಅದರ ಮೇಲೆ ಕುಳಿತಿದ್ದರು. ರಥ ಸಾಗುವ ಮಾರ್ಗದಲ್ಲಿ ಕಂಡು ಬರುತ್ತಿದ್ದ ಜಾತ್ರೆಯ ಸಂಭ್ರಮದ ದನಗಳ ಜಾತ್ರೆಯ ಸ್ಥಳದಲ್ಲಿ ಕಂಡುಬರಲಿಲ್ಲ.ಉತ್ಸವ ಪ್ರಯುಕ್ತ ದನಗಳ ಜಾತ್ರೆ ಪ್ರತಿಸಾರಿ 10 ದಿನ ನಡೆಯುವುದು ಪ್ರತೀತಿ. ಆದರೆ ಈ ಬಾರಿ ನೀರು ನೆರಳಿಲ್ಲದ ಸ್ಥಿತಿ ಇರುವುದರಿಂದ ಕೆಲವರು ಒಂದು ವಾರಕ್ಕೆ, ಇನ್ನೂ ಕೆಲವರು ಐದೇ ದಿನಕ್ಕೆ ವಾಪಸು ಹೋಗಲು ನಿರ್ಧರಿಸಿದ್ದಾರೆ.`ಮೊದಲು ಈ ಸುತ್ತಮುತ್ತ ಎಲ್ಲಿಯೂ ಜಾಗವಿರದಷ್ಟು ದನಗಳು ಬರುತ್ತಿದ್ದವು. ಆದರೆ ಕಾಲ ಬದಲಾಗಿದೆ. ಜಾತ್ರೆಗೆ ಬರುವ ರೈತರನ್ನು ಕೇಳೋರು ಇಲ್ಲ. ಮೇವಿಲ್ಲ, ನೀರಿಲ್ಲ, ನೆರಳಿಲ್ಲವಾದ್ದರಿಂದ ನಾಲ್ಕೇ ದಿನಕ್ಕೆ ಎಲ್ಲ ಖಾಲಿ ಆಗ್ತಾರೆ. ಸೌಕರ್ಯ ಇಲ್ಲ ಎನ್ನೋದೇ ದೊಡ್ಡ ಬಾಧೆ~ ಎಂದು ಮುಳಬಾಗಲು ತಾಲ್ಲೂಕಿನ ಸುಂದರಪಾಳ್ಯದ ರೈತರಾದ ಗುರುವಾರೆಡ್ಡಿ ಮತ್ತು ನಾರಾಯಣರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.ಕೋಲಾರ ತಾಲ್ಲೂಕಿನ ಯಾನಾದಹಳ್ಳಿಯ ಆನಂದ, ಚಿಂತಾಮಣಿ ತಾಲ್ಲೂಕಿನ ಸಂತೆಕಲ್ಲೂರಿನ ಅಪ್ಪಾಲಪ್ಪ ಅವರು, ಸೌಕರ್ಯವಿದ್ದಿದ್ದರೆ 10 ದಿನ ಇರಬಹುದಿತ್ತು. ಆದರೆ ಈಗ ಆಗಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.ದಾನಿಗಳೇನೋ ಇದ್ದಾರೆ. ಆದರೆ ಅವರು ಮತ ಲೆಕ್ಕಾಚಾರದಲ್ಲಿದ್ದಾರೆ. ದನಗಳ ಜಾತ್ರೆಯತ್ತಲೂ ಅವರು ಗಮನ ಹರಿಸಬೇಕು. ತಾಲ್ಲೂಕು ಆಡಳಿತವೂ ಕನಿಷ್ಠ ಸೌಕರ್ಯ ನೀಡಲು ಮುಂದಾಗಬೇಕು ಎಂದು ಉಪನ್ಯಾಸಕ ಡಾ.ಜಿ. ಶಿವಪ್ಪ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry