ಶನಿವಾರ, ಜೂಲೈ 11, 2020
28 °C

ನೀರುಣಿಸದ ಅಮರ್ಜಾ ಉಪಕಾಲುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ:  ಐದು ದಶಕಗಳ ಹಿಂದೆ ಹುಟ್ಟಿಕೊಂಡ ಅಮರ್ಜಾ ಅಣೆಕಟ್ಟೆ ಇಂದಿಗೂ ವ್ಯಾಪ್ತಿಯ ಜಮೀನುಗಳಿಗೆ ನೀರುಣಿಸುತ್ತಿಲ್ಲ. ಹೀಗಾಗಿ ರೈತರ ಕನಸುಗಳು ನನಸಾಗುತ್ತಿಲ್ಲ.ಮಧ್ಯಮ ನೀರಾವರಿ ಇಲಾಖೆಯ ಮೂಲಕ 5 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭಿಸಲಾದ ಈ ಯೋಜನೆ ನೂರಾರು ಕೋಟಿ ಖರ್ಚಾಗಿಯೂ ಪೂರ್ಣಗೊಂಡಿಲ್ಲ. ಈ ವ್ಯವಸ್ಥೆ ಸರಿಪಡಿಸಲು ಸರ್ಕಾರ ಮತ್ತೆ ನೂರು ಕೋಟಿ ಹಣ ಹಾಕಿ ಕಾಲುವೆ ನಿರ್ಮಿಸಿ ನೀರು ಪೂರೈಸಲು ಮುಂದಾದಾಗ ಕಾಲುವೆ ನೀರು ಮುಂದಕ್ಕೆ ಹರಿಯದೆ ಹಿಂದಕ್ಕೆ ಹರಿದು ಯೋಜನೆ ನೆನೆಗುದಿಗೆ ಬಿದ್ದಿತ್ತು. ಯೋಜನೆ ಅವ್ಯವಸ್ಥೆಗೆ ಕೈಗನ್ನಡಿ ಹಿಡಿದು ಆಗಿನ ನೀರಾವರಿ ಸಚಿವ ಎಚ್.ಕೆ. ಪಾಟೀಲ ಅಣೆಕಟ್ಟೆಗೆ ಭೇಟಿ ನೀಡಿ 20 ಮಂದಿ ಅಧಿಕಾರಿಗಳನ್ನು ಸ್ಥಳದಲ್ಲೇ ಅಮಾನತು ಕೈಗೊಂಡಿದ್ದರು. ಅಣೆಕಟ್ಟೆ ಅನ್ನು ನೀರಾವರಿ ನಿಗಮಕ್ಕೆ ಸೇರಿಸಿ ಕಾಲುವೆ ನಿರ್ಮಾಣಕ್ಕೆ ಸುಮಾರು 110 ಕೋಟಿ ರೂಪಾಯಿ ಮತ್ತೆ ಬಿಡುಗಡೆಗೊಳಿಸಿ, ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಒದಗಿಸಲಾಗುವುದು ಎಂಬ ನೀರಾವರಿ ನಿಗಮದ ವಿಶ್ವಾಸ ಹಾಗೂ ಸರ್ಕಾರಗಳ ಭರವಸೆ ನಾಲ್ಕು ವರ್ಷ ಕಳೆದರೂ ಸಾಧ್ಯವಾಗಿಲ್ಲ. ಅಧಿಕಾರಿಗಳ ಪ್ರಕಾರ ಆಳಂದ ಮತ್ತು ಅಫಜಲಪುರ ತಾಲ್ಲೂಕಿನ 22 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆಯ ಪೈಕಿ ಈಗಾಗಲೇ 15 ಸಾವಿರ ಎಕರೆಗೆ ನೀರು ಪೂರೈಸಲಾಗುತ್ತಿದೆ ಎಂದು ಹೇಳಲಗಿದೆ. ಆದರೆ ಜಮೀನುಗಳಿಗೆ ಪೂರೈಕೆ ಮಾಡುವ ಉಪಕಾಲುವೆಗಳೇ ಜಮೀನಿಗಿಂತ ಆಳವಾಗಿರುವ ಹಿನ್ನೆಲೆಯಲ್ಲಿ ಕಾಲುವೆಯ ಪಕ್ಕದಲ್ಲಿರುವ ಹೊಲಗಳಿಗೆ ನೀರುಣಿಸಿಕೊಳ್ಳಲು ಸಾಧ್ಯವಿಲ್ಲ. ಉಪಕಾಲುವೆಗಳ ಗೇಟ್ ಮುಚ್ಚಿದಾಗಲೂ ಅರ್ಧಕ್ಕರ್ಧ ನೀರು ಸೋರಿಕೆಯಾಗಿ ಹಳ್ಳಕ್ಕೆ ಸೇರುತ್ತಿರುವುದು ಸ್ಥಳಕ್ಕೇ ಭೇಟಿ ನೀಡಿದಾಗ ಕಾಣಿಸಿತು. ಎಲ್ಲವನ್ನು ಅಧಿಕಾರಿಗಳ ಕಾಗದದಲ್ಲೇ ನೀರುಣಿಸುತ್ತಾರೆ ಎಂದು ನೀರು ಬಳಕೆದಾರ ಸಂಘದ ಅಧ್ಯಕ್ಷ ಶಿವುಗೌಡ ಪಾಟೀಲ ಹಾಗೂ ಕಾರ್ಯದರ್ಶಿ ಅಣ್ಣಯ್ಯ ಸ್ವಾಮಿ ಆರೋಪಿಸಿದ್ದಾರೆ.ಯೋಜನೆ ಒಳನೋಟ: 22 ಸಾವಿರ ಎಕರೆ ಜಮೀನಿಗೆ ನೀರು ಹರಿಸಲು  ಸಾಕಷ್ಟು ಕಾಲುವೆ ಕಾಮಗಾರಿ ಬಾಕಿಯಿದೆ. ಬಲದಂಡೆ ಕಾಲುವೆ 55 ಕಿ.ಮೀ. ಉದ್ದವಾಗಿದ್ದು, ಆ ಪೈಕಿ 0.30 ಕಿ.ಮೀ ವರೆಗೆ ಕಾಮಗಾರಿ ಪೂರ್ಣಳ್ಳಲು 1 ಕಿ.ಮೀ. ಬಾಕಿ ಇದೆ. ಉಳಿದ 2ನೇ ಹಂತದ 25ಕಿ.ಮೀ. ಕಾಮಗಾರಿ ಆರಂಭಗೊಳ್ಳಬೇಕಾಗಿದೆ. ಬಲದಂಡೆಯ 42 ಕಿ.ಮೀಟರ್ ಮುಖ್ಯ ಕಾಲುವೆಯ ಕಾಮಗಾರಿ ಪೂರ್ಣಗೊಂಡಿದೆ, ಉಪಕಾಲುವೆಗಳು ಕಾಮಗಾರಿ ನಡೆಯಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.