ಬುಧವಾರ, ನವೆಂಬರ್ 13, 2019
23 °C

ನೀರು ಉಳಿಸಿರಿ ಉಳಿಯಿರಿ

Published:
Updated:ಮ್ಮೆ ಭಗವಾನ್ ಶಿವನ ಮಡದಿಯರಾದ ಗೌರಿ ಮತ್ತು ಗಂಗೆಯರ ಮಧ್ಯೆ ಯಾರು ಅತ್ಯಂತ ಶ್ರೇಷ್ಠರು ಎಂಬ ಜಗಳ ಪ್ರಾರಂಭವಾಯಿತು. ಗೌರಿಯು ಸಿಟ್ಟಿನಿಂದ ತಾನೇ ಶ್ರೇಷ್ಠ ಎಂದು ವಾದಿಸಿದಳು. ಅದಕ್ಕೆ ಗಂಗೆ `ಇನ್ನು ಮುಂದೆ ನನ್ನನ್ನು ನೀನು ಉಪಯೋಗಿಸಬೇಡ' ಎಂದಳು. `ಸರಿ' ಎಂದು ಗೌರಿ ಸಮ್ಮತಿಸಿದಳು. ಒಂದು ದಿನವಿಡೀ ಗೌರಿಯು ನೀರನ್ನು, ಅಂದರೆ ಗಂಗೆಯನ್ನು ಉಪಯೋಗಿಸದೇ ಕಳೆದಳು.

ಯಥಾಪ್ರಕಾರ ಗೌರಿ ಬೆಳಿಗ್ಗೆ ಸ್ನಾನಕ್ಕೆ ತೆರಳಿದಳು. ಆಗ ಅವಳು ಗಂಗೆಯನ್ನು ಬಳಸಬಾರದೆಂಬ ಹಟದಿಂದ ಹಾಲು, ತುಪ್ಪ, ಮೊಸರು, ಜೇನುತುಪ್ಪ ಉಪಯೋಗಿಸಿ ಸ್ನಾನ ಮಾಡಿದಳು. ಆದರೆ ಅವಳ ಶರೀರ ಶುಭ್ರವಾಗದೇ ಇನ್ನಷ್ಟು ಮಲಿನವಾಯಿತು. ನೀರಿನಿಂದ ಸ್ನಾನ ಮಾಡಿದಾಗ ಆಗುವ ಉಲ್ಲಾಸ, ಸ್ವಚ್ಛತೆ ಅವಳಿಗೆ ಸಿಗಲಿಲ್ಲ. ಆಗ ಅನಿವಾರ್ಯವಾಗಿ ಅವಳು ತನ್ನ ಹಟವನ್ನು ಬಿಟ್ಟು ಗಂಗೆಯಲ್ಲಿ ಕ್ಷಮೆ ಕೋರಿ, `ನೀನಿಲ್ಲದೇ ಜೀವಿಸುವುದು ದುಸ್ತರ, ಆದ್ದರಿಂದ ನೀನು ಅತಿ ಶ್ರೇಷ್ಠ' ಎಂದು ಒಪ್ಪಿಕೊಂಡಳು. ಹೀಗೆ ನೀರಿನ ಮಹತ್ವವನ್ನು ವರ್ಣಿಸುತ್ತದೆ ಪುರಾಣ.

ಅದೇ ರೀತಿ, ನೀರಿಲ್ಲದೆ ಈಗಿನ ನಮ್ಮ ಜೀವನವನ್ನು ಊಹಿಸಿಕೊಳ್ಳುವುದು ಸಹ ಅಸಾಧ್ಯ. ಇಂತಹ ಅವಶ್ಯಕ ವಸ್ತುವನ್ನು ನಾವು ಜೋಪಾನವಾಗಿ, ಅಚ್ಚುಕಟ್ಟಾಗಿ, ಜವಾಬ್ದಾರಿಯಿಂದ ಬಳಸಬೇಕಾಗಿದೆ. ಇಲ್ಲದೇ ಹೋದರೆ ನಾವು ಪಡಬೇಕಾದ ಪಾಡು ಅಷ್ಟಿಷ್ಟಲ್ಲ. ನೀರಿಗಾಗಿ ದೇಶ ದೇಶಗಳ ಮಧ್ಯೆ ಯುದ್ಧಗಳೇ ನಡೆದರೂ  ಆಶ್ಚರ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ದಿನದಿನಕ್ಕೂ ಬತ್ತಿ ಹೋಗುತ್ತಿರುವ ನೀರಿನ ಮೂಲಗಳು, ಅಂದರೆ ಬಾವಿ, ಕೆರೆ, ಕೊಳ, ಹಳ್ಳ, ನದಿಗಳನ್ನು ನೋಡಿದಾಗ ದಿಗಿಲಾಗುತ್ತದೆ ಅಲ್ಲವೇ? ಇದಕ್ಕೆಲ್ಲ ಮೂಲ ಕಾರಣ ಮಳೆಯ ಕೊರತೆ.

ಮಳೆಯ ಕೊರತೆಗೆ ಕಾರಣ ಅರಣ್ಯ ನಾಶ ಮತ್ತು ನಮ್ಮ ಪರಿಸರದಲ್ಲಿ ಗಿಡಮರಗಳನ್ನು ಬೆಳೆಸದೆ ನಾಗರಿಕತೆಯ ಸೋಗಿನಲ್ಲಿ ನಗರೀಕರಣ, ಕೈಗಾರಿಕೆಗಳಿಗೆ ಅತಿ ಮಹತ್ವ ಕೊಡುತ್ತಾ ಕೃಷಿಯನ್ನು ನಿರ್ಲಕ್ಷಿಸಿರುವುದು. ಅಷ್ಟೇ ಅಲ್ಲದೆ ನಮ್ಮ ಕೃಷಿ ಸಹ ಮಳೆಯನ್ನೇ ಅವಲಂಬಿಸಿರುವುದರಿಂದ ಸರಿಯಾದ ಸಮಯದಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗದೇ ಇದ್ದಾಗ ಕೃಷಿ ಉತ್ಪನ್ನವೂ ಕಡಿಮೆಯಾಗುತ್ತದೆ.ಕೃಷಿ, ವಾಣಿಜ್ಯ, ಉದ್ಯಮ, ಕೈಗಾರಿಕೆಯಂತಹ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಬೇಕಾದರೂ ನೀರಿನ ಸಂಪನ್ಮೂಲ ಬೇಕೇ ಬೇಕು. ನಮಗೆ ಸಿಗುವ ನೀರಿನ ಪ್ರಮಾಣ ಅತ್ಯಲ್ಪ. ಇಡೀ ಪ್ರಪಂಚದ ಭೂಮಿಯ ಒಟ್ಟು 70 ಭಾಗ ನೀರಿನಿಂದ ಆವೃತವಾಗಿದ್ದರೂ ಅದಷ್ಟೂ ನೀರು ಉಪಯೋಗಿಸಲು ಬರುವುದಿಲ್ಲ. ಒಟ್ಟು ನೀರಿನ ಶೇ 97ರಷ್ಟು ಭಾಗ ಉಪ್ಪಿನಿಂದ ಕೂಡಿದೆ.  ಹೀಗಾಗಿ ಅದು ಕುಡಿಯಲು ಯೋಗ್ಯವಲ್ಲ.

ಇನ್ನುಳಿದ ಶೇ 3ರಷ್ಟು ಮಾತ್ರ ಕುಡಿಯಲು ಅಥವಾ ಬಳಸಲು ಯೋಗ್ಯವಾಗಿದೆ. ಇದರಲ್ಲೂ ಶೇ 2ರಷ್ಟು ನೀರು ಹಿಮ ಮತ್ತು ಮಂಜುಗಡ್ಡೆಯ ರೂಪದಲ್ಲಿ ಇರುತ್ತದೆ. ಇನ್ನುಳಿದ ಶೇ 1ರಷ್ಟು ನೀರು ಮಾತ್ರ ನಮಗೆ ಉಪಯೋಗಿಸಲು ಸಿಗುತ್ತದೆ. ಇದನ್ನೇ ನಾವು ನಮ್ಮ ದಿನಬಳಕೆ, ವಿದ್ಯುತ್ ತಯಾರಿಕೆ, ಕೈಗಾರಿಕೆ, ಹೈನುಗಾರಿಕೆ, ಮನರಂಜನೆ ಇತ್ಯಾದಿಗಳಿಗೆ ಉಪಯೋಗಿಸಬೇಕು.ಕೈಗಾರಿಕೆಗಳಲ್ಲಿ ಕೆಲವು ಕಚ್ಚಾ ಪದಾರ್ಥಗಳನ್ನು ತಯಾರಿಸಲು ನೀರನ್ನು ಬಳಸಲಾಗುತ್ತದೆ. ಅಲ್ಲದೆ ಕೈಗಾರಿಕೆಗಳಿಂದ ಹೊರಬರುವ ಮಲಿನ ವಸ್ತುವನ್ನು ನದಿ, ಕೆರೆಗಳಿಗೆ ಬಿಡುವ ಪರಿಪಾಠವಿದೆ. ಹೈನುಗಾರಿಕೆಗೂ ಅತ್ಯಂತ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ದನಕರುಗಳನ್ನು ಶುಚಿಯಾಗಿಸಲು, ಹಾಲು ಸಂಸ್ಕರಿಸಲು, ಉತ್ಪನ್ನಗಳನ್ನು ತಯಾರಿಸಲು ನೀರು ಬೇಕೇ ಬೇಕು. ಇದಲ್ಲದೆ ಇತರ ಪಶು, ಪ್ರಾಣಿ, ಪಕ್ಷಿಗಳಿಗೂ ನೀರು ಬೇಕು.

ಹಾಗೆಯೇ ಅರಣ್ಯ ಮತ್ತು ಗಿಡಮರಗಳನ್ನು ಬೆಳೆಸಲು ನೀರು ಅತ್ಯವಶ್ಯಕ. ನೀರು ಸಾಕಷ್ಟಿದ್ದರೆ ಗಿಡಮರಗಳು ಚೆನ್ನಾಗಿ ಬೆಳೆದು ವಾಯು ಮಂಡಲದಲ್ಲಿರುವ ಇಂಗಾಲದ ಡೈಆಕ್ಸೈಡನ್ನು ಹೀರಿಕೊಂಡು ಶುದ್ಧ ಆಮ್ಲಜನಕವನ್ನು ನಮಗೆ ನೀಡುತ್ತವೆ. ನೀರಿಲ್ಲದೇ ಗಿಡಗಳು ಇರುವುದಿಲ್ಲ, ಗಿಡಗಳಿಲ್ಲದಿದ್ದರೆ ನಮಗೆ ಆಮ್ಲಜನಕ ಇಲ್ಲ. ಆಮ್ಲಜನಕ ಇಲ್ಲದೆ ಉಸಿರಾಡುವುದು ಹೇಗೆ? ಆಗ ನಮ್ಮ ಪರಿಸ್ಥಿತಿ ಊಹಿಸಿಕೊಳ್ಳುವುದೂ ಕಷ್ಟ.ಇಷ್ಟೇ ಅಲ್ಲದೇ ನೀರು ಮನರಂಜನೆಗೆ, ಅಂದರೆ ಈಜು, ರ‌್ಯಾಫ್ಟಿಂಗ್, ಬೋಟಿಂಗ್‌ಗೆ ಸಹ ಬೇಕು. ಇನ್ನು ನಮಗೆ ದಿನನಿತ್ಯ ಕುಡಿಯಲು, ಆಹಾರ ಪದಾರ್ಥ ತಯಾರಿಸಲು, ದೇಹ ಮತ್ತು ನಾವು ವಾಸ ಮಾಡುವ ಪರಿಸರವನ್ನು ಶುಚಿಯಾಗಿಡಲು ನೀರು ಅತ್ಯವಶ್ಯಕ.ವಿನಾ ಜಲೇನ ಜೀವನಮ್ ನ ಚಲತಿ ಎಂದರೆ ನೀರಿಲ್ಲದ ನಮ್ಮ ಜೀವನವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಆದ್ದರಿಂದ ನೀರನ್ನು ದುಂದುವೆಚ್ಚ ಮಾಡದೇ ಹಿತಮಿತವಾಗಿ ಬಳಸುವುದರ ಜೊತೆಗೆ, ಅದು ವ್ಯರ್ಥವಾಗದೆ ಮಳೆ ಕೊಯ್ಲು, ಇಂಗು ಗುಂಡಿ ಮುಂತಾದ ಯೋಜನೆಗಳನ್ನು ನಾವು ಅಳವಡಿಸಿಕೊಳ್ಳೋಣ. ಹನಿ ಹನಿ ನೀರಿಗೂ ಅದರದ್ದೇ ಆದ ಮಹತ್ವವಿದೆ. ಈಗ ನೀರನ್ನು ಉಳಿಸಿದರೆ ಮುಂದೆ ಅದು ನಮ್ಮನ್ನು ಉಳಿಸುತ್ತದೆ ಎಂಬುದನ್ನು ಎಲ್ಲರಿಗೂ ಸಾರೋಣ.


ಇದು ನಿಮಗೆ ಗೊತ್ತೇ?

  • ನಮ್ಮ ದೇಹದಲ್ಲಿ ನೀರಿನ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಶೇ 20ರಷ್ಟು ಕಡಿಮೆಯಾದರೂ ನಾವು ಸಾಯುತ್ತೇವೆ.

  • ಪ್ರತಿ ವರ್ಷ ಸುಮಾರು ಸರಾಸರಿ 14 ಲಕ್ಷ ಜನ ಕುಡಿಯುವ ನೀರಿನ ಸಮಸ್ಯೆಯಿಂದ ಸಾಯುತ್ತಿದ್ದಾರೆ.

  • ದೇಶದ 1.48 ಲಕ್ಷ ಹಳ್ಳಿಗಳಲ್ಲಿ ಕುಡಿಯುವ ನೀರಿನ ಮೂಲಗಳು ಸಂಪೂರ್ಣ ಬತ್ತಿಹೋಗಿವೆ.

  • ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ ಪ್ರಕಾರ, ವಿಶ್ವದ ಅರ್ಧದಷ್ಟು ಜನ ಶುದ್ಧ ಕುಡಿಯುವ ನೀರಿನ ಕೊರತೆಯಿಂದ ನೀರಿಗೆ ಸಂಂಧಿಸಿದ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ.

  • ನೀರಿನ ಸಮಸ್ಯೆ ಹೀಗೇ ಮುಂದುವರಿದರೆ 2025ನೇ ಇಸವಿ ವೇಳೆಗೆ ವಿಶ್ವದಾದ್ಯಂತ ಸುಮಾರು 270 ಕೋಟಿ ಜನ ನೀರಿಗಾಗಿ ಹಗಲಿರುಳೂ    ಪರದಾಡುವ ಸ್ಥಿತಿ ಬರಬಹುದು.

  • ಪರಿಸ್ಥಿತಿ ಹೀಗಿರುವಾಗ ಮನೆಯಲ್ಲಿರುವ ನಲ್ಲಿಯಿಂದ ಒಂದೊಂದೇ ಹನಿ ನೀರು ಸೋರುತ್ತಿದ್ದರೂ ಆ ಬಗ್ಗೆ ನಿರ್ಲಕ್ಷ್ಯ ಬೇಡ.

  • ಪ್ರತಿ ನಿಮಿಷಕ್ಕೆ ಒಂದು ಹನಿ ನೀರು ಪೋಲಾಗುತ್ತಾ ಹೋದರೂ, ವರ್ಷಕ್ಕೆ ಸುಮಾರು 45,000 ಲೀಟರ್ ನೀರು ಸೋರಿ ಹೋಗುತ್ತದೆ. ಈ ನೀರಿನಲ್ಲಿ ಒಬ್ಬ ಮನುಷ್ಯ ಸುಮಾರು 15 ತಿಂಗಳ ಕಾಲ ಬದುಕಬಹುದು.

ಪ್ರತಿಕ್ರಿಯಿಸಿ (+)