`ನೀರು ಕೇಳಿದರೆ ಕಸ ಸುರಿಯಲು ಹೊರಟಿದ್ದಾರೆ...'

7
ಕೊಡಿಯಾಲ ಕರೇನಹಳ್ಳಿ ಬಳಿ ಕಸ ವಿಲೇವಾರಿ: ಗ್ರಾಮಸ್ಥರ ಆತಂಕ

`ನೀರು ಕೇಳಿದರೆ ಕಸ ಸುರಿಯಲು ಹೊರಟಿದ್ದಾರೆ...'

Published:
Updated:

ರಾಮನಗರ: ಬೆಂಗಳೂರು ಮಹಾನಗರದ ಕಸವನ್ನು ಬಿಡದಿ ಹೋಬಳಿಯ ಕೊಡಿಯಾಲ ಕರೇನಹಳ್ಳಿ ಬಳಿ ತಂದು ಸುರಿಯಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಈ ಭಾಗದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಈಗಾಗಲೇ ಬೆಂಗಳೂರಿನ ಬಹುತೇಕ ಕಡೆಯ ಕೊಳಚೆ ನೀರು ವೃಷಭಾವತಿ ಮೂಲಕ ಈ ಭಾಗದ ಸುತ್ತಮುತ್ತ ಹರಿಯುತ್ತಿರುವುದರಿಂದ ಶುದ್ಧ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಜನತೆಗೆ ಸರ್ಕಾರದ ಈ ನಿರ್ಧಾರ ನಿದ್ರೆ ಕೆಡಿಸುವಂತೆ ಮಾಡಿದೆ.ಒಂದೂವರೆ ದಶಕದ ಹಿಂದೆ ಶುದ್ಧ ಹಾಗೂ ತಿಳಿಯಾಗಿದ್ದ ಬೈರಮಂಗಲ ಕೆರೆಗೆ, ವೃಷಭಾವತಿ ನೀರಿನ ಸಂಪರ್ಕ ಕಲ್ಪಿಸಿ ಕೆರೆಯನ್ನು ಮಲಿನಗೊಳಿಸಲಾಯಿತು. ಆಗಿನಿಂದ ಬೈರಮಂಗಲ ಕೆರೆಗೆ ನೀರಿನ ಕೊರತೆಯೇ ಎದುರಾಗಿಲ್ಲ. ನಿತ್ಯ ಕೋಡಿ ಹರಿಯುತ್ತಿದೆ. ಆದರೆ ಇದು ಈ ಭಾಗದ ಜನತೆಯ ಜೀವನವನ್ನು ಅಕ್ಷರಶಃ ನರಕ ಮಾಡಿ ಬಿಟ್ಟಿದೆ!ಶುದ್ಧವಾಗಿದ್ದ ಕೆರೆಯ ತುಂಬ ಈಗ ಕೊಳಚೆ ನೀರು ಆವರಿಸಿದೆ. ಚರಂಡಿ ನೀರಿನ ಜತೆಗೆ ಬೆಂಗಳೂರಿನ ವಿವಿಧ ಕೈಗಾರಿಕೆಗಳು ಬಿಡುಗಡೆ ಮಾಡುವ ರಾಸಾಯನಿಕ ಹಾಗೂ ವಿಷಯುಕ್ತ ತ್ಯಾಜ್ಯದಿಂದ ಭೂಮಿಯೂ ಸತ್ವ ಕಳೆದುಕೊಂಡು ವಿಷಯುಕ್ತವಾಗಿ ಪರಿವರ್ತಿತವಾಗಿದೆ. ಈ ಕೊಳಚೆ ನೀರಿನಿಂದ ಕೃಷಿ ಕೈಗೊಳ್ಳುವುದು ಇಲ್ಲಿನ ಜನತೆಗೆ ಕಷ್ಟಕರವಾಗಿ ಪರಿಣಮಿಸಿದೆ. ಈ ಕಾರಣದಿಂದ ಈ ಭಾಗದ ಜನತೆ ಬೈರಮಂಗಲ ಜಲಾಶಯವನ್ನು `ಆ್ಯಸಿಡ್ ಟ್ಯಾಂಕ್' ಎಂದೇ ಕರೆಯುತ್ತಾರೆ.`ಎರಡು ದಶಕದ ಹಿಂದೆ ಬೈರಮಂಗಲ ಕೆರೆ ಬಳಿ ಸ್ವಚ್ಛಂದವಾಗಿ ಪಕ್ಷಿಗಳು ಹಾರಾಡುತ್ತಿದ್ದವು. ಕೆರೆಯಲ್ಲಿ ಮೀನುಗಳನ್ನು ಹಿಡಿಯುತ್ತಿದ್ದೆವು. ಈಜಾಡುತ್ತಿದ್ದೆವು. ಕುಡಿಯಲು ಇಲ್ಲಿನ ನೀರನ್ನೇ ಬಳಸುತ್ತಿದ್ದೆವು. ಆದರೆ ಅದೀಗ ಆ್ಯಸಿಡ್ ಟ್ಯಾಂಕ್ ಆಗಿ ಬಿಟ್ಟಿದೆ. ಕೆರೆಯಿಂದ ಮೈಲಿಗಟ್ಟಲೆ  ಕೆಟ್ಟ ದುರ್ವಾಸನೆ ಬೀರುತ್ತದೆ. ನೊರೆ ತುಂಬಿದ ನೀರು ಬೈರಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಹರಿದಾಡುತ್ತಿದೆ. ಈಗ ಈ ಕೆರೆಯಲ್ಲಿ ಮೀನೂ ಇಲ್ಲ, ಪಕ್ಷಿಗಳು ಇತ್ತ ಸುಳಿಯುವುದೂ ಇಲ್ಲ. ಒಂದು ವೇಳೆ ಇಲ್ಲಿನ ನೀರು ಕುಡಿದರೆ ವಿವಿಧ ಕಾಯಿಲೆಗಳು ಬಂದು ಸಾಯುವುದು ಗ್ಯಾರಂಟಿ' ಎಂದು ಗ್ರಾಮ ಪಂಚಾಯಿತಿ ಸದಸ್ಯ ಜಯಚಂದ್ರ ಬೇಸರದಿಂದ ಹೇಳುತ್ತಾರೆ.28 ಗ್ರಾಮಗಳಲ್ಲಿ ನೀರಿನ ಸಮಸ್ಯೆ!: ವೃಷಭಾವತಿ ನದಿಯಿಂದ ಬೈರಮಂಗಲ ಕೆರೆ ಕಲುಷಿತಗೊಂಡಿರುವ ಕಾರಣ ಬಿಡದಿ ಹೋಬಳಿಯ ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 28 ಗ್ರಾಮಗಳ ಕೊಳವೆ ಬಾವಿಗಳಲ್ಲಿ ಕುಡಿಯಲು ಯೋಗ್ಯವಾದ ನೀರಿಲ್ಲದಂತಾಗಿದೆ!ರಾಸಾಯನಿಕಗಳು ಯಾವುವು?: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಬಹುತೇಕ ಗ್ರಾಮಗಳಲ್ಲಿನ ಕೊಳವೆ ಬಾವಿಗಳಲ್ಲಿ ಕ್ಲೋರೈಡ್, ಸಲ್ಫೇಟ್, ಫ್ಲೋರೈಡ್, ನೈಟ್ರೇಟ್, ಐರನ್, ವಿಸರ್ಜಿತ ಪದಾರ್ಥಗಳು ಯಥೇಚ್ಛವಾಗಿವೆ ಎಂಬ ವರದಿ ಬಂದಿದೆ ಎಂದು ಬೈರಮಂಗಲ ಗ್ರಾಮ ಪಂಚಾಯಿತಿ ಅಧಿಕಾರಿಗಳು `ಪ್ರಜಾವಾಣಿ' ತಿಳಿಸುತ್ತಾರೆ.ಈ ನೀರಿನ ಸೇವನೆಯಿಂದ ಜನರಿಗೆ ಚರ್ಮ ಕಾಯಲೆ, ಅಲರ್ಜಿ, ತುರಿಕೆ, ಅಸ್ತಮಾ, ದಮ್ಮು, ಥೈರಾಯ್ಡ, ಬೇಸಿಗೆಯಲ್ಲಿ ವಾಂತಿ, ಭೇದಿಯಂತಹ ಕಾಯಿಲೆಗಳು ಹೆಚ್ಚಾಗಿ ಬರುತ್ತಿವೆ. ಈ ನೀರಿನಿಂದಾಗಿ ತೆಂಗಿನ ಮರಗಳು ರೋಗಗ್ರಸ್ತವಾಗಿವೆ. ಕಬ್ಬಿನ ಇಳುವರಿ ಕಡಿಮೆಯಾಗಿದ್ದು, ಕಬ್ಬು ರುಚಿ, ಸಿಹಿಯನ್ನು ಕಳೆದುಕೊಂಡಿದೆ. ಬತ್ತಕ್ಕೆ ಬೂದಿ ರೋಗ ಬರುತ್ತಿದೆ. ಈ ಭಾಗದಲ್ಲಿ ಬೆಳೆಯುವ ರೇಷ್ಮೆಗೂಡನ್ನು ಕಳಪೆ ಎಂದು ಹರಾಜಿನಲ್ಲಿ ಕಡಿಮೆ ಬೆಲೆಗೆ ಕೂಗಲಾಗುತ್ತಿದೆ ಎಂದು ಮಾಹಿತಿ ಒದಗಿಸಿದ್ದಾರೆ.ಇವುಗಳ ಜತೆಗೆ ಈ ಭಾಗದ ದನಕರುಗಳ ಮೇಲೂ ಈ ನೀರು ವ್ಯತಿರಿಕ್ತ ಪರಿಣಾಮ ಬೀರಿದೆ. ದನಕರುಗಳಿಗೆ ಹೆಚ್ಚಾಗಿ ಕಾಲು ಬಾಯಿ ರೋಗಗಳು ಕಾಣಿಸಿಕೊಳ್ಳುತ್ತಿದೆ. ಅಲ್ಲದೆ ಈ ಭಾಗದಲ್ಲಿನ ಕೆಲವು ಹಸುಗಳಿಗೆ ಸುಗಮವಾಗಿ ಹೆರಿಗೆ ಆಗಿಲ್ಲ ಎಂದೂ ತಿಳಿದು ಬಂದಿದೆ. ಇದರಿಂದ ಹಸುಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿರುವ ಉದಾಹರಣೆಗಳು ಇವೆ ಎಂದು ಅವರು ಹೇಳಿದ್ದಾರೆ.ಕುಡಿಯುವ ನೀರಿನ ಸಮಸ್ಯೆ ಎಲ್ಲೆಲ್ಲಿ ?:  ಬೈರಮಂಗಲ ಗ್ರಾಮ ಪಂಚಾಯಿತಿ ನೀಡಿರುವ ಮಾಹಿತಿ ಪ್ರಕಾರ ಬೈರಮಂಗಲ, ಕೋಡಿಹಳ್ಳಿ, ಅಂಚಿಪುರ, ಅಂಚಿಪುರ ಕಾಲೊನಿ, ಚಿಕ್ಕ ಬೈರಮಂಗಲ, ಚಿಕ್ಕಕುಂಟನಹಳ್ಳಿ, ಜನತಾ ಕಾಲೊನಿ, ಇಟ್ಟಮಡು, ತೋರೆದೊಡ್ಡಿ, ಅಬ್ಬನಕುಪ್ಪೆ, ವೃಷಭಾವತಿಪುರ, ರಾಮನಹಳ್ಳಿ, ಆಶ್ರಮದೊಡ್ಡಿ, ತಿಮ್ಮೇಗೌಡನದೊಡ್ಡಿ, ಎಂ.ಗೋಪಳ್ಳಿ, ಕೆ.ಗೋಪಳ್ಳಿ, ಚೌಕಳ್ಳಿ ಕಾಲೊನಿ, ಹೊಸೂರು, ಬನ್ನಿಗಿರಿ, ತಾಳಗುಪ್ಪೆ, ಅಂಗರಹಳ್ಳಿ, ಹೆಗ್ಗಡಗೆರೆ, ಬಾಣಂದೂರು, ಹುಚ್ಚಮ್ಮದೊಡ್ಡಿ, ಕೊಡಿಯಾಲ, ಕೊಡಿಯಾಲ ಕರೇನಹಳ್ಳಿ, ಚನ್ನಮ್ಮನಹಳ್ಳಿ ಗ್ರಾಮಗಳ ನೀರು ವಿವಿಧ ರಾಸಾಯನಿಕ ಪದಾರ್ಥಗಳ ಮಿಶ್ರಣವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.`ಕೊಡಿಯಾಲ ಕರೇನಹಳ್ಳಿ ಗ್ರಾಮದಲ್ಲಿ ನಾಲ್ಕು ಕೊಳವೆ ಬಾವಿಗಳಿದ್ದು, ಯಾವುದೂ ಕುಡಿಯಲು ಯೋಗ್ಯವಾಗಿಲ್ಲ. ಇಲ್ಲಿನ ಕೆಲ ಸ್ಥಿತಿವಂತರು ಕುಡಿಯಲು ಬಿಡದಿಯಿಂದ ಕ್ಯಾನ್‌ಗಳಲ್ಲಿ ನೀರನ್ನು ತರಿಸಿಕೊಂಡು ಕುಡಿಯುತ್ತಾರೆ. ಬಡವರು ಇಲ್ಲಿ ಲಭ್ಯ ಇರುವ ನೀರನ್ನೇ ಕುಡಿಯುತ್ತಿದ್ದಾರೆ. ಇನ್ನು ಇಲ್ಲಿ ಬಿಬಿಎಂಪಿ ಕಸ ವಿಲೇವಾರಿ ಘಟಕ ಅರಂಭವಾದರೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನತೆಯ ಬದುಕು ನರಕವಾಗುತ್ತದೆ' ಎಂದು ಗ್ರಾ. ಪಂ. ಸದಸ್ಯ ಗೋಪಾಲ್ ಪ್ರತಿಕ್ರಿಯಿಸುತ್ತಾರೆ.

ಬೀಗ ಹಾಕುವ ಎಚ್ಚರಿಕೆ

ಬಿಡದಿ ಹೋಬಳಿ ಕೊಡಿಯಾಲ ಕರೇನಹಳ್ಳಿಯಲ್ಲಿ ಬೆಂಗಳೂರಿ ಕಸವನ್ನು ಸುರಿಯಲು ನಿರ್ಧರಿಸಿರುವ ಸರ್ಕಾರದ ಧೋರಣೆಯನ್ನು ವಿರೋಧಿಸಿ ಕರ್ನಾಟಕ ಜನಾಂದೋಲನ ಸಂಘಟನೆಯ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

`ಇಲ್ಲಿ ಕಸ ಸುರಿಯುವ ಪ್ರಕ್ರಿಯೆಯನ್ನು ಐದು ದಿನಗಳ ಒಳಗೆ ಹಿಂದೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು' ಎಂದು ಕರ್ನಾಟಕ ಜನಾಂದೋಲನ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ. ಮರಿಯಪ್ಪ ಎಚ್ಚರಿಸಿದರು.ಹೆಚ್ಚವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ  ಶಕುಂತಲಮ್ಮ, ತಾಲ್ಲೂಕು ಘಟಕದ ಅಧ್ಯಕ್ಷೆ  ಕಮಲಾ ರಾಜು, ಉಪಾಧ್ಯಕ್ಷೆ ಸುಲ್ತಾನಾ  ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry