ಸೋಮವಾರ, ನವೆಂಬರ್ 18, 2019
22 °C

ನೀರು = ಖಾಲಿ ಕೊಡ

Published:
Updated:
ನೀರು = ಖಾಲಿ ಕೊಡ

ಕರ್ನಾಟಕದ ಮತದಾರರ ಮನೆ ಹೊಸ್ತಿಲಿನಲ್ಲಿ ವಿಧಾನಸಭಾ ಚುನಾವಣೆ ಬಂದು ಕೂತಿದೆ. ಮುಂದಿನ ಐದು ವರ್ಷಗಳ ಅವಧಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತ್ತೊಂದು ಅವಕಾಶ ಮತದಾರರ ಮುಂದಿದೆ. ಕರ್ತವ್ಯಭ್ರಷ್ಟನಾಗುವ ಚುನಾಯಿತ ಅಭ್ಯರ್ಥಿಗಳನ್ನು ವಾಪಸು ಕರೆಸಿಕೊಳ್ಳುವ ಅಧಿಕಾರ ಇಲ್ಲದ ಭಾರತದ ಮತದಾರರ ಕೈಯಲ್ಲಿರುವುದು ಮತದಾನದ ಮೂಲಕ ಸಮರ್ಥರನ್ನು ಆಯ್ಕೆ ಮಾಡುವ ಅವಕಾಶ ಮಾತ್ರ. ಮತದಾರರು ಇದನ್ನು ವಿವೇಚನೆಯಿಂದ ಬಳಸುತ್ತಿದ್ದಾರೆಯೇ? ಇಲ್ಲವೆ ಅವರೂ ರಾಜಕೀಯ ನಾಯಕರು ಹರಿಯಬಿಡುವ ಜಾತಿ,ಧರ್ಮ ಮತ್ತು ದುಡ್ಡಿನ ಮಹಾಪೂರದಲ್ಲಿ ಕೊಚ್ಚಿಹೋಗುತ್ತಿದ್ದಾರೆಯೇ? ಚುನಾವಣಾ ಕಾಲದಲ್ಲಿ ನಿಜವಾಗಿ ನಡೆಯಬೇಕಾದ ಚರ್ಚೆಗಳೇನು?ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಒಂದೇ ಒಂದು ಯೋಜನೆ ಯಾಕೆ ಪೂರ್ಣಗೊಂಡಿಲ್ಲ?  ರಾಜ್ಯದ 5875 ಜನವಸತಿ ಪ್ರದೇಶಗಳಲ್ಲಿ ಈಗಲೂ ಯಾಕೆ ಕುಡಿಯುವ ನೀರಿಲ್ಲ?  ರಸ್ತೆ ಸಂಪರ್ಕ ಇಲ್ಲದ ಹಳ್ಳಿಗಳು ಇನ್ನೂ ಯಾಕೆ ಇವೆ? ಇರುವ ರಸ್ತೆಗಳು ಹೊಂಡಗಳಿಂದ ಯಾಕೆ ತುಂಬಿವೆ? ಮನೆಬಾಗಿಲಿಗೆ ಬರುವ ಅಭ್ಯರ್ಥಿಗಳನ್ನು ಮತದಾರರು ಕೇಳಬೇಕಾಗಿರುವುದು ಈ ಪ್ರಶ್ನೆಗಳನ್ನಲ್ಲವೇ?
..........

ಸ್ವಾತಂತ್ರ್ಯಾನಂತರ ಹದಿಮೂರು ಸರ್ಕಾರಗಳ ರಾಜ್ಯಭಾರದ ನಂತರವೂ ರಾಜ್ಯದ 5,875 ಗ್ರಾಮೀಣ ಜನವಸತಿಗಳಿಗೆ  ಶುದ್ಧ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗಿಲ್ಲ. ಉಳಿದ ಗ್ರಾಮಗಳ ಪರಿಸ್ಥಿತಿಯೂ ಅಷ್ಟೇನು ತೃಪ್ತಿದಾಯಕವಾಗಿಲ್ಲ. 2011ರ ಜನಗಣತಿಯ ಅಂಕಿಅಂಶಗಳ ಪ್ರಕಾರ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿರುವ 59,575 ಜನವಸತಿಗಳಲ್ಲಿ 3.83 ಕೋಟಿ ಜನರು ವಾಸಿಸುತ್ತಿದ್ದಾರೆ.ಕಳೆದ ಐದು ವರ್ಷಗಳಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆಗಳಿಗಾಗಿಯೇ ಸುಮಾರು ರೂ. 6,600 ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಒಂದುವರೆ ಲಕ್ಷಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸರ್ಕಾರಿ ಭಾಷೆಯಲ್ಲಿ ಅಭಿವೃದ್ದಿಯ ಚಿತ್ರ ಬಿಡಿಸಿಡುತ್ತಾರೆ. ಕುಡಿಯುವ ನೀರು ಪೂರೈಕೆಗಾಗಿಯೇ ವೈವಿಧ್ಯಮಯ ಯೋಜನೆಗಳಿವೆ. ಆದರೆ ವಾಸ್ತವ ಸ್ಥಿತಿ ನಿರಾಶದಾಯಕ.ರಾಜ್ಯದ 59,575 ಜನವಸತಿಗಳ ಪೈಕಿ 21,333 ಜನವಸತಿಗಳಿಗೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ.  32,367 ಜನವಸತಿಗಳಿಗೆ ಭಾಗಶಃ ಶುದ್ಧ ಕುಡಿಯುವ ನೀರು ದೊರೆಯುತ್ತಿದೆ. ಸರ್ಕಾರವೇ ಒದಗಿಸುವ ಅಂಕಿಅಂಶಗಳ ಪ್ರಕಾರ ಪೂರ್ಣ ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರು ಪಡೆಯುತ್ತಿರುವ ಗ್ರಾಮೀಣ ಜನವಸತಿಗಳ ಪ್ರಮಾಣ ಶೇಕಡ 35.80 ಮಾತ್ರ. ಶೇ 54.33ರಷ್ಟು ಜನವಸತಿಗಳಿಗೆ ಭಾಗಶಃ ಲಭ್ಯತೆ ಇದೆ. ಶೇ 9.87ರಷ್ಟು ಜನವಸತಿಗಳಿಗೆ ಶುದ್ಧ ನೀರು ದೊರೆಯುತ್ತಿಲ್ಲ. ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಕಾರ್ಯಕ್ರಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇಕಡ 50ರ ಅನುಪಾತದಲ್ಲಿ ಅನುದಾನ ಒದಗಿಸುತ್ತವೆ.ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಪೂರೈಕೆ ಕಾರ್ಯಕ್ರಮ (ಎನ್‌ಆರ್‌ಡಿಡಬ್ಲ್ಯುಪಿ) ಹಾಗೂ ಭಾರತ ನಿರ್ಮಾಣ ಕಾರ್ಯಕ್ರಮಗಳು ಈ ದಿಸೆಯಲ್ಲಿ ಜಾರಿಯಲ್ಲಿರುವ ಪ್ರಮುಖ ಯೋಜನೆಗಳು. ಉತ್ತರ ಕರ್ನಾಟಕದ 12 ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಒದಗಿಸುವ ವಿಶ್ವ ಬ್ಯಾಂಕ್ ನೆರವಿನ ಜಲನಿರ್ಮಲ- ಎರಡನೇ ಹಂತದ ಯೋಜನೆ ಕೂಡ 2010ರಿಂದ ಅನುಷ್ಠಾನದಲ್ಲಿದೆ. ಸತತ ಬರ ಎದುರಿಸುತ್ತಿರುವ ಬಾಗಲಕೋಟೆ, ವಿಜಾಪುರ, ದಾವಣಗೆರೆ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ನೆರವಿನ ಮರುಭೂಮಿ ಅಭಿವೃದ್ಧಿ ಯೋಜನೆಯೂ ಜಾರಿಯಲ್ಲಿದೆ.ಬಹುತೇಕ ಕಾಮಗಾರಿಗಳು ಪ್ರಗತಿಯಲ್ಲಿ: ಎನ್‌ಆರ್‌ಡಿಡಬ್ಲ್ಯುಪಿ ಯೋಜನೆಯ ಅಡಿಯಲ್ಲಿ 2008-09ರಿಂದ 2012ರ ಅಕ್ಟೋಬರ್‌ವರೆಗೆ ರೂ. 62,46.12 ಕೋಟಿ ವೆಚ್ಚ ಮಾಡುವ ಗುರಿ ಹೊಂದಲಾಗಿತ್ತು. ಈ ಪೈಕಿ ರೂ. 4,248.01 ಕೋಟಿ ವೆಚ್ಚ ಮಾಡಲಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡ ಹಾಗೂ ಯೋಜನೆಯಡಿ ಹೆಚ್ಚು ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಎನ್‌ಆರ್‌ಡಿಡಬ್ಲ್ಯುಪಿ ಮತ್ತು ಭಾರತ ನಿರ್ಮಾಣ ಯೋಜನೆಗಳ ಅಡಿಯಲ್ಲಿ 2008ರಿಂದ ಈವರೆಗೆ 27,475 ಗ್ರಾಮೀಣ ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ.ರಾಜೀವ್ ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ 2005-06ರಿಂದ 2007-08ರ ಅವಧಿಯಲ್ಲಿ 144 ಬಹುಗ್ರಾಮ ನೀರು ಸರಬರಾಜು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ರೂ. 877.25 ಕೋಟಿ ವೆಚ್ಚದಲ್ಲಿ 1,383 ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಈ ಯೋಜನೆಗಳ ಹಿಂದಿತ್ತು. ಈ ಪೈಕಿ 2012ರ ಮಾರ್ಚ್ ವೇಳೆಗೆ 57 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿದ್ದವು. 87 ಯೋಜನೆಗಳು ಇನ್ನೂ ಪ್ರಗತಿಯಲ್ಲಿವೆ. 2009-10 ಮತ್ತು 2010-11ರಲ್ಲಿ ಈ ಯೋಜನೆಯಡಿ 112 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 1,219 ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಗುರಿ ಈ ಯೋಜನೆಗಳ ಹಿಂದಿದೆ.ಯೋಜನೆ ಇದ್ದರೂ ನೀರಿಲ್ಲ: ಕೇಂದ್ರ ಸರ್ಕಾರ ನೀರು ಸರಬರಾಜು ಯೋಜನೆಗಳಿಗೆ ನೀಡಿದಷ್ಟೇ ಆದ್ಯತೆಯನ್ನು ಜಲಮೂಲಗಳ ಸಂರಕ್ಷಣೆ ಮತ್ತು ಮರುಪೂರಣಕ್ಕೂ ನೀಡುತ್ತದೆ. ಈ ಕೆಲಸಗಳಿಗೆ ಅಗತ್ಯ ಅನುದಾನವನ್ನೂ ನೀಡುತ್ತದೆ. ಆದರೆ, ರಾಜ್ಯ ಸರ್ಕಾರ ನೀರು ಸರಬರಾಜು ಯೋಜನೆಯ ಕಾಮಗಾರಿಗಳಿಗೆ ನೀಡಿದಷ್ಟು ಆದ್ಯತೆಯನ್ನು ಇಂಗು ಗುಂಡಿಗಳನ್ನು ತೋಡುವುದು, ತಡೆ ಅಣೆಕಟ್ಟುಗಳ ನಿರ್ಮಾಣ, ತೋಡು ಬಾವಿಗಳ ನಿರ್ಮಾಣ, ಮಳೆ ನೀರು ಸಂಗ್ರಹ ಕಾಮಗಾರಿಗಳಿಗೆ ನೀಡುತ್ತಿಲ್ಲ. ಪರಿಣಾಮವಾಗಿ ಯೋಜನೆಗಳಿದ್ದರೂ ನೀರು ಪೂರೈಕೆಯಾಗದ ಸ್ಥಿತಿ ಹಲವು ಗ್ರಾಮಗಳಲ್ಲಿ ಇದೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಗಳ ಪ್ರಕಾರ, 2.20 ಲಕ್ಷ ಕೈಪಂಪು ಕೊಳವೆ ಬಾವಿಗಳಿವೆ. 27,000 ಕೊಳವೆ ನೀರು ಸರಬರಾಜು ಯೋಜನೆಗಳು ಮತ್ತು 37,000 ಕಿರು ನೀರು ಸರಬರಾಜು ಯೋಜನೆಗಳಿವೆ. 144 ಬಹುಗ್ರಾಮ ನೀರು ಸರಬರಾಜು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ, ಕೊಳವೆ ಬಾವಿಗಳಲ್ಲಿ ಶೇಕಡ 21ರಷ್ಟು ಯಾವಾಗಲೂ ನೀರಿನ ಕೊರತೆ ಎದುರಿಸುತ್ತಿರುತ್ತವೆ. ಉಳಿದ ಯೋಜನೆಗಳನ್ನೂ ನೀರಿನ ಕೊರತೆ ಕಾಡುತ್ತಿದೆ. 

ಪ್ರತಿಕ್ರಿಯಿಸಿ (+)