ನೀರು: ಗ್ರಾ.ಪಂ.ವಾರು ಸಹಾಯವಾಣಿಗೆ ಸೂಚನೆ

7

ನೀರು: ಗ್ರಾ.ಪಂ.ವಾರು ಸಹಾಯವಾಣಿಗೆ ಸೂಚನೆ

Published:
Updated:

ವಿಜಾಪುರ: `ಕುಡಿಯುವ ನೀರಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಹಾಯವಾಣಿ ಸ್ಥಾಪಿಸಬೇಕು~ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅಧಿಕಾರಿಗಳಿಗೆ ಸೂಚಿಸಿದರು.ಶುಕ್ರವಾರ ಇಲ್ಲಿ ನಡೆದ ಬರ ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ತಹಶೀಲ್ದಾರ ಕಚೇರಿಗಳಲ್ಲಿ 24 ಗಂಟೆಗಳ ಕಾಲವೂ ನಿರಂತರವಾಗಿ ಮಾಹಿತಿ ಪಡೆಯಲು ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕು.

 

ಅದಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ಪಾಳಿ ಪ್ರಕಾರ ನಿಯೋಜಿಸಬೇಕು. ದೂರವಾಣಿ ಸಂಖ್ಯೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು ಎಂದರು.ವಿಫಲ ಕೊಳವೆ ಬಾವಿಗಳನ್ನು ಮುಚ್ಚಿಸಬೇಕು. ಟ್ಯಾಂಕರ್‌ನಿಂದ ಪೂರೈಸುವ ನೀರಿನ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಕೆಲ ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವೇ ಎಂಬುದನ್ನು ಗುಣಮಟ್ಟದ ಪರಿಶೀಲನೆಯಿಂದ ಖಚಿತಪಡಿಸಿಕೊಳ್ಳಬೇಕು.ಕುಡಿಯಲು ಯೋಗ್ಯವಲ್ಲದ ಕೊಳವೆ ಬಾವಿಗಳ ಮೇಲೆ ಕೆಂಪು ಶಾಹಿಯಿಂದ `ಕುಡಿಯಲು ಯೋಗ್ಯವಲ್ಲ~ ಎಂದು ಬರೆಯಿಸಬೇಕು. ಜನರು ಗೊತ್ತಿಲ್ಲದೆ ನೀರು ಕುಡಿದು ಆರೋಗ್ಯದ ಮೇಲೆ ದುಷ್ಪರಿಣಾಮ ಮಾಡಿಕೊಳ್ಳುವ ಅಥವಾ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಹೊರ ರಾಜ್ಯಗಳಿಗೆ ಜಿಲ್ಲೆಯಿಂದ ಮೇವು ಸಾಗಾಣಿಕೆಯಾಗುವುದನ್ನು ತಡೆಯಲು ತೀವ್ರ ನಿಗಾ ವಹಿಸಬೇಕು. ಇಂತಹ ಪ್ರಕರಣಗಳು ಕಂಡು ಬಂದರೆ ತಕ್ಷಣ ಮೇವು ಸಾಗಿಸುವ ವಾಹನಗಳನ್ನು ವಶಪಡಿಸಿಕೊಂಡು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ತಹಶೀಲ್ದಾರರಿಗೆ ಆದೇಶ ನೀಡಿದರು.ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾಗಿ ಅನುಷ್ಠಾನಕ್ಕೆ ತರುವ ಮೂಲಕ ಜನ ಗುಳೆ ಹೋಗುವುದನ್ನು ತಡೆಯಬೇಕು.ಕೆಲಸ ಕೇಳಿ ಬಂದವರಿಗೆ ತಕ್ಷಣ ಕೆಲಸ ನೀಡಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಬೇಸಿಗೆಯಲ್ಲಿ ಎದುರಾಗಬಹುದಾದ ಸಾಂಕ್ರಾಮಿಕ ರೋಗಗಳ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಜನ ಮತ್ತು ಜಾನುವಾರುಗಳ ಸಾಂಕ್ರಾಮಿಕ ರೋಗ ತಡೆಗೆ ವ್ಯಾಪಕ ಪ್ರಚಾರ, ಔಷಧಿಗಳ ದಾಸ್ತಾನು, ನೀರಿನ ಶುದ್ಧೀಕರಣ, ಚರಂಡಿಗಳ ಸ್ವಚ್ಛತೆ, ಕೊಳವೆ ಬಾವಿಗಳ ಸುತ್ತ ಕೊಳಚೆ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.ಪಶು ಇಲಾಖೆಯ ನಿರೀಕ್ಷಕರು ಕಡ್ಡಾಯವಾಗಿ ಗೋಶಾಲೆಗಳಿಗೆ ಭೇಟಿ ನೀಡಬೇಕು. ಅಲ್ಲದೇ ಜಿಲ್ಲೆಯ ಇತರ ಭಾಗದಲ್ಲಿ ಗೋಶಾಲೆಗಳು ಅವಶ್ಯಕತೆಗೆ ಅನುಗುಣವಾಗಿ ಆರಂಭಿಸಬೇಕು ಎಂದರು.

ಜಿಪಂ ಸಿಇಒ ಎ.ಎನ್. ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಕಾಶೀನಾಥ ಪವಾರ, ಉಪ ವಿಭಾಗಾಧಿಕಾರಿ ಸುರೇಶ ಜಿರ್ಲಿ ಇತರರು ಸಭೆಯಲ್ಲಿದ್ದರು.ಸಭೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಳಸದ, ಜಿಲ್ಲೆಯ 57 ಜನವಸತಿಗಳ 20 ಸಾವಿರ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇಂಡಿ ಮತ್ತು ವಿಜಾಪುರ ತಾಲ್ಲೂಕುಗಳಲ್ಲಿ ಏಳು ಗೋಶಾಲೆಗಳನ್ನು ಆರಂಭಿಸಲಾಗಿದೆ.ಕುಡಿಯುವ ನೀರಿಗಾಗಿ ಜಿಲ್ಲಾ ಪಂಚಾಯಿತಿಗೆ 4.30 ಕೋಟಿ ಬಿಡುಗಡೆ ಮಾಡಲಾಗಿದೆ. ಸಿಆರ್‌ಎಫ್ ಅನುದಾನದಲ್ಲಿ 4.59 ಕೋಟಿ ರೂಪಾಯಿಯನ್ನು ಶಾಸಕರ ನೇತೃತ್ವದ ಕಾರ್ಯಪಡೆ ಅನುಮೋದಿಸಿದ ಕಾಮಗಾರಿಗೆ ನೀಡಲಾಗಿದೆ ಎಂದರು.ಜಿಲ್ಲೆಯ 660 ಜನ ವಸತಿಗಳ ಪೈಕಿ ಶೇ.25ರಷ್ಟು ಜನ ವಸತಿಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರಬಹುದು ಎಂದು ಅಂದಾಜಿಸಲಾಗಿದೆ.ಕುಡಿಯುವ ನೀರಿನ ಸಮಸ್ಯೆ ನಿವಾರಿಸಲಿಕ್ಕಾಗಿ ಮುಂದಿನ ಮೂರು ತಿಂಗಳ ಅವಧಿಗೆ ಕಾಲುವೆಗೆ ನೀರು ಹರಿಸಬೇಕು ಎಂದು ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆದು ಕೋರಲಾಗಿದೆ ಎಂದು ಹೇಳಿದರು.ದತ್ತಿ ಉಪನ್ಯಾಸ ಇಂದು

ವಿಜಾಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ದಿ.ಮಹಾಗುಂಡಪ್ಪ ಕುಬಸದ ಸ್ಮರಣಾರ್ಥ ದತ್ತಿ ಉಪನ್ಯಾಸ ಇದೇ 4ರಂದು ಬೆಳಿಗ್ಗೆ 10.30ಕ್ಕೆ ಮುಳವಾಡದ ಮಲ್ಲಿಕಾರ್ಜುನ ಪ್ರೌಢ ಶಾಲೆಯಲ್ಲಿ ನಡೆಯಲಿದೆ.

ಬಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಯು.ಎನ್. ಕುಂಟೋಜಿ ಉಪನ್ಯಾಸ ನೀಡುವರು. ಎಸ್.ಆರ್. ಪಾಟೀಲ, ಎಸ್.ಆರ್. ಮಾದನಶೆಟ್ಟಿ, ಮಲ್ಲಿಕಾರ್ಜುನ ಯಂಡಿಗೇರಿ ಪಾಲ್ಗೊಳ್ಳಲಿದ್ದಾರೆ.ಪರೀಕ್ಷೆಯಲ್ಲಿ ಸಾಧನೆ

ವಿಜಾಪುರ: ಚಿತ್ರದುರ್ಗದ ನವೋದಯ ಪ್ರಕಾಶನದಿಂದ ಇತ್ತೀಚೆಗೆ ಏರ್ಪಡಿಸಿದ್ದ ನವೋದಯ ಕನ್ನಡ ಪರೀಕ್ಷೆಯಲ್ಲಿ ಇಲ್ಲಿಯ ಆದರ್ಶ ವಿದ್ಯಾ ಮಂದಿರ ಪೂರ್ವ ಪ್ರಾಥಮಿಕ ಶಾಲೆಯ ಮೂವರು ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry