ನೀರು: ಜಾನುವಾರು ಹಾಹಾಕಾರ!

7

ನೀರು: ಜಾನುವಾರು ಹಾಹಾಕಾರ!

Published:
Updated:

ಆಳಂದ: ಕೈಕೊಟ್ಟ ಮಳೆಗಾಲದಿಂದ ತಾಲ್ಲೂಕಿನ ರೈತರು ಆತಂಕದಲ್ಲಿ ಮುಳಗಿದರೆ, ಜಾನುವಾರುಗಳು ದಿನವೂ ಕುಡಿಯುವ ನೀರಿಗಾಗಿ ತತ್ವಾರ ಪಡುವಂತಾಗಿದೆ. ಪ್ರಸಕ್ತ ಸಾಲಿನ ಮಳೆಗಾಲದ ಅವಧಿ ಮುಗಿದು ಇನ್ನು ಚಳಿಗಾಲದ ಆರಂಭ ಕಾಲ ಹೀಗಾಗಿ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಸುಮಾರು 262 ಮಿ.ಮೀ.ನಷ್ಟು ಮಳೆಯಾಗಿದ್ದರಿಂದ ತಡವಾಗಿ ಬಿತ್ತನೆ ನಡೆದವು.ಅಲ್ಪಸ್ವಲ್ಪ ಮಳೆಯಲ್ಲಿಯೇ ರೈತರ ಹೊಲಗಳಲ್ಲಿ ಬೆಳೆಗಳು ಬೆಳದು ನಿಂತಿವೆ. ಖಜೂರಿ ವಲಯದ ಹೊದಲೂರು, ಕಿಣ್ಣಿಸುಲ್ತಾನ, ತಡಕಲ್ ಗ್ರಾಮಗಳ ಸುತ್ತ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ  ಅಧಿಕವಾಗಿ ತೊಗರಿ ಬೆಳೆಯುವ ರೈತರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.ಬೆಳೆ ಹಾನಿ, ಕಡಿಮೆ ಇಳುವರಿ ತಾಲ್ಲೂಕಿನೆಲ್ಲಡೆ ಸಾಮಾನ್ಯವಾಗಿದೆ. ಇದರ ಜೊತೆಗೆ ಹೊಲ ಗದ್ದೆ, ಹಳ್ಳ ಕೊಳ್ಳ, ಕೆರೆ ಕುಂಟೆಗಳಲ್ಲಿ ಒಮ್ಮೆಯೂ ನೀರು ಹರೆದಾಡಲಿಲ್ಲ. ಹೀಗಾಗಿ ರೈತರ ಹೊಲ ಗದ್ದೆಗಳಲ್ಲಿನ ಬಾವಿಗಳು ಸಂಪೂರ್ಣ ಬತ್ತಿ ಹೋಗುವ ಹಂತದಲ್ಲಿವೆ.

 

ಅಂತರ್ಜಲಮಟ್ಟ ಕುಸಿತದಿಂದ ಕೊಳವೆ ಬಾವಿಗಳಿಂದಲೂ ಹೊರಹೊಮ್ಮುತ್ತಿಲ್ಲ ಎಂದು ಅನೇಕ ರೈತರು ಹೇಳುವುದು ಸಾಮಾನ್ಯವಾಗಿದೆ. ಹೀಗೆ ಮಳೆಯನ್ನೇ ಆಧರಿಸಿದ ದನಕರು, ಎಮ್ಮೆ, ಎತ್ತು ಮತ್ತು ಕುರಿಗಳಿಗೆ ದಿನಾಲು ಕುಡಿಯಲು ನೀರು ಪೂರೈಸುವುದು ರೈತರಿಗೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಕೆಲವರು ಬೆರಳೆಣಿಕೆಷ್ಟಿರುವ ಜಾನುವಾರುಗಳಿಗೆ ಹೊತ್ತು ತಂದು ನೀರು ಕುಡಿಸುವುದರಲ್ಲಿ  ತೊಂದರೆ ಎದುರಿಸುತ್ತಿದ್ದಾರೆ.ಇನ್ನು ಹತ್ತಾರು ದನಕರುಗಳು, ಕುರಿಗಳ ಹಿಂಡುಗಳಿಗೆ ನೀರು ಸಿಗುವುದು ಹಳ್ಳಿಗಳಲ್ಲಿ ದುಸ್ತರವಾಗಿದೆ. ಅನೇಕ ಕಡೆ ಚರಂಡಿ ನೀರು ಕುಡಿದು ಜಾನುವಾರುಗಳಿಗೆ ಕಾಲುಬಾಯಿ ಜ್ವರ ಹೆಚ್ಚುತ್ತಿದೆ ಎಂದು ಪಶು ಇಲಾಖೆಯ ಸಿಬ್ಬಂದಿ ಗುಂಡಪ್ಪ ಗೋಳೆ `ಪ್ರಜಾವಾಣಿ~ಗೆ ತಿಳಿಸಿದರು.ಗ್ರಾಮದಲ್ಲಿರುವ ಕೊಳವೆ ಬಾವಿಗಳಿಗೆ ಹಿಂಡು ಹಿಂಡಾಗಿ ಜಾನುವಾರುಗಳನ್ನು ತಂದು ನಿಲ್ಲಿಸಿ  ನೀರು ಕುಡಿಸುವುದು ಬೆಳಿಗ್ಗೆ ಮತ್ತು ಸಾಯಂಕಾಲ ಎಲ್ಲೆಡೆ ಕಾಣತೊಡಗಿದೆ. ತಾಲ್ಲೂಕಿನ ಸರಸಂಬಾ, ಹಿರೋಳಿ, ಕಾಮನಹಳ್ಳಿ, ತೀರ್ಥ ತಾಂಡಾ, ಮತ್ತಿತರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದರಿಂದ ಈಗಲೇ ಜಾನುವಾರುಗಳಿಗೆ ಕುಡಿಯಲು ನೀರು ದೊರೆಯದಿರುವುದು ಕಾಣುತ್ತಿದೆ. ಜನವರಿ ನಂತರ ದಿನಗಳಲ್ಲಿ ಜಾನುವಾರುಗಳಿಗೆ ನೀರು ಎಲ್ಲಿಂದ ತಂದು ಹಾಕಬೇಕು ಎಂಬುದು ರೈತರಲ್ಲಿ ಭೀತಿ ಹುಟ್ಟಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry