ಭಾನುವಾರ, ಜನವರಿ 19, 2020
26 °C

ನೀರು ತೆಗೆಯಲೂ ಸೂರ್ಯನ ನೆರವು

ಆರ್.ಎನ್.ಜೋಶಿ Updated:

ಅಕ್ಷರ ಗಾತ್ರ : | |

ವಿದ್ಯುತ್ ಅಭಾವದಿಂದ ಕೃಷಿಗೆ ನೀರಿಲ್ಲ, ಬೆಳೆಗಳು ಒಣಗುತ್ತಿವೆ ಎಂದು ಇನ್ನು ಮುಂದೆ ಹೇಳಿದರೆ ಆತ್ಮ ವಂಚನೆ ಮಾಡಿಕೊಂಡಂತೆ. ಏಕೆ ಅಂತೀರಾ? ಇದುವೇ ಪರಿಸರದ ಚಮತ್ಕಾರ. ಕಾರಣ, ಸೂರ್ಯನ ಬೆಳಕಿನ ಸೌರ ಶಕ್ತಿ ಇಂದು ಕೇವಲ ಸೋಲಾರ್ ಕುಕ್ಕರ್, ಸೋಲಾರ್ ಬ್ಯಾಟರಿಗಳು, ಸೋಲಾರ್ ದೀಪಗಳು, ಕ್ಯಾಲ್ಕುಲೇಟರ್‌ಗಳು, ಮನೆಗಳಲ್ಲಿ ನೀರು ಕಾಯಿಸುವುದಕ್ಕಷ್ಟೇ ಸೀಮಿತಗೊಂಡಿಲ್ಲ. ಬದಲಿಗೆ ಕೊಳವೆಬಾವಿಗಳಿಂದ ಮತ್ತು ನದಿಯಿಂದ ನೀರು ತೆಗೆಯಲೂ ಬಳಸಲಾಗುತ್ತಿದೆ!ವಿಚಿತ್ರ ಎನಿಸಿದರೂ ಇದು ಸತ್ಯ. ಹಾಗಂತ ಸೌರ ಶಕ್ತಿ ಬಳಕೆ ಬಲು ದುಬಾರಿ ಎಂದು ಭಾವಿಸಬೇಡಿ. ಸರ್ಕಾರದಿಂದ ವಿದ್ಯುತ್ ಪಡೆಯಲು ತಗಲುವ ಖರ್ಚಿನಲ್ಲಿಯೇ ಸೋಲಾರ್ ಶಕ್ತಿಯಿಂದ ನೀರು ಎತ್ತಬಹುದು. ಇಂಥದೊಂದು ಪ್ರಯೋಗವನ್ನು ಮುಧೋಳದ ಕೃಷಿಕರೊಬ್ಬರ ತೋಟದಲ್ಲಿ ಮಾಡಲಾಗಿದೆ. ಕೊಳವೆಬಾವಿ ಮೂಲಕ ನೀರು ಎತ್ತುವ ಸಾಧನ ದೊಡ್ಡ ರೈತರಿಗೂ ಕೈಗೆಟುಕದಷ್ಟು ದುಬಾರಿಯಾದ ಕಾಲವೊಂದಿತ್ತು. ಆದುದರಿಂದ ಸೂರ್ಯನ ಶಾಖ ತಗುಲಿಸಿಕೊಳ್ಳಲು ಯಾರೂ ಮುಂದೆ ಬಂದಿಲ್ಲ. `ಸೌರಶಕ್ತಿ ಉಪಕರಣಗಳನ್ನು ಈ ಮುಂಚೆ ಹೊರದೇಶಗಳಿಂದ ತರಿಸಿಕೊಂಡು ಮಾರಬೇಕಿತ್ತು. ಅದಕ್ಕೆ ದುಬಾರಿ ಆಗಿತ್ತು. ಆದರೆ ಇದೀಗ ಭಾರತದಲ್ಲಿಯೇ ಉಪಕರಣ ತಯಾರಾಗುತ್ತಿದ್ದು, ಬೆಲೆ ಕುಸಿದಿದೆ' ಎನ್ನುತ್ತಾರೆ ಮಾಪಾ ವಿವಸ್ವನ ಕಂಪೆನಿಯ ನಿರ್ದೇಶಕ ವಾಗೀಶ ಬಿ.ಜೆ.`ಸರ್ಕಾರದಿಂದ ವಿದ್ಯುತ್‌ಗಾಗಿ ಪಂಪ್‌ಸೆಟ್, ಟ್ರಾನ್ಸ್‌ಫಾರ್ಮರ್ (ಟಿ.ಸಿ) ಇತ್ಯಾದಿ ಪಡೆಯಲು ವಿದ್ಯುತ್ ನಿಗಮಕ್ಕೆ ನೀಡುವ ಹಣಕ್ಕೂ ಸೌರ ಶಕ್ತಿಯಿಂದ ನೀರೆತ್ತಲು ತಗಲುವ ವೆಚ್ಚಕ್ಕೂ ಸರಿಸಮ ಒಂದೇ ತೆರನಾದ ದರವಾಗುತ್ತದೆ. ಸರ್ಕಾರದಿಂದ ಪ್ರತಿಶತ 30ರಷ್ಟು ರಿಯಾಯಿತಿ ಕೂಡ ಇದಕ್ಕೆ ದೊರೆಯುತ್ತದೆ. ಪ್ರತಿ ದಿನ 4-5 ಎಕರೆಯಷ್ಟು ಜಮೀನಿಗೆ ನೀರು ಹಾಯಿಸಬಹುದು' ಎನ್ನುವುದು ಸೌರಶಕ್ತಿಯ ಪಂಪ್ ಅಳವಡಿಸಿಕೊಂಡಿರುವ ಕೆ.ಎಸ್.ರವೀಶ ಹಾಗೂ ಜಾಹ್ನವಿ ಅವರ ಮಾತು.ರೈತರಿಗೆ ವರದಾನ

3,960 ಡಬ್ಲುಪಿ `ಫೋಟೊ ಓಲ್ಟಾಯಿಕ್ ಮಾಡ್ಯೂಲ್ ಸೋಲಾರ್ ಪ್ಯಾನೆಲ್'ನಿಂದ ಪ್ರತಿ ಗಂಟೆಗೆ 24 ಯುನಿಟ್‌ನಷ್ಟು ವಿದ್ಯುತ್ ಉತ್ಪಾದಿಸಿ, 3 ಎಚ್‌ಪಿಯ ಸೋಲಾರ್ ಪಂಪ್ ಬಳಸಿ 10 ಗಂಟೆಗಳಲ್ಲಿ 74,600 ಲೀಟರ್‌ನಷ್ಟು ನೀರು ಎತ್ತುವ ಈ ಯಂತ್ರ ರೈತರ ಪಾಲಿಗೆ ವರದಾನವೇ ಸರಿ. ಭೂಮಿ ಕೆಡದಂತೆ ಉಳಿಯಬೇಕಾದರೆ ಒಂದು ಎಕರೆಗೆ 20 ಸಾವಿರ ಲೀಟರ್ ಸಾಕು.ಬೆಳೆಗಳಿಗೆ ನೀರು ಬಿಟ್ಟರೆ ಭವಿಷ್ಯದಲ್ಲಿ ಭೂಮಿ ಕೆಡುವುದು ನಿಶ್ಚಿತವೆಂಬುದು ಕೃಷಿ ತಜ್ಞರ ಅಭಿಪ್ರಾಯ. ಈ ಎಲ್ಲ ಕಾರಣಗಳಿಂದ ಸೌರ ಶಕ್ತಿ ಬಳಸಿ ನೀರು ಪಡೆದರೆ ಬೆಳೆಗಳಿಗೆ ಹಿತ ಎನಿಸುವಲ್ಲಿ ಅನುಮಾನವೇ ಇಲ್ಲ. ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನೀರು ಪಂಪ್ ಮಾಡಬಹುದು. ಇನ್ನು ಮನೆ ಸಮೀಪವಿದ್ದರೆ ಅದೇ ಶಕ್ತಿಯನ್ನು ಬೆಳಕಿಗೆ, ಟೀವಿ, ಫ್ಯಾನ್, ಫ್ರಿಜ್‌ಗಳಿಗೂ ಬಳಸಬಹುದು. ಕಡಿಮೆ ಶಕ್ತಿಯಿಂದ ಅತಿ ಹೆಚ್ಚು ಎಂದರೆ 30 ಎಚ್.ಪಿವರೆಗೂ ಸೌರ ಶಕ್ತಿ ಉತ್ಪಾದಿಸುವ ಪ್ಯಾನೆಲ್‌ಗಳನ್ನು ಅಳವಡಿಸಿಕೊಳ್ಳಬಹುದು. ಬಿಸಿಲಿದ್ದ ಕಡೆ ಪ್ಯಾನೆಲ್ ಹೊರಳಿಸಿದರೆ ಪ್ರತಿಶತ 10-15ರಷ್ಟು ಶಕ್ತಿಯನ್ನು ಹೆಚ್ಚಿಗೆ ಪಡೆಯಬಹುದು.ರೈತರು ಒಗ್ಗಟ್ಟಾಗಿ ಹಣ ಸಂಗ್ರಹಿಸಿ ನದಿಗಳಿಗೆ ಬಾಂದಾರಗಳನ್ನು ಕಟ್ಟಿಕೊಂಡ ಉದಾಹರಣೆಗಳು ಬಾಗಲಕೋಟೆ ಜಿಲ್ಲೆಯಲ್ಲಿ ಸಾಕಷ್ಟಿವೆ. ಹಾಗಂತ ರೈತರು ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಆ ಕೆಲಸವನ್ನು ಸರ್ಕಾರವೇ ಮಾಡಬೇಕು. ಆದರೂ ಅವುಗಳಿಗೆ ಸಮರ್ಪಕ ಕಲ್ಲಿದ್ದಲು, ಕಟ್ಟಿಗೆ ದೊರೆಯದಿದ್ದರೆ ಕೈ ಕೊಡುವುದು ನಿಶ್ಚಿತ. ಆದರೆ ಸೂರ್ಯನ ಬೆಳಕು, ಗಾಳಿ, ಮಳೆ, ಪ್ರಕೃತಿಯ ಸಕಲ ಭೋಗಗಳು ಮಾನವನಿಗಾಗಿಯೇ ಇರುವುದರಿಂದ ಮತ್ತು ಅವೆಲ್ಲ ಶಾಶ್ವತವಾಗಿ ಇರುವುದರಿಂದ ಸೌರ ಶಕ್ತಿ ಬಳಕೆ ರೈತರಿಗೆ ಸುಲಭ.ರೈತ ತನ್ನ ಸ್ವಂತ ಶಕ್ತಿಯಿಂದ ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸಿಕೊಳ್ಳಬಹುದು. ನಿತ್ಯ ನೂರಾರು ರೈತರು ಈ ಉಪಕರಣ ನೋಡಲು ರವೀಶ ಅವರ ತೋಟಕ್ಕೆ ಆಗಮಿಸುತ್ತಿದ್ದಾರೆ. ಅದರೊಂದಿಗೆ ಅವರು ಮಾಡುವ ಸಾವಯವ ಕೃಷಿ, ಒಂಟೆತ್ತಿನ ಕೃಷಿ, ಕಬ್ಬು ನಾಟಿ ಮಾಡಿದ್ದಾರೆ. ಮಾಹಿತಿಗೆ 9448129186/ 9972033534.

 

ಪ್ರತಿಕ್ರಿಯಿಸಿ (+)