ಶುಕ್ರವಾರ, ನವೆಂಬರ್ 22, 2019
26 °C

`ನೀರು, ನೀರೆ ಸಮಾಜಕ್ಕೆ ಅತ್ಯವಶ್ಯಕ'

Published:
Updated:

ದಾವಣಗೆರೆ: ನವೆಂಬರ್ ತಿಂಗಳು ಬಂದಾಗ ಮಾತ್ರ ಕನ್ನಡ ನೆನಪು ಬಂದ ಹಾಗೆ, ಮಾರ್ಚ್ ಬಂದಾಗ ಮಾತ್ರ ಮಹಿಳೆಯರ ನೋವು, ಸಂಕಷ್ಟ, ದೌರ್ಜನ್ಯಗಳು ನೆನಪಾಗುತ್ತಿರುವುದು ವಿಷಾದನೀಯ ಎಂದು ಉಪನ್ಯಾಸಕಿ ಸುಮತಿ ಜಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.ಮಹಿಳಾ ಬಸವಕೇಂದ್ರದ ವತಿಯಿಂದ ನಗರದ ದೊಡ್ಡಪೇಟೆಯ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ `ವಿಶ್ವ ಮಹಿಳಾ ದಿನಾಚರಣೆ' ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.ಪ್ರತಿ ವರ್ಷ `ಮಹಿಳಾ ದಿನ' ಆಚರಿಸಲಾಗುತ್ತಿದ್ದರೂ ಸ್ತ್ರೀಯರ ಸಮಸ್ಯೆಗಳು ಮಾತ್ರ ಕಡಿಮೆಯಾಗಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಭ್ರೂಣಹತ್ಯೆಯಿಂದ ಹೆಣ್ಣು ಗೋರಿ ತಲುಪುವವರೆಗೂ ನಿರಂತರ ಶೋಷಣೆಗಳು ನಡೆಯುತ್ತಿವೆ. ಅತ್ಯಾಚಾರ, ವರದಕ್ಷಿಣಿಯಂತಹ ಸಾಮಾಜಿಕ ಪಿಡುಗುಗಳು ಜೀವಂತವಾಗಿದ್ದು, ಮಹಿಳೆಯರು ಕತ್ತಲಲ್ಲಿ ಬದುಕುವಂತಾಗಿದೆ ಎಂದರು.ನೀರು ಹಾಗೂ ನೀರೆ ಇಲ್ಲದ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನೀರಿಲ್ಲದಿದ್ದರೆ ಭೂಮಿ ಬರಡಾಗುತ್ತದೆ. ನೀರೆಯರು ಇಲ್ಲದಿದ್ದರೆ ಮನುಷ್ಯನ ಜೀವನವೇ ಬರಡಾಗಲಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ನೀರು ಮತ್ತು ನೀರೆ ಅವಶ್ಯಕ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಸಿಐಬಿ ಇನ್ಸ್‌ಪೆಕ್ಟರ್ ಅರ್ಜುಮಾನ್ ಬಾನು, ಮಹಿಳೆಯರ ರಕ್ಷಣೆಗೆ ದೇಶದಲ್ಲಿ ಹಲವು ಕಾನೂನುಗಳಿದ್ದರೂ ಮಹಿಳೆಯರು ಅವನ್ನು ಸದ್ಬಳಕೆ ಮಾಡಿಕೊಳ್ಳದೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಪೋಷಕರು ಗಂಡು, ಹೆಣ್ಣು ಎಂಬ ತಾರತಮ್ಯ ಬಿಟ್ಟು ಮಕ್ಕಳನ್ನು ಬೆಳೆಸಬೇಕು. ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಹೆಣ್ಣಿನ ಮೇಲಿನ ಅನ್ಯಾಯದ ವಿರುದ್ಧ ಸಮಾಜದಲ್ಲಿ ಎಲ್ಲರೂ ಹೋರಾಟ ಮಾಡಿದಾಗ ಮಾತ್ರ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಸಿಗಲಿದೆ ಎಂದರು.ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದರೂ ಸಮಾಜದಲ್ಲಿ ಇನ್ನೂ ಅನಿಷ್ಟ ಪದ್ಧತಿಗಳು ಜೀವಂತವಾಗಿವೆ. 12ನೇ ಶತಮಾನದಲ್ಲಿ ಶರಣರು ಮಹಿಳೆಯರಿಗೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸಮಾನತೆ ನೀಡಿ ನಿಜವಾದ ಸ್ತ್ರೀ ಸ್ವಾತಂತ್ರ್ಯ ನೀಡಿದ್ದರು ಎಂದರು.ಪಾಲಿಕೆ ಸದಸ್ಯೆ ಮಂಜಮ್ಮ ಹನುಮಂತಪ್ಪ, ಮಹಿಳಾ ಬಸವಕೇಂದ್ರದ ಅಧ್ಯಕ್ಷೆ ಮಹಾದೇವಮ್ಮ ಮಲ್ಲಿಕಾರ್ಜುನಪ್ಪ, ವಿನುತಾ ರವಿ, ಎಚ್.ಎ. ದಾಕ್ಷಾಯಣಿ ಅಂದಾನಪ್ಪ, ಸುಜಾತಾ, ಜಯಶ್ರೀ ಭರಮಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)