ಶನಿವಾರ, ಮೇ 8, 2021
23 °C

ನೀರು ಪರೀಕ್ಷೆಗೆ ಕಳ್ಳಿಮನಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಗ್ರಾಮೀಣ ಪ್ರದೇಶದ ಶಾಲೆಗಳ ಹಾಗೂ ಗ್ರಾಮಗಳಿಗೆ ಪೂರೈಸುವ ಸಂಗ್ರಹಗಾರಗಳಲ್ಲಿನ ನೀರನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಬೇಕು' ಎಂದು  ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರತ್ನವ್ವ ಕಳ್ಳಿಮನಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ಕುಂದಗೋಳ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಇನ್ನೂ ಮಳೆಯು ಅಗತ್ಯದ ಪ್ರಮಾಣದಲ್ಲಿ ಆಗದಿರುವುದರ ಕುರಿತು ಕೃಷಿ ಇಲಾಖೆ ಗಮನ ಹರಿಸಿ ಅಗತ್ಯವಿದ್ದಲ್ಲಿ ಪರ್ಯಾಯ ಕ್ರಮ ಈಗಲೇ ಜರುಗಿಸಬೇಕು' ಎಂದರು.ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಮೇಘಣ್ಣವರ ಮಾತನಾಡಿ, `ಕಳೆದ ಬಾರಿ ಫಲಾನುಭವಿಗಳ ಪಟ್ಟಿ ಸಕಾಲಕ್ಕೆ ದೊರೆಯದ್ದರಿಂದ ಅರಣ್ಯ, ಕೃಷಿ, ಪಶು ಸಂಗೋಪನೆ ಹಾಗೂ ಇತರ ಇಲಾಖೆಗಳ ಸೌಲಭ್ಯಗಳ ವಿತರಣೆ ಸೂಕ್ತ ಕಾಲದಲ್ಲಿ ಆಗಲಿಲ್ಲ. ಅದು ಈ ಬಾರಿ ಮರುಕಳಿಸಬಾರದು.ಯೋಜನಾನುಷ್ಠಾನಕ್ಕೆ ಮುನ್ನ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಬೇಕು. ಈ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. ಗ್ರಾಮ ಸಭೆಯಲ್ಲಿ ದಾಖಲೆಗಳ ಪರಿಶೀಲನೆ ನಂತರ ಅರ್ಹರಿಗೆ ಸಿಗುವ ರೀತಿಯಲ್ಲಿ ಪಟ್ಟಿ ಸಿದ್ಧಪಡಿಸಿ ಸಂಬಂಧಿತ ಇಲಾಖೆಗಳಿಗೆ ಕಳುಹಿಸಬೇಕು. ಈ ಕುರಿತು ಗ್ರಾ.ಪಂ, ತಾ.ಪಂ. ಹಾಗೂ ಸಂಬಂಧಿತ ಇಲಾಖೆಗಳ ಮುಖ್ಯಸ್ಥರು ಮುತುವರ್ಜಿ ವಹಿಸಬೇಕು' ಎಂದರು.ಕೃಷಿ ಇಲಾಖೆ: ಕೃಷಿ ಇಲಾಖೆ ರೈತರಿಗೆ ಒದಗಿಸುತ್ತಿರುವ ಬೀಜದ ದರ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿರುವ ಕುರಿತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ.ಬಾಲಣ್ಣವರ ಸಭೆಯ ಗಮನ ಸೆಳೆದರು. ರೈತರಿಗೆ ಬೀಜೋತ್ಪಾದನೆಗೆ ನೀಡುವುದರ ಸಹಾಯಧನ ಕಳೆದು ಉಳಿಯುವ ದರ ಮಾರುಕಟ್ಟೆ ದರಕ್ಕಿಂತ ಹೆಚ್ಚಾಗಿರುತ್ತದೆ ಎಂದು ಬಾಲಣ್ಣವರ ನುಡಿದರು. ಗೊಬ್ಬರ ದರಗಳ ಕುರಿತು ರೈತರಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ, ಗೊಬ್ಬರದ ಅಂಗಡಿಗಳಲ್ಲಿ ಹಾಗೂ ಮಾಧ್ಯಮಗಳ ಮೂಲಕ ಮಾಹಿತಿ ನೀಡಬೇಕು. ಹೆಚ್ಚಿನ ದರದ ದೂರು ಬಂದಲ್ಲಿ ತಕ್ಷಣ ಪರಿಶೀಲನೆ ಮಾಡಿ ಕ್ರಮ ಜರುಗಿಸಲು ಮೇಘಣ್ಣವರ ಸೂಚಿಸಿದರು.ಜಿಲ್ಲೆಯಲ್ಲಿ ವಾಡಿಕೆಯಂತೆ ಈ ವರೆಗೆ 174 ಮಿ.ಮೀ. ಮಳೆಯಾಗಬೇಕಿತ್ತು. ಆ ಪೈಕಿ 169 ಮಿ.ಮೀ. ಮಳೆ ಆಗಿದೆ. 28 ಸಾವಿರ ಎಕರೆ ಗುರಿ ಪೈಕಿ 26 ಸಾವಿರ ಎಕರೆಯಲ್ಲಿ ಬಿತ್ತನೆ ಪ್ರಾರಂಭಗೊಂಡಿದೆ. 33 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಪೈಕಿ 22 ಸಾವಿರ ಮೆ.ಟನ್ ಗೊಬ್ಬರ ವಿತರಣೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎನ್.ಎಂ.ಅಂಗಡಿ ಮಾತನಾಡಿ, `ಜಿಲ್ಲೆಯಲ್ಲಿ 94 ಶಂಕಿತ ಡೆಂಗೆ ಪ್ರಕರಣ ದಾಖಲಾಗಿದ್ದು, ಈ ಪೈಕಿ ಹುಬ್ಬಳ್ಳಿ, ಧಾರವಾಡ ನಗರ ಪ್ರದೇಶದ ಚಾಮುಂಡೇಶ್ವರಿ ನಗರ, ನವನಗರ ಹಾಗೂ ನೇಕಾರ ನಗರಗಳಲ್ಲಿ ತಲಾ ಒಂದು ಪ್ರಕರಣ ಡೆಂಗೆ ಎಂದು ಖಚಿತವಾಗಿದೆ. ಹೆಬ್ಬಳ್ಳಿ ಕುರಿತಂತೆ ಪ್ರಕರಣ ಗದಗ ಜಿಲ್ಲೆ ಸೋಮಾಪುರ ಗ್ರಾಮಕ್ಕೆ ಸೇರಿದ್ದು, ಅದನ್ನು ಈ ಜಿಲ್ಲೆಯದೆಂದು ತಪ್ಪಾಗಿ ಗ್ರಹಿಸಲಾಗಿತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ಲಾರ್ವಾಗಳ ಕುರಿತ ಸಮೀಕ್ಷೆ ಹಾಗೂ ಸೊಳ್ಳೆಗಳ ನಾಶಕ್ಕೆ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ನಡೆಯುತ್ತಿದೆ' ಎಂದರು.ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್, `ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೇ.90 ರಷ್ಟು ಪಠ್ಯಗಳ ವಿತರಣೆ ಆಗಿದೆ. ಸಮವಸ್ತ್ರಗಳು ಇನ್ನೂ ಬಂದಿಲ್ಲ. ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳು ದೊರಕುವಂತೆ ಮಾಡಲಾಗುವುದು. ಸರ್ವಶಿಕ್ಷಣ ಅಭಿಯಾನದಡಿ ಜಿಲ್ಲೆಯಲ್ಲಿ ಒಟ್ಟು 247 ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಒಟ್ಟಾರೆ 162 ಶಿಕ್ಷಕರ ಕೊರತೆ ಇದೆ. ಕಡ್ಡಾಯ ಶಿಕ್ಷಣ ನಿಯಮದಡಿ 3,036 ಸ್ಥಾನ ಜಿಲ್ಲೆಯಲ್ಲಿ ಲಭ್ಯವಿದ್ದು, 2,094 ಅರ್ಜಿಗಳು ಬಂದಿದ್ದು, 1,654 ಮಕ್ಕಳಿಗೆ ಪ್ರವೇಶ ದೊರಕಿದೆ' ಎಂದರು.ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಗಳಿದ ವರ್ಗದ ವಸತಿ ನಿಲಯಗಳಿಗೆ ರಾತ್ರಿ ಕಾವಲುಗಾರರ ನೇಮಕಾತಿಗೆ ಸದ್ಯಕ್ಕೆ ತಾತ್ಕಾಲಿಕ ಕ್ರಮ ಜರುಗಿಸಬೇಕು. ಜಿಲ್ಲೆಗೆ ಹಿಂದುಳಿದ ವರ್ಗಗಳ ಒಟ್ಟು 6 ಹೊಸ ವಸತಿ ನಿಲಯಗಳು ಮಂಜೂರಾಗಿದ್ದು, ಅವುಗಳ ಪ್ರಾರಂಭಕ್ಕೂ ಮುನ್ನ ಮೂಲ ಸೌಲಭ್ಯ ಹಾಗೂ ಅವುಗಳ ನಿರ್ವಹಣೆಗೆ ಅಗತ್ಯವಾದ ಸಿಬ್ಬಂದಿ ನಿಯಮಿಸಬೇಕು ಎಂದು ಪಿ.ಎ.ಮೇಘಣ್ಣವರ ಅವರು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಚಲವಾದಿ ಅವರಿಗೆ ಸೂಚಿಸಿದರು.ಜಿ.ಪಂ. ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಿರ್ಮಲಾದೇವಿ ಉಪ್ಪಿನ, ಮುಖ್ಯ ಯೋಜನಾಧಿಕಾರಿ ಎ.ಡಿ.ದೊಡ್ಡಮನಿ, ಉಪಕಾರ್ಯದರ್ಶಿ ಎಸ್.ಬಿ.ಮುಳ್ಳೊಳ್ಳಿ ಹಾಗೂ ವಿವಿಧ ಇಲಾಖೆ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.ಬಾಲ ಕಾರ್ಮಿಕ ವಿರೋಧಿ ದಿನ ಇಂದು

ಧಾರವಾಡ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಘವು ಹಾಗೂ ವಿವಿಧ ಇಲಾಖೆಗಳ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋದಿ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದೆ.  ಇದೇ 12 ರಂದು ಇಲ್ಲಿಯ ಸವದತ್ತಿ ರಸ್ತೆಯಲ್ಲಿನ ಕೆ.ಇ.ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಬೆಳಿಗ್ಗೆ 8.45ಕ್ಕೆ ಶಾಲಾ ಮಕ್ಕಳ ಜಾಥಾ ಹಾಗೂ 9.30ಕ್ಕೆ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಟರಾಜನ್ ಕಾರ್ಯಕ್ರಮ ಉದ್ಘಾಟಿಸುವರು.  ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅಧ್ಯಕ್ಷತೆ ವಹಿಸುವರು. ಎಂದು ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಹೊಸಮನಿ ಸಿದ್ದಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜಾಗೃತಿ, ಉಸ್ತುವಾರಿ ಸಭೆ 15ರಂದು

ಧಾರವಾಡ: ಜಿ.ಪಂ.ಸಭಾಂಗಣದಲ್ಲಿ ಇದೇ 15 ರಂದು ಮಧ್ಯಾಹ್ನ 3ಕ್ಕೆ ಕೇಂದ್ರ ಪುರಸ್ಕೃತ ವಿವಿಧ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಕುರಿತು ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಜರುಗಲಿದೆ. ಸಂಸದ ಪ್ರಹ್ಲಾದ ಜೋಶಿ ಸಭೆಯ ಅಧ್ಯಕ್ಷತೆ ವಹಿಸುವರು. ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಅಂದು, ಕಳೆದ ಸಾಲಿನ ಪ್ರಗತಿ, ಪ್ರಸಕ್ತ ಸಾಲಿನ ಕ್ರಿಯಾಯೋಜನೆ ಹಾಗೂ ಮೇ ಅಂತ್ಯದವರೆಗಿನ ಸಾಧನೆಯ ದಾಖಲೆಗಳೊಂದಿಗೆ ಹಾಜರಾಗಲು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.