ನೀರು ಪೂರೈಕೆಗೆ ಕ್ರಮ

7

ನೀರು ಪೂರೈಕೆಗೆ ಕ್ರಮ

Published:
Updated:

ವಿಜಾಪುರ: ‘ಮುಂಬರುವ ಬೇಸಿಗೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುಂಜಾಗೃತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎನ್. ಪಾಟೀಲ ಹೇಳಿದರು.ನಗರದ ಸ್ಟೇಶನ್ ರಸ್ತೆಯಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಅಡಿಯಲ್ಲಿ ನೂತನ ‘ಗ್ರಾಮೀಣ ಕುಡಿಯುವ ನೀರು ಸರಬರಾಜು ಉಪ ವಿಭಾಗ ಕಚೇರಿ’ಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗಕ್ಕೆ ಈವರೆಗೆ ಕುಡಿಯುವ ನೀರು ಪೂರೈಕೆ, ರಸ್ತೆ ನಿರ್ಮಾಣ, ನೈರ್ಮಲ್ಯ ಮುಂತಾದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿತ್ತು. ಇದರಿಂದ ಎಂಜಿನಿಯರಿಂಗ್ ಉಪವಿಭಾಗಕ್ಕೆ ತೀವ್ರ ಕೆಲಸದ ಒತ್ತಡವಿತ್ತು ಎಂದರು.ಒತ್ತಡ ಕಡಿಮೆ ಮಾಡುವ ಹಾಗೂ ಗ್ರಾಮೀಣ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಸಾಕಷ್ಟು ಸುಧಾರಣೆ ತರುವ ಉದ್ದೇಶದಿಂದ ಸರ್ಕಾರ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗವನ್ನು ವಿಭಜಿಸಿ ‘ಗ್ರಾಮೀಣ ಕುಡಿಯುವ ನೀರು ಸರಬರಾಜು’ ಎಂಬ ಪ್ರತ್ಯೇಕ ಉಪವಿಭಾಗ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ವಿವರಿಸಿದರು.ಸರ್ಕಾರದ ಆದೇಶದಂತೆ ಕುಡಿಯುವ ನೀರು ಸರಬರಾಜು ಉಪ ವಿಭಾಗ ಕಚೇರಿ ಕಳೆದ ಜ. 20ರಂದು ಆರಂಭಿಸಲಾಗಿದೆ. ನೂತನ ಉಪವಿಭಾಗದಿಂದ ಪ್ರತಿ ಹಳ್ಳಿಗೂ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಅನುಕೂಲವಾಗಲಿದೆ ಎಂದು ವಿವರಿಸಿದರು.ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಸರಬರಾಜಿಗಾಗಿ ಜಿ.ಪಂ.ನಲ್ಲಿ ರೂ. 43 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಈ ಅನುದಾನದಲ್ಲಿ ಕೊಳವೆ ಭಾವಿ, ಕಿರು ನೀರು ಯೋಜನೆ, ಕೈ ಪಂಪು ದುರಸ್ಥಿ ಮುಂತಾದ ಕಾಮಗಾರಿ ಕೈಗೊಳ್ಳಲಾಗುವುದು. ಸದ್ಯ ಈ ವಿಭಾಗದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಿಬ್ಬಂದಿಗಳೇ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.ಜಿ.ಪಂ. ಯೋಜನಾಧಿಕಾರಿ ನಿಂಗಪ್ಪ, ಹಣಕಾಸು ಅಧಿಕಾರಿ ವಿ.ಎಂ. ಚೌರ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಪಿ. ಕೆಂಗನಾಳ, ಗ್ರಾಮೀಣ ಕುಡಿಯುವ ನೀರು ಸರಬರಾಜು ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸುಂದರ ಮಹಾದೇವಪ್ಪ ಕೊಳ್ಳಿ, ಸಹಾಯಕ ಎಂಜಿನಿಯರ್‌ಗಳಾದ ಪ್ರಭಾಕರ ಬಂಡಿ, ಪಿ.ಬಿ. ಧನವಾಡೆ, ಪಿ.ಕೆ. ದಾಶ್ಯಾಳ, ಪವಾರ, ಎಸ್.ಜಿ. ದೊಡ್ಡಮನಿ, ವಿ.ಬಿ. ಗೊಂಗಡಿ, ಜಿ.ಎನ್. ಮದ್ದರಕಿ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry