ಗುರುವಾರ , ಜೂನ್ 17, 2021
21 °C

ನೀರು ಪೂರೈಕೆಗೆ ಕ್ರಮ: ಡಿ.ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಬೇಸಿಗೆ ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಜನತೆಗೆ ಅಗತ್ಯವಿರುವ ಕಡೆ ಕುಡಿಯುವ ನೀರು ಮತ್ತು ಜಾನು­ವಾರುಗಳಿಗೆ ಮೇವನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಪ್ರಗತಿ ಪರಿ­ಶೀಲನಾ ಸಭೆಯಲ್ಲಿ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿಗೆ ತೊಂದರೆ­ಯಾಗಿದ್ದು, ತಾಲ್ಲೂಕಿನ ಕೆಂದಟ್ಟಿ ಸಮೀಪದ ಕಂದಕದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ.ಇದರಲ್ಲಿ ಶೇ 2.6ರಷ್ಟು ಫ್ಲೋರೈಡ್ ಅಂಶ ಇರುವುದರಿಂದ ಕುಡಿಯಲು ಯೋಗ್ಯವಲ್ಲ. ಆದರೆ ನಿತ್ಯದ ಬಳಕೆಗೆ ಉಪಯೋಗಿಸಬಹುದು ಎಂದು ಹೇಳಿ­ದರು.ಅಲ್ಲಿನ ನೀರನ್ನು ಭೂಮಿ ಆಳದಿಂದ ಎತ್ತಿ, ಟ್ಯಾಂಕರ್ ಮೂಲಕ ನಗರಕ್ಕೆ ನೀರು ಸರಬರಾಜು ಮಾಡಲು ₨ 75ರಿಂದ 80 ಲಕ್ಷ ವೆಚ್ಚವಾಗಲಿದೆ. ಇನ್ನೊಂದು ಕಡೆ ನೀರನ್ನು ಕೊಳವೆ ಮಾರ್ಗದ ಮೂಲಕ ಮಡೇರಹಳ್ಳಿ ಕೆರೆ­ಯಲ್ಲಿರುವ ಟ್ಯಾಂಕ್‌ಗೆ ಹರಿಸಬೇಕಾ­ಗಿದ್ದು, ಅದಕ್ಕೆ ಸುಮಾರು ₨45 ಲಕ್ಷ  ವೆಚ್ಚವಾಗಬಹುದು ಎಂದು ಅಂದಾಜಿಸ­ಲಾಗಿದೆ ಎಂದು ಹೇಳಿದರು.ಈ ಬಗ್ಗೆ ಯೋಜನೆ ರೂಪಿಸಿ, ಸರ್ಕಾ­ರದ ಒಪ್ಪಿಗೆ ಪಡೆದು ಇನ್ನು ಒಂದೂವರೆ ತಿಂಗಳಲ್ಲಿ ನೀರಿನ ಸಮಸ್ಯೆ ಪರಿಹರಿಸುವ ಯೋಚನೆ ಇದೆ. ಈ ನೀರನ್ನು ನಿತ್ಯದ ಬಳಕೆ ಜತೆಗೆ ನರಸಾಪುರ ಕೈಗಾರಿಕಾ ಪ್ರಾಂಗಣಕ್ಕೆ ನೀಡಲು ತೀರ್ಮಾನಿಸ­ಲಾಗಿದೆ ಎಂದರು.ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಟ್ಯಾಂಕರ್‌­ಗಳಲ್ಲಿ ನೀರು ಪೂರೈಸಲು ಸರ್ಕಾರ ಇತ್ತೀಚೆಗಷ್ಟೆ ₨ 6.75 ಕೋಟಿ ಬಿಡುಗಡೆ ಮಾಡಿದ್ದು, ಹಣದ ಸಮಸ್ಯೆ ಇಲ್ಲ. ಆದರೆ ಹಣ ಪೋಲಾಗದ ರೀತಿಯಲ್ಲಿ ಪ್ರತಿ ತಾಲ್ಲೂಕಿನ ಅಧಿಕಾರಿಗಳು ಎಚ್ಚರ ವಹಿಸಬೇಕು. ಟ್ಯಾಂಕರ್‌ ಅಷ್ಟೇ ಅಲ್ಲ, ಶಾಶ್ವತ  ನೀರು ಪೂರೈಕೆಗೆ ಕೆಜಿಎಫ್ ನಗರ­ಪ್ರದೇಶಕ್ಕೆ ₨1.5 ಕೋಟಿ ವೆಚ್ಚದಲ್ಲಿ ಕೊಳವೆ ಬಾವಿ ಕೊರೆಯಿಸಲಾಗುವುದು. ಮಾಲೂರಿನ 23 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲು ಎಸ್ಎಫ್‌ಸಿ ಅನುದಾನದಡಿ 20 ಕೊಳವೆ ಬಾವಿ ಕೊರೆಸಲಾಗುವುದು. ಜಿಲ್ಲೆಯಾದ್ಯಂತ ನೀರಿನ ಪೂರೈಕೆಗೆ ₨ 2.50 ಕೋಟಿ ಅವಶ್ಯವಿದೆ ಎಂದರು.ಜಿಲ್ಲೆಯ ನಗರ ಸಭೆಗಳ ಆಯು­ಕ್ತರು, ತಾಲ್ಲೂಕುಗಳ ಪುರಸಭೆ ಮುಖ್ಯಾ­ಧಿಕಾರಿಗಳು ನೀರಿನ ಸಮಸ್ಯೆ ಬಗ್ಗೆ ಪೂರ್ಣ ಮಾಹಿತಿ ನೀಡಿ. ಅವಶ್ಯಕತೆ ಇದ್ದ ಕಡೆ ಟ್ಯಾಂಕರ್ ಮೂಲಕ, ಅಗತ್ಯವಿರುವ ಕಡೆ ಖಾಸಗಿ ಕೊಳವೆ ಬಾವಿಗಳಿಂದ ನೀರನ್ನು ಖರೀದಿಸಿ ಸರಬರಾಜು ಮಾಡ­ಬೇಕು. ಕೊಳವೆ ಬಾವಿ ಮಾಲೀಕರಿ­ಗಾಗಲಿ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವವರಿಗೆ ಯಾವುದೇ ಕಾರಣಕ್ಕೂ ಹಣ ನೀಡಲು ವಿಳಂಬ ಮಾಡಬಾರದು ಎಂದು ತಿಳಿಸಿದರು.ಜಿಲ್ಲಾ ಪಂಚಾಯತಿ ಕಾರ್ಯ­ನಿರ್ವಹಣಾಧಿಕಾರಿ ವಿನುತ್ ಪ್ರಿಯ, ನಗರಸಭಾ ಆಯುಕ್ತ ಜಗದೀಶ್, ಯೋಜನಾಧಿಕಾರಿ  ಸರ್ವರ್ ಮರ್ಚೆಂಟ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಮುಖ್ಯಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವ­-ಹಣಾಧಿಕಾರಿಗಳು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.