ಶನಿವಾರ, ಜೂನ್ 19, 2021
27 °C

ನೀರು ಪೂರೈಕೆಗೆ ರೂ 9.63 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: `ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮರ್ಪಕ ಸರಬರಾಜು ವ್ಯವಸ್ಥೆಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಇದುವರೆಗೆ ರೂ 9.63 ಕೋಟಿ ಅನುದಾನದಡಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

 

ಮುಂಬರುವ ತಿಂಗಳುಗಳಲ್ಲಿ ಸಂಭವನೀಯ ಕುಡಿಯುವ ನೀರಿನ ಆಭಾವ ಉಂಟಾಗದಂತೆ  ಜಿಲ್ಲಾಧಿಕಾರಿಗಳ ಲೆಕ್ಕ ಶಿರ್ಷಿಕೆಯಡಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ತಲಾ 25  ಲಕ್ಷ ರೂಪಾಯಿ ಮತ್ತು ಜಿ.ಪಂ. ವತಿಯಿಂದ ತಾಲ್ಲೂಕಿಗೆ 40 ಲಕ್ಷ ರೂಪಾಯಿ ಅನುದಾನ ಒದಗಿಸಲಾಗುತ್ತಿದೆ~ ಎಂದು ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.ಬರಪೀಡಿತ ಚಿಕ್ಕೋಡಿ ತಾಲ್ಲೂಕಿನಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮರ್ಪಕ ಸರಬರಾಜು ಮತ್ತು ದನಕರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಬುಧವಾರ ಇಲ್ಲಿನ ಜಿ.ಪಂ. ಎಂಜಿನಿಯರಿಂಗ್ ವಿಭಾಗದಲ್ಲಿ ಕರೆದ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.`ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮುಂಬರುವ ತಿಂಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಸೌಕರ್ಯ ಕಲ್ಪಿಸಲು ಚಿಕ್ಕೋಡಿ ತಾಲ್ಲೂಕಿಗೆ ಜಿಲ್ಲಾಧಿಕಾರಿಗಳ ಲೆಕ್ಕ ಶೀರ್ಷಿಕೆಯಡಿ ಒಟ್ಟು 60 ಲಕ್ಷ ರೂಪಾಯಿ ಮತ್ತು ಜಿ.ಪಂ.ನಿಂದ 40 ಲಕ್ಷ ರೂಪಾಯಿ ಸೇರಿದಂತೆ ಸುಮಾರು 1 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ.

 

ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು 20 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲು ಚಿಂತನೆ ನಡೆಸಲಾಗಿದೆ. ತಾಲ್ಲೂಕಿನಲ್ಲಿ ಈಗಾಗಲೇ ಜಿ.ಪಂ.ನಿಂದ 9.63 ಕೋಟಿ ರೂ.ಗಳ ವೆಚ್ಚದಲ್ಲಿ ಪೈಪ್‌ಲೈನ್, ಕೊಳವೆ ಬಾವಿಗಳ ನಿರ್ಮಾಣ, ಜಲಸಂಗ್ರಹಾಲಯಗಳ ನಿರ್ಮಾಣ ಹಾಗೂ ಮೂರು ಕಡೆಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮಾರ್ಚ್ ಅಂತ್ಯದ ಒಳಗಾಗಿ ಎಲ್ಲ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ~ ಎಂದು ಹೇಳಿದರು.`ತಾಲ್ಲೂಕಿನ ಬೆಳಕೂಡ ವ್ಯಾಪ್ತಿಯ ತೋಟಪಟ್ಟಿ ಜನವಸತಿಗಳಿಗೆ, ಕಬ್ಬೂರ ವ್ಯಾಪ್ತಿಯ ಮೀರಾಪುರಹಟ್ಟಿ, ಚಿಕ್ಕೋಡಿ ರೋಡ್, ಗಳತಗಾ ವ್ಯಾಪ್ತಿಯ ಹಳದಟ್ಟಿ ಮುಂತಾದೆಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು.

 

ಆದರೆ ಐದು ಗ್ರಾಮಗಳಲ್ಲಿ ಜಲಮೂಲಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದ್ದು, ಸದ್ಯ ಗಳತಗಾ ವ್ಯಾಪ್ತಿಯ ಹಳದಟ್ಟಿ ಗ್ರಾಮವೊಂದಕ್ಕೆ ಮಾತ್ರ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ ಅಲ್ಲಿಯೂ ತೆರೆದ ಬಾವಿ ತೋಡಿಸಲು ಕ್ರಮ ಕೈಗೊಳ್ಳಲಾಗಿದೆ~ ಎಂದರು.`ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳು ಸೇರಿದಂತೆ ಪಾಂಗೇರಿ (ಎ), ಪೀರವಾಡಿ, ಧುಳಗನವಾಡಿ, ನವಲಿಹಾಳ, ಹದನಾಳ, ಕಸನಾಳ, ತವಂದಿ, ಗೊಂದಿಕೊಪ್ಪಿ, ಬೇಡಕಿಹಾಳದ ಪಾಟೀಲ ತೋಟ, ಗಾಯಕನವಾಡಿ, ಮಾನಕಾಪುರ ಮತ್ತು ಬುದಲಮುಖ ಗ್ರಾಮಗಳಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ~ ಎಂದು ಹೇಳಿದರು.`ತಾಲ್ಲೂಕಿನಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದಿಂದ ರಸ್ತೆ ನಿರ್ಮಾಣಗಳಿಗಾಗಿ ರೂ. 3.58 ಕೋಟಿ, ಕಟ್ಟಡಗಳ ನಿರ್ಮಾಣಕ್ಕಾಗಿ ರೂ. 7.42 ಕೋಟಿ,  ಕೆರೆಗಳ ನಿರ್ವಹಣೆಗಾಗಿ ರೂ. 2.35 ಕೋಟಿ ಅನುದಾನವನ್ನು ವ್ಯಯಿಸಲಾಗಿದೆ~ ಎಂದರು.`ಬೇಸಿಗೆಯಲ್ಲಿ ಕೃಷಿ ಕಾರ್ಮಿಕರಿಗೆ ನಿರುದ್ಯೋಗ ಸಮಸ್ಯೆ ಎದುರಾದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ನಿರುದ್ಯೋಗಿಗಳಿಗೆ ಕೆಲಸ ನೀಡುವಂತೆ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ~ ಎಂದು ಈರಣ್ಣ ಕಡಾಡಿ ತಿಳಿಸಿದರು.ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಎಸ್.ಸಿ.ಪಾಟೀಲ, ಕಿರಿಯ ಎಂಜಿನಿಯರ್ ಎಸ್.ಸಿ.ಚೊಳ್ಳಿ ಉಪಸ್ಥಿತರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.