ಭಾನುವಾರ, ಜೂನ್ 20, 2021
25 °C

ನೀರು ಪೂರೈಕೆ ಖಾಸಗೀಕರಣ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರು ಪೂರೈಕೆ ಖಾಸಗೀಕರಣ: ಪ್ರತಿಭಟನೆ

ಬೆಂಗಳೂರು: ರಾಜ್ಯದ ಪ್ರಮುಖ ನಗರಗಳಲ್ಲಿ ಕುಡಿಯುವ ನೀರು ಪೂರೈಕೆಯನ್ನು ಖಾಸಗೀಕರಣಗೊಳಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ `ನೀರಿನ ಹಕ್ಕಿಗಾಗಿ ಜನಾಂದೋಲನ-ಕರ್ನಾಟಕ~ ಸಂಘಟನೆಯು ಗುರುವಾರ ನಗರದ ಪುರಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.ಕುಡಿಯುವ ನೀರು ಪೂರೈಕೆಯನ್ನು ಖಾಸಗೀಕರಣಗೊಳಿಸುವ ವ್ಯಾಪಾರೀಕರಣದ ಹಿಂದೆ ದೊಡ್ಡ ಹುನ್ನಾರ ಅಡಗಿದೆ ಎಂದು ಪ್ರಮುಖರು ಆರೋಪಿಸಿದರು.ಹಿರಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ, ರಾಜ್ಯ ಸರ್ಕಾರ ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೋಟ್ಯಂತರ ರೂಪಾಯಿ ಸಬ್ಸಿಡಿ ನೀಡುವ ಮೂಲಕ ಕುಡಿಯುವ ನೀರು ಪೂರೈಸುವುದನ್ನು ಖಾಸಗೀಕರಣಗೊಳಿಸುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು.ಬಹುರಾಷ್ಟ್ರೀಯ ಕಂಪೆನಿಗಳು ಲಾಭ ಇಲ್ಲದೆ ಯಾವುದೇ ಕೆಲಸ ಮಾಡುವುದಿಲ್ಲ. ಗಣಿ ಮಾಫಿಯಾ ರಾಜ್ಯವನ್ನು ಸ್ಮಶಾನ ಮಾಡಿದ ರೀತಿಯಲ್ಲೇ ನೀರಿನ ಮಾಫಿಯಾ ಕೂಡ ಮುಂದೊಂದು ದಿನ ರಾಜ್ಯವನ್ನು ಅದೇ ಸ್ಥಿತಿಗೆ ತಳ್ಳಬಹುದು. ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಮನವಿ ಮಾಡಿದರು.ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಮಾತನಾಡಿ, ಕುಡಿಯುವ ನೀರನ್ನು ಖಾಸಗೀಕರಣಗೊಳಿಸುವ ನೀತಿಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.ಜನತೆ ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು. ಹೆಚ್ಚು ಹೆಚ್ಚು ಕೊಳವೆಬಾವಿಗಳನ್ನು ಕೊರೆಯುವುದರಿಂದ ಅಂತರ್ಜಲ ಮಟ್ಟ ಇನ್ನಷ್ಟು ಕುಸಿದು ಭವಿಷ್ಯದಲ್ಲಿ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.ಲೇಖಕ ಬಂಜಗೆರೆ ಜಯಪ್ರಕಾಶ್, `ನಾಗರಿಕ ಸಮಾಜ ಮುಂದುವರಿದಂತೆಲ್ಲಾ ಸರ್ಕಾರ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಬದಲು ಒಂದೊಂದೇ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಸರಿಯಲ್ಲ. ನೈಸರ್ಗಿಕ ಸಂಪನ್ಮೂಲವಾದ ಕುಡಿಯುವ ನೀರಿನ ಪೂರೈಕೆಯನ್ನು ಕೂಡ ಖಾಸಗೀಕರಣಗೊಳಿಸುವ ಮೂಲಕ ಮಾನವನ ಮೂಲಭೂತ ಹಕ್ಕುಗಳಿಗೆ ವಂಚನೆ ಮಾಡುತ್ತಿದೆ~ ಎಂದು ಆರೋಪಿಸಿದರು.`ಕುಡಿಯುವ ನೀರು ಎಲ್ಲರ ನೈಸರ್ಗಿಕ ಹಾಗೂ ಸ್ವಾಭಾವಿಕ ಹಕ್ಕು. ಅದನ್ನು ಸರ್ಕಾರವೇ ನಿರ್ವಹಣೆ ಮಾಡುವುದರ ಬದಲು ಖಾಸಗೀಕರಣಗೊಳಿಸುತ್ತಿರುವುದು ದುರದೃಷ್ಟಕರ~ ಎಂದರು.ಅಖಿಲ ಭಾರತ ಪ್ರಗತಿಪರ ವೇದಿಕೆ ಅಧ್ಯಕ್ಷ ಬಾಲಕೃಷ್ಣ, `ಮನುಷ್ಯನ ಬದುಕಿಗೆ ನೀರು ಬೇಕೇ ಬೇಕು. ಆದರೆ, ಅಂತಹ ನೀರನ್ನು ಕೂಡ ದುಡ್ಡು ಕೊಟ್ಟು ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಲು ಸರ್ಕಾರದ ವ್ಯಾಪಾರೀಕರಣ ನೀತಿಯೇ ಕಾರಣ~ ಎಂದು ದೂರಿದರು.ಸಾಮಾಜಿಕ ಕಾರ್ಯಕರ್ತೆ ನಂದಿನಿ, `ನೀರಿಗಾಗಿ ಹಕ್ಕಿಗಾಗಿ ಜನಾಂದೋಲನ-ಕರ್ನಾಟಕ~ ಸಂಘಟನೆಯ ರಾಜೇಂದ್ರನ್ ಪ್ರಭಾಕರ್, ಸೆಲ್ವ ಹಾಗೂ ಕ್ಷಿತಿಜ್ ಅರಸ್ ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.