ಮಂಗಳವಾರ, ಮೇ 11, 2021
27 °C
ನಗರ ಸಂಚಾರ

ನೀರು ಪೂರೈಕೆ ಯೋಜನೆಗೆ ಮಂಜೂರಾತಿ ಎಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರು ಪೂರೈಕೆ ಯೋಜನೆಗೆ ಮಂಜೂರಾತಿ ಎಂದು?

ಚಾಮರಾಜನಗರ: ತಿ. ನರಸೀಪುರದ ಕಪಿಲಾ ನದಿ ಮೂಲದಿಂದ ಜಿಲ್ಲಾ ಕೇಂದ್ರಕ್ಕೆ ಸಮರ್ಪಕವಾಗಿ ನೀರು ಪೂರೈಸಲು ರಾಜ್ಯ ಸರ್ಕಾರ ತ್ವರಿತವಾಗಿ ಕ್ರಮಕೈಗೊಳ್ಳುವುದೇ? ಎಂದು ನಾಗರಿಕರು ಎದುರು ನೋಡುತ್ತಿದ್ದಾರೆ.ನಗರಕ್ಕೆ ನದಿ ಮೂಲದಿಂದ 2000-01ರಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಚಾಲನೆಗೊಂಡಿದೆ. ಒಟ್ಟು 7ನೇ ಹಂತದಲ್ಲಿ 700 ಎಚ್‌ಪಿ ಸಾಮರ್ಥ್ಯದ ಪಂಪ್‌ಸೆಟ್ ಬಳಸಿಕೊಂಡು ಸದ್ಯಕ್ಕೆ ನೀರು ಪೂರೈಸಲಾಗುತ್ತಿದೆ. ಪೂರೈಕೆಯಾಗುತ್ತಿರುವ ನೀರು ಜನರ ದಿನಬಳಕೆಗೆ ಸಾಲುವುದಿಲ್ಲ ಎನ್ನುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೂ ಗೊತ್ತಿದೆ. ಆದರೆ, ಪ್ರತ್ಯೇಕ ಹೊಸ ಪೈಪ್‌ಲೈನ್ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿಲ್ಲ ಎನ್ನುವುದು ನಾಗರಿಕರ ಕೊರಗು.ಜಿಲ್ಲಾ ಕೇಂದ್ರಕ್ಕೆ ಪೂರೈಕೆಯಾಗುವ ಮಾರ್ಗದಲ್ಲಿ ಬರುವ 10 ಹಳ್ಳಿಗಳಿಗೂ ನೀರು ಪೂರೈಸಲಾಗುತ್ತಿದೆ. ದಿನವೊಂದಕ್ಕೆ 8ರಿಂದ 9 ದಶಲಕ್ಷ ಲೀಟರ್‌ನಷ್ಟು ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ, ನಗರಕ್ಕೆ ಲಭಿಸುವುದೇ 4.50 ದಶಲಕ್ಷ ಲೀಟರ್ ಮಾತ್ರ. ಕೆಲವೊಮ್ಮೆ ಇಷ್ಟು ಪ್ರಮಾಣದ ನೀರು ಪೂರೈಕೆಯಾಗುವುದಿಲ್ಲ. ವಿದ್ಯುತ್ ಕೊರತೆ, ಮೋಟಾರ್ ದುರಸ್ತಿ, ಏರುಕೊಳವೆ ಅವಾಂತರ, ಪೈಪ್‌ಲೈನ್ ದುರಸ್ತಿ ಸೇರಿದಂತೆ ವಿವಿಧ ಸಮಸ್ಯೆ ತಲೆದೋರುವುದು ಸಾಮಾನ್ಯವಾಗಿದೆ. ಆ ವೇಳೆ ನಗರಕ್ಕೆ ನೀರು ಪೂರೈಕೆ ವ್ಯತ್ಯಯವಾಗುವುದು ಸಹಜ. ಇದರಿಂದ ನಾಗರಿಕರು ತತ್ತರಿಸುತ್ತಾರೆ.ಜತೆಗೆ, ತಿ. ನರಸೀಪುರದಲ್ಲಿ ವಿದ್ಯುತ್ ಇದ್ದರೆ ಮಂಗಲದ ಶುದ್ಧೀಕರಣ ಕೇಂದ್ರದಲ್ಲಿ ಇರುವುದಿಲ್ಲ. ಜತೆಗೆ, ಹಳೆಯ ಮೋಟಾರ್ ವ್ಯವಸ್ಥೆ ಇರುವ ಪರಿಣಾಮ ಪದೇ ಪದೇ ಉಪಕರಣಗಳು ದುರಸ್ತಿಗೆ ಬರುವುದು ಸಾಮಾನ್ಯವಾಗಿದೆ. ಜತೆಗೆ, ಹಳೆಯ ಪೈಪ್‌ಲೈನ್‌ನಿಂದ ನೀರು ಸೋರಿಕೆ ಹೆಚ್ಚಿದೆ.ಈ ಎಲ್ಲ ಸಮಸ್ಯೆಗಳಿಗೆ ಅಂತ್ಯವಾಡಿ ನಿರಂತರವಾಗಿ ನಗರಕ್ಕೆ ನೀರು ಪೂರೈಸಲು ಪ್ರತ್ಯೇಕ ಹೊಸ ಕೊಳವೆಮಾರ್ಗ ನಿರ್ಮಿಸಲು ರೂ 45.50 ಕೋಟಿ ಮೊತ್ತದ ಯೋಜನೆ ತಯಾರಿಸಿ ವರ್ಷಗಳೇ ಉರುಳಿವೆ. ಜತೆಗೆ, ತಿ. ನರಸೀಪುರದಲ್ಲಿ ಕೆಳಮಟ್ಟದಲ್ಲಿ ನೀರೆತ್ತುವ ಕಾರ್ಯಾಗಾರದಲ್ಲಿ 12 ವರ್ಷದ ಹಿಂದೆ ಅಳವಡಿಸಿರುವ ಪಂಪ್‌ಸೆಟ್ ಬದಲಾಯಿಸಲು ರೂ 1 ಕೋಟಿ ಮೊತ್ತದ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದರೆ ಜಿಲ್ಲಾ ಕೇಂದ್ರದಲ್ಲಿರುವ ನೀರಿನ ಸಮಸ್ಯೆ ಬಗೆಹರಿಸಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.`ಈಗಾಗಲೇ, ಜಿಲ್ಲಾ ಕೇಂದ್ರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವ ಸಂಬಂಧ ಹಲವು ಬಾರಿ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಪೌರಾಯುಕ್ತರು ಬದಲಾದಂತೆ ಹಳೆಯ ಪ್ರಸ್ತಾವವನ್ನು ಮರುಮುದ್ರಿಸಿ ಸರ್ಕಾರಕ್ಕೆ ಸಲ್ಲಿಸುವುದು ನಡೆಯುತ್ತಲೇ ಇದೆ. ಆದರೆ, ಈ ಅಂದಾಜುಪಟ್ಟಿಗೆ ಅನುಮೋದನೆ ಸಿಕ್ಕಿಲ್ಲ. ಕೂಡಲೇ, ರಾಜ್ಯ ಸರ್ಕಾರ ಈಗಾಗಲೇ ಸಲ್ಲಿಸಿರುವ ಯೋಜನೆಗಳಿಗೆ ಮಂಜೂರಾತಿ ನೀಡಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಬೇಕು' ಎಂದು ಒತ್ತಾಯಿಸುತ್ತಾರೆ ಹಿರಿಯ ನಾಗರಿಕ ಸಿದ್ದರಾಜು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.