`ನೀರು ಪೂರೈಕೆ ಯೋಜನೆಗೆ ರೂ 75 ಕೋಟಿ'

7

`ನೀರು ಪೂರೈಕೆ ಯೋಜನೆಗೆ ರೂ 75 ಕೋಟಿ'

Published:
Updated:

ರಾಮದುರ್ಗ: ರಾಮದುರ್ಗ ಪಟ್ಟಣದ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಸುಮಾರು ರೂ 75 ಕೋಟಿ ಅನುದಾನ ಶೀಘ್ರದಲ್ಲಿಯೇ ಮಂಜೂರಾಗಲಿದೆ ಎಂದು ಶಾಸಕ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.ಶುಕ್ರವಾರ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ನಂತರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲಪ್ರಭಾ ಅಣೆಕಟ್ಟಿನಿಂದ ರಾಮದುರ್ಗ ಪಟ್ಟಣಕ್ಕೆ ಹಾಗೂ ನದಿ ತಟದ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಸುಮಾರು ರೂ59 ಕೋಟಿ ಪ್ರಸ್ತಾವಣೆಯನ್ನು ಸಲ್ಲಿಸಲಾಗಿತ್ತು.ಆದರೆ ಸರ್ಕಾರ ರೂ 39 ಕೋಟಿ ಪ್ರಸ್ತಾವಣೆಗೆ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ಟೆಂಡರ್ ಕರೆದು ಯೋಜನೆಗೆ ಚಾಲನೆ ನೀಡುವುದಾಗಿ ತಿಳಿಸಿದ ಅವರು ನದಿ ತಟದ ಗ್ರಾಮಗಳಿಗೆ ಪಂಚಾಯತ್ ರಾಜ್ ಇಲಾಖೆಯಿಂದ ಪ್ರಸ್ತಾವಣೆ ತಯಾರಿಸಿ ಮಂಜೂರಾತಿಗೆ ಸಲ್ಲಿಸಲಾಗುವುದು ಎಂದರು.ಪಟ್ಟಣದಲ್ಲಿ ಈಗಾಗಲೇ ಒಳಚರಂಡಿ ಕಾಮಗಾರಿಯಿಂದ ಎಲ್ಲ ರಸ್ತೆಗಳು ಹಾಳಾಗಿವೆ. ಆ ನಿಟ್ಟಿನಲ್ಲಿ ಸುಮಾರು ರೂ 26 ಕೋಟಿ ವೆಚ್ಚದಲ್ಲಿ ಟಾರ ರಸ್ತೆ ಬದಲು ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಯುಡಿಎಸ್‌ಎಂಟಿ ಯೋಜನೆಯಲ್ಲಿ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದರು.ಪುರಸಭೆಯ ಕಾಮಗಾರಿ ಪಡೆಯುವಲ್ಲಿ ಗುತ್ತಿಗೆದಾರರು ರಿಂಗ್ ಸಿಸ್ಟಮ್ ಮೂಲಕ ಗುತ್ತಿಗೆ ಪಡೆಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ನಷ್ಟ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಮುಂಬರುವ ದಿನಗಳಲ್ಲಿ ಕಾಮಗಾರಿ ಟೆಂಡರ್‌ನಲ್ಲಿ ರಿಂಗ್ ವ್ಯವಸ್ಥೆ ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಮಲಪ್ರಭಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ತಡೆಗಟ್ಟಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿಲಾಗಿದೆ. ಅಲ್ಲದೇ ಅಧಿಕಾರಿಗಳಿಗೆ ಒಂದು ವಾರಗಳ ಕಾಲ ಅವಕಾಶ ನೀಡಿದ್ದು, ಅಕ್ರಮ ಮರಳು ದಂಧೆ ತಡೆಯಲು ವಿಫಲರಾದರೆ ಸುಮಾರು 50 ಯುವಕರ ರಕ್ಷಣಾ ಪಡೆಯನ್ನು ರಚಿಸಿದ್ದು, ಆ ಯುವಕರು ಅಕ್ರಮ ಮರಳುಗಾರಿಕೆ ವಾಹನಗಳನ್ನು ತಡೆದು ಪೊಲೀಸ್ ವಶಕ್ಕೆ ಒಪ್ಪಿಸಲಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.ಪುರಸಭೆ ನೂತನ ಅಧ್ಯಕ್ಷ ಸುರೇಶ ಫತ್ತೇಪೂರ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪುರಸಭೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದಾಗಿ ಹೇಳಿದರು. ಅಭಿವೃದ್ಧಿ ವಿಚಾರದಲ್ಲಿ ಎಲ್ಲ ಸದಸ್ಯರು ಸಹಕಾರ ನೀಡುವರೆಂಬ ವಿಶ್ವಾಸ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ನೂತನ ಉಪಾಧ್ಯಕ್ಷೆ ಸುನಂದಾ ಬೀಳಗಿ, ಸದಸ್ಯರಾದ ಶಿವಾನಂದ ಚಿಕ್ಕೋಡಿ, ಭಾಷಾ ಮೊರಬ, ರಾಜು ಮಾನೆ, ವಿಜಯ ದಿಂಡಿವಾರ, ಚನ್ನಬಸು ಬಾಳಿಕಾಯಿ, ಯಲ್ಲಪ್ಪ ಇಟಗಿ, ಸುಮಂಗಲಾ ರಾಯಭಾಗ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry