ಬುಧವಾರ, ಮೇ 18, 2022
21 °C

ನೀರು: ಪೈಪ್ ಬದಲಿಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದಲ್ಲಿ ಐವತ್ತರಿಂದ ಅರವತ್ತು ದಶಕಗಳಷ್ಟು ಹಳೆಯದಾದ ನೀರು ಸರಬರಾಜು ಪೈಪ್‌ಗಳನ್ನು ಬದಲಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಪಾಲಿಕೆ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ತಿಳಿಸಿದರು. ಲಿಂಗರಾಜ ನಗರದ ಪ್ರೋಬಸ್ ಕ್ಲಬ್ ಸಹಯೋಗದಲ್ಲಿ ದೇಶಪಾಂಡೆ ಫೌಂಡೇಷನ್ ಹಾಗೂ ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಲಿಂಗರಾಜ ಬಡಾವಣೆಯಲ್ಲಿ ಜಾರಿಗೆ ತಂದಿರುವ ಮಳೆನೀರು ಸಂಗ್ರಹ ಯೋಜನೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.ನಗರದಲ್ಲಿ ಅಳವಡಿಸಲಾಗಿರುವ ಪೈಪ್‌ಗಳು ತೀರಾ ಹಳೆಯದು. ಕೆಲವೆಡೆ ಅವುಗಳನ್ನು ನೆಲದ ಆಳದಲ್ಲಿ ಅಳವಡಿಸಲಿಲ್ಲ. ಹೀಗಾಗಿ ಅನೇಕ ಸಂದರ್ಭದಲ್ಲಿ ಪೈಪ್ ಒಡೆಯುವುದು, ನೀರು ಸೋರಿಕೆಯಾಗುವುದು ಇತ್ಯಾದಿ ಸಮಸ್ಯೆಗಳು ತಲೆದೋರುತ್ತವೆ. ಇದರ ನಿವಾರಣೆಗಾಗಿ ಪೈಪ್‌ಗಳನ್ನು ಬದಲಿಸಬೇಕಾಗಿದೆ ಎಂದು ಅವರು ಹೇಳಿದರು.ಪೈಪ್‌ಗಳ ಬದಲಾವಣೆಗೆ ಭಾರಿ ಪ್ರಮಾಣದ ಹಣದ ಅಗತ್ಯವಿದ್ದು ಅದಕ್ಕೆ ಸೂಕ್ತ ಮಾರ್ಗ ಕಂಡುಕೊಳ್ಳಬೇಕಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ನೂರು ಕೋಟಿ ರೂಪಾಯಿಗಳ ವಿಶೇಷ ಅನುದಾನದಲ್ಲಿ ಹೆಚ್ಚಿನ ಮೊತ್ತವನ್ನು ಒಳರಸ್ತೆಗಳ ದುರಸ್ತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಆ ಹಣವನ್ನು ಇಂಥ ಕಾರ್ಯಗಳಿಗೆ ಬಳಸಲು ಸಾಧ್ಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಶುದ್ಧ ಹಾಗೂ ಸೇವನೆಗೆ ಯೋಗ್ಯವಾದ ನೀರು ಅತ್ಯಮೂಲ್ಯ. ಅದನ್ನು ಸಂರಕ್ಷಿಸಿ ಸದ್ಬಳಕೆ ಮಾಡಬೇಕಾದ ಅಗತ್ಯವಿದೆ. ನೀರು ಉಳಿತಾಯಕ್ಕೆ ಪಾಲಿಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಸಾರ್ವಜನಿಕರ ಸಹಕಾರ ಇದಕ್ಕೆ ಅಗತ್ಯ ಎಂದು ಅವರು ಹೇಳಿದರು. ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಮಾಡಬೇಕು ಎಂಬ ಸೂಚನೆ ಕೆಎಂಸಿ ಕಾಯ್ದೆಯಲ್ಲಿ ಇದೆ. ಇದನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ನಿತ್ಯ ನೀರು ಸರಬರಾಜು ನಡೆಯುವ ಪ್ರದೇಶಗಳಲ್ಲಿ ನಿರೀಕ್ಷೆಗೂ ಮೀರಿ ನೀರಿನ ಉಳಿತಾಯ ನಡೆಯುತ್ತಿದೆ ಎಂದು ವಿವರಿಸಿದರು.ದೇಶಪಾಂಡೆ ಫೌಂಡೇಷನ್‌ನ ಸಿಇಓ ನವೀನ ಝಾ ಪ್ರಾಸ್ತಾವಿಕವಾಗಿ ಮಾತನಾಡಿ, ನೀರು ಉಳಿತಾಯಕ್ಕಾಗಿ ದೇಶಪಾಂಡೆ ಫೌಂಡೇಷನ್ ಸಾರ್ವಜನಿಕರಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿದ್ದು ಬೋರ್‌ವೆಲ್ ರೀಚಾರ್ಜ್ ಮಾಡುವುದಕ್ಕಾಗಿ ರೈತರಿಗೆ ಆರ್ಥಿಕ ನೆರವು ಕೂಡ ಒದಗಿಸುತ್ತಿದೆ ಎಂದು ತಿಳಿಸಿದರು.ಪ್ರೋಬಸ್ ಕ್ಲಬ್ ಅಧ್ಯಕ್ಷ ಡಾ. ಸಿ.ಆರ್. ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಬೀಮಪ್ಪ ಎನ್. ಎಂ, ಲಿಂಗರಾಜ ನಗರ ಸಮುದಾಯ ಭವನದ ಅಧ್ಯಕ್ಷ ಎಸ್.ಎಂ. ತೊಗರ್ಸಿ, ಸಂಕಲ್ಪ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಸಿಕಂದರ ಮೀರಾ ನಾಯ್ಕ ಮುಂತಾದವರು ಭಾಗವಹಿಸಿದ್ದರು. ಎಸ್.ಡಿ. ಕರ್ಕಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.