ಮಂಗಳವಾರ, ಮೇ 18, 2021
24 °C

ನೀರು ಮಾರಾಟದ ಅಂಗಡಿ ಮೇಲೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಭಾರತೀಯ ಮಾನಕ ಸಂಸ್ಥೆಯ (ಐಎಸ್‌ಐ) ಗುರುತು ಇಲ್ಲದೆ ನಗರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖನಿಜಾಂಶಯುಕ್ತ ನೀರು (ಮಿನೆರಲ್ ವಾಟರ್) ಉತ್ಪಾದನಾ ಘಟಕಗಳು ಹಾಗೂ ನೀರು ಮಾರಾಟಗಾರರ ಅಂಗಡಿಗಳ ಮೇಲೆ ಈಚೆಗೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು.ಜಿಲ್ಲಾ ಕೇಂದ್ರದ ವ್ಯಾಪ್ತಿ ಹಲವು ನೀರು ಉತ್ಪಾದನಾ ಘಟಕಗಳು ತಲೆಎತ್ತಿವೆ. ಜನರ ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ನೀರು ಪೂರೈಕೆ ಮಾಡಲಾಗುತ್ತಿದೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಅವರ ಸೂಚನೆ ಮೇರೆಗೆ ನಗರಸಭೆ  ವ್ಯಾಪ್ತಿಯಲ್ಲಿರುವ ಮಿನೆರಲ್ ವಾಟರ್ ಉತ್ಪಾದನಾ ಘಟಕ ಮತ್ತು ನೀರು ಮಾರಾಟಗಾರರ ಅಂಗಡಿಗಳನ್ನು ಪರಿಶೀಲಿಸಲಾಯಿತು.ನಗರಸಭೆ ಪೌರಾಯುಕ್ತ ವಿ.ಎಚ್. ಕೃಷ್ಣಮೂರ್ತಿ, ಸಹಾಯಕ ಕಾರ್ಯ ಪಾಲಕ ಶ್ರೀನಿವಾಸ್, ಆರೋಗ್ಯ ನಿರೀಕ್ಷಕರಾದ ಶರವಣ, ಮಹದೇವ ಸ್ವಾಮಿ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲಿಸಿತು.ಈ ವೇಳೆ ಪರವಾನಗಿ ಪಡೆಯದೆ ನೀರು ಉತ್ಪಾದನೆ ಮಾಡುತ್ತಿರುವುದು ಕಂಡುಬಂದಿತು. ಐಎಸ್‌ಐ ಗುರುತಿಲ್ಲದ ನೀರು ಮಾರಾಟ ಮಾಡುತ್ತಿರುವುದನ್ನು ಅಧಿಕಾರಿಗಳ ತಂಡ ಪತ್ತೆಹಚ್ಚಿತು. ಈ ಸಂಬಂಧ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.ಯಾವುದೇ, ಅಂಗಡಿ ಮಾಲೀಕರು ನೀರು ಮಾರಾಟ ಮಾಡುವ ಮೊದಲು ಐಎಸ್‌ಐ  ಸಂಸ್ಥೆಯಿಂದ ಅಧಿಕೃತವಾಗಿ ದೃಢೀಕರಣ ಪತ್ರ ಪಡೆದುಕೊಳ್ಳಬೇಕು. ನಂತರ, ಗ್ರಾಹಕರಿಗೆ ನೀರು ಮಾರಾಟ ಮಾಡಬೇಕು. ನಿಯಮ ಉಲ್ಲಂಘಿಸಿದರೆ ನಗರಸಭೆಯಿಂದ ನೀಡಿರುವ ಉದ್ದಿಮೆ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ತಂಡ ರಚನೆ: ಜಿಲ್ಲಾ ಕೇಂದ್ರದ ವ್ಯಾಪ್ತಿ ಐಎಸ್‌ಐ ಗುರುತಿಲ್ಲದ ಕಳಪೆ ಗುಣಮಟ್ಟದ ನೀರು ಮಾರಾಟ ಮಾಡುತ್ತಿರುವುದು ನಡೆಯುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.ಈ ಹಿನ್ನೆಲೆಯಲ್ಲಿ ತಹಶೀಲ್ದಾರ್, ಪೌರಾಯುಕ್ತರು, ನಗರಸಭೆಯ ಆರೋಗ್ಯ ನಿರೀಕ್ಷಕರು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೇತೃತ್ವದಲ್ಲಿ ತಂಡ ರಚಿಸಿ ಕಾಲಕಾಲಕ್ಕೆ ನೀರು ಮಾರಾಟ ಘಟಕಗಳನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸುವುದು ಕಂಡುಬಂದರೆ ಸಂಬಂಧಪಟ್ಟ ಅಂಗಡಿ ಮಾಲೀಕರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.