ಸೋಮವಾರ, ಮೇ 23, 2022
30 °C

ನೀರು-ಶುಚಿತ್ವ: ಪಾಲಿಕೆಗೆ ಬೇಡವಾದ ಜನರ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತ್ಯಾಜ್ಯ ನಿರ್ವಹಣೆ ಮತ್ತು ನೀರು ಪೂರೈಕೆಯಲ್ಲಿನ ತೀವ್ರ ಅವ್ಯವಸ್ಥೆಯಿಂದ ನಗರವೆಲ್ಲ ಗಬ್ಬೆದ್ದು, ಕುಡಿಯಲು ಶುದ್ಧ ನೀರಿಲ್ಲದ ಪರಿಸ್ಥಿತಿಯಿಂದ ಜನತೆ ಪರದಾಡುತ್ತಿದ್ದರೆ, ಗುಲ್ಬರ್ಗ ಮಹಾನಗರ ಪಾಲಿಕೆಗೆ ಇದು ಗಂಭೀರ ಸಮಸ್ಯೆಯೇ ಅಲ್ಲ. ಪಾಲಿಕೆಯ ಸಾಮಾನ್ಯ ಸಭೆಯ ನಡಾವಳಿಯಲ್ಲಿ ಈ ವಿಚಾರಗಳೇ ಇಲ್ಲ. ಸಭೆಯ ಬಗ್ಗೆ ಮಾಧ್ಯಮಗಳಿಗೂ ಮಾಹಿತಿ ನೀಡಿಲ್ಲ.ಗುಲ್ಬರ್ಗ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಸೋಮವಾರ ಇಂದಿರಾ ಸ್ಮಾರಕ ಭವನದಲ್ಲಿ ನಡೆಯಿತು. ಸಭೆಯ ಆರಂಭದ ಶೂನ್ಯ ವೇಳೆಯಲ್ಲಿ ಸದಸ್ಯ ಅಹ್ಮದ್, ಕೆ.ಭೀಮರೆಡ್ಡಿ ಮತ್ತಿತರ ಸದಸ್ಯರು ಈ ವಿಚಾರವನ್ನು ಪ್ರಸ್ತಾಪಿಸಿದರು. ಆಡಳಿತ ಹಾಗೂ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು. ಮೊದಲು ಜನರ ಮೂಲಸೌಕರ್ಯಗಳಾದ ನೀರು ಹಾಗೂ ತ್ಯಾಜ್ಯ ನಿರ್ವಹಣೆ, ರಸ್ತೆ ಸಮಸ್ಯೆಯನ್ನು ಬಗೆಹರಿಸಿ ಎಂದು ಆಗ್ರಹಿಸಿದರು. ದೇಶದ ಯಾವುದೇ ನಗರದಲ್ಲಿ ಇಷ್ಟೊಂದು ಅವ್ಯವಸ್ಥೆ ಇರಲು ಸಾಧ್ಯವಿಲ್ಲ ಎಂದು ಆರೋಪಿಸಿದರು.ಮಲತಾಯಿ ಧೋರಣೆ: ರಾಜ್ಯ ಸರ್ಕಾರವು ಗುಲ್ಬರ್ಗ ಮಹಾನಗರ ಪಾಲಿಕೆಯ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಪಾಲಿಕೆಯಲ್ಲಿ ಆಯುಕ್ತರು ಸೇರಿದಂತೆ ಪ್ರಮುಖ ಹುದ್ದೆಗಳು ಖಾಲಿ ಉಳಿದಿವೆ. ಆದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಇನ್ನೊಂದೆಡೆ ಅನುದಾನವೂ ಸಮರ್ಪಕವಾಗಿ ಬರುತ್ತಿಲ್ಲ ಎಂದು ಕೆಲವು ಸದಸ್ಯರು ದೂರಿದರು.ಎಸ್‌ಎಫ್‌ಸಿ: ಸಾಮಾನ್ಯ ಹಣಕಾಸು ನಿಧಿ (ಎಸ್.ಎಫ್.ಸಿ.)ಅಡಿಯಲ್ಲಿ 15.2 ಕೋಟಿ ರೂಪಾಯಿ ಕಾಮಗಾರಿಗಳಿಗೆ ಸಭೆಯು ಚರ್ಚೆಯ ನಡುವೆ ಅನುಮೋದನೆ ನೀಡಿತು. ಆದರೆ ಬಹುತೇಕ ಸದಸ್ಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲ ವಾರ್ಡ್‌ಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಿಲ್ಲ. ಕೇವಲ ಕೆಲವು ವಾರ್ಡ್‌ಗಳಿಗೆ ಹಣ ವಿತರಿಸಲಾಗಿದೆ. ಇದನ್ನು ಸರಿಪಡಿಸಿ ಅನುಮೋದನೆ ನೀಡಬೇಕು ಎಂದರು.ಆಸ್ತಿ ತೆರಿಗೆ, ಕಟ್ಟಡ ನಿರ್ಮಾಣ ತೆರಿಗೆಗಳನ್ನು ಮರುಪರಿಶೀಲಿಸಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರು. ಆದರೆ ನಿಯಮಾವಳಿ ಪ್ರಕಾರ ಮೂರು ವರ್ಷಕ್ಕೊಮ್ಮೆ ಕರ ಪರಿಶೀಲಿಸಬೇಕಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.ಸಿಒಡಿ ತನಿಖೆ: ಕಳೆದ ಮೂರು ವರ್ಷಗಳಲ್ಲಿ ಮಹಾನಗರ ಪಾಲಿಕೆಯಲ್ಲಿ ಉಂಟಾಗಿರುವ ಅವ್ಯವಹಾರಗಳನ್ನು ಸಿಐಬಿ ಅಥವಾ ಸಿಒಡಿ ತನಿಖೆಗೆ ಒಪ್ಪಿಸಬೇಕು ಎಂದು ಸದಸ್ಯ ಮಿರ್ಜಾ ಖಾಸಿಂ ಬೇಗ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಹ್ಮದ್, ನೂಹ್ ಮತ್ತಿತರ ಸದಸ್ಯರು, ಹಗರಣಗಳನ್ನು ಸ್ಪಷ್ಟವಾಗಿ ಪಟ್ಟಿಮಾಡಬೇಕು. ಯಾವ ವಿಭಾಗ, ಯಾವ ಕಾಮಗಾರಿ, ಯಾವ ವಿಚಾರದಲ್ಲಿ ತನಿಖೆ ಆಗಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.ಈ ನಡುವೆ ಮಾತನಾಡಿದ ವಿನೋದ್ ಕೆ.ಬಿ. ಮತ್ತಿತರರು, ಕೇವಲ ಮೂರು ವರ್ಷ ಮಾತ್ರವಲ್ಲ, ಹಿಂದಿನ ಹತ್ತು ವರ್ಷದ ಎಲ್ಲ ದಾಖಲೆಗಳ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.ಮೇಯರ್ ಅಷ್ಫಕ್ ಅಹ್ಮದ್ ಚುಲ್‌ಬುಲ್ ಇದಕ್ಕೆ ಸಮ್ಮತಿಸಿದರು. ಕಳೆದ 10 ವರ್ಷಗಳ ಕಾಮಗಾರಿಗಳನ್ನು ಸಿಒಡಿ ತನಿಖೆ ನಡೆಸಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿದರು.ಪರಿಷತ್ ಕಾರ್ಯದರ್ಶಿ ಬಾಬುರಾವ್,  ಪ್ರೊಬೆಷನರಿ ಐಎಎಸ್ ಅಧಿಕಾರಿ ವಾಸುದೇವರಾವ್, ಪ್ರಭಾರ ಆಯಕ್ತರು ಮತ್ತಿತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.