ಸೋಮವಾರ, ನವೆಂಬರ್ 18, 2019
24 °C

ನೀರು ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗೆ ಮನವಿ

Published:
Updated:

ಮದ್ದೂರು: ಪಟ್ಟಣದ 23 ವಾರ್ಡುಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಪಟ್ಟಣ ಪುರಸಭೆಯ ನೂತನ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ಕಾವೇರಿ ಕುಡಿಯುವ ನೀರು ಪೂರೈಕೆಯು ವಿದ್ಯುತ್ ವ್ಯತ್ಯಯದಿಂದಾಗಿ ಏರುಪೇರಾಗಿದೆ. ಪುರಸಭೆ ತುರ್ತುನಿಧಿಯಿಂದ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಕೊಳವೆ ಬಾವಿ ಕೊರೆಸಲು ಅವಕಾಶವಿದೆ. ಆದರೆ 400ರಿಂದ 500 ಅಡಿ ಕೊರೆದರೂ ಫ್ಲೋರೈಡ್ ಮುಕ್ತ ಶುದ್ಧ ಕುಡಿಯುವ ನೀರು ದೊರಕುವುದು ದುರ್ಲಭ. ಹೀಗಾಗಿ ಭಾರತೀನಗರದ ನೀರು ಸರಬರಾಜು ಘಟಕಕ್ಕೆ 300 ಕೆವಿ ಸಾಮರ್ಥ್ಯದ ಜನರೇಟರ್ ಅನ್ನು ಬಾಡಿಗೆ ಆಧಾರದ ಮೇಲೆ ಅಳವಡಿಸಿ ಕುಡಿಯುವ ನೀರು ಪೂರೈಕೆ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ವಿನಂತಿಸಿದರು.ಸದಸ್ಯರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, `ಕುಡಿಯುವ ನೀರಿನ ತೆರಿಗೆ ವಸೂಲಾತಿ ಹೇಗಿದೆ? ವಸೂಲಾತಿ ಚೆನ್ನಾಗಿದ್ದರೆ ತುರ್ತು ನಿಧಿಯನ್ನು ಬಳಕೆ ಮಾಡಿಕೊಳ್ಳಬಹುದು. ಬಾಡಿಗೆ ಆಧಾರದಲ್ಲಿ ಜನರೇಟರ್ ಅಳವಡಿಸುವ ಬದಲು ಹೊಸ ಜನರೇಟರ್ ಅಳವಡಿಸಿ ಸಮಸ್ಯೆಯನ್ನು ಪೂರ್ಣವಾಗಿ ಬಗೆಹರಿಸಲು ಮುಂದಾಗಿ. ಇದಕ್ಕೆ ನನ್ನ ಸಹಮತವಿದೆ' ಎಂದರು.

ಪುರಸಭಾ ಸದಸ್ಯರಾದ ಸೌದೆನಿಂಗಯ್ಯ, ಎಂ.ಪಿ.ಮಂಜುನಾಥ್, ಪ್ರಶಾಂತ್‌ಕುಮಾರ್, ಪರ್ವಿಜ್, ಎಸ್.ಎಂ.ಜಗದೀಶ್, ಶಿವಣ್ಣ, ಮಂಜುಳಾ ಮೃತ್ಯುಂಜಯ, ವಿಜಯಕುಮಾರಿ, ನಾಗರತ್ನಮ್ಮ, ರಾಧಾಮ್ಮ, ಲಕ್ಷ್ಮಮ್ಮ, ಲತಾ ಬಸವರಾಜು, ಪಾರ್ವತಮ್ಮ, ಭಾಗ್ಯಮ್ಮ ಸತೀಶ್, ಮಾಜಿ ಪುರಸಭಾ ಅಧ್ಯಕ್ಷ ಎಂ.ಸಿ.ಬಸವರಾಜು, ಮುಖಂಡರಾದ ಚೇತನಕೃಷ್ಣ, ಶ್ರೀಕಂಠಯ್ಯ, ಆದಿಲ್ ಆಲಿಖಾನ್, ಪುಟ್ಟಸ್ವಾಮಿಶೆಟ್ಟಿ ಸುಧೀರ್ ನಿಯೋಗದಲ್ಲಿದ್ದರು.

ಪ್ರತಿಕ್ರಿಯಿಸಿ (+)