ಸೋಮವಾರ, ಏಪ್ರಿಲ್ 12, 2021
22 °C

ನೀರು, ಸೂರಿಗಾಗಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಆಹಾರ, ನೀರು, ಸೂರು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಿಪಿಐ ಹಾಗೂ ಎಐಟಿಯುಸಿ ಜಿಲ್ಲಾ ಘಟಕಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯ ಎಲ್ಲ ಅರ್ಹ ಬಡವರಿಗೆ ಆಹಾರ ಭದ್ರತೆ, ನಿವೇಶನ ನೀಡುವುದು ಹಾಗೂ ಎಲ್ಲರಿಗೂ ರಾಸಾಯನಿಕ ಮುಕ್ತ ಶುದ್ಧ ಕುಡಿಯುವ ನೀರು ಒದಗಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು.ದೇಶದಲ್ಲಿ ಜನಿಸುವ 10 ಮಕ್ಕಳಲ್ಲಿ 8 ಮಕ್ಕಳ ತೂಕ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶದ 10 ಮಹಿಳೆಯರ ಪೈಕಿ ಆರು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಜಗತ್ತಿನಲ್ಲಿಯೇ ಅಲ್ಪ ಆಹಾರ ಹಾಗೂ ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿರುವ ಅತೀ ಹೆಚ್ಚು ಜನರು ಭಾರತದಲ್ಲಿದ್ದಾರೆ. ಈ ಅಂಕಿ-ಅಂಶಗಳು ಸರ್ಕಾರಗಳ ಬಡವರ ವಿರೋಧಿ ನೀತಿಯನ್ನು ಬಿಂಬಿಸುತ್ತದೆ ಎಂದು ಹೇಳಿದರು.ಕೇಂದ್ರ ಸರ್ಕಾರದ ದಾಖಲೆಯಂತೆ 7.7 ಕೋಟಿ ಟನ್‌ಗಳನ್ನು ಗೋಧಿ ಹಾಗೂ ಅಕ್ಕಿ ಸಂಗ್ರಹವಿದೆ. ಇಡೀ ವರ್ಷ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಆಹಾರ ಧಾನ್ಯಗಳನ್ನು ಸರಬರಾಜು ಮಾಡಿದರೂ ಕೇವಲ 5 ಕೋಟಿ ಟನ್ ಆಹಾರ ಧಾನ್ಯ ಸಾಕಾಗುತ್ತದೆ.ಆದರೆ ಖಾಸಗಿ ಉಗ್ರಾಣಗಳ ಮಾಲೀಕರನ್ನು ಸಂತೈಸಲು ಬೃಹತ್ ಪ್ರಮಾಣದ ಸಾರ್ವಜನಿಕ ಹಣವನ್ನು ಪೋಲು ಮಾಡುವ ಮೂಲಕ ಈ ಆಹಾರವನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಅಲ್ಲಿನ ದನಕರುಗಳಿಗೆ ಮೇವು ನೀಡುವುದರ ಜೊತೆಗೆ ದೊಡ್ಡ ವ್ಯಾಪಾರಿಗಳಿಗೆ ಲಾಭ ಮಾಡುವ ಉದ್ದೇಶದಿಂದ ದೇಶದ ಎಲ್ಲ ನಾಗರಿಕರಿಗೆ ಆಹಾರದ ಹಕ್ಕು ನೀಡಲು ಕೇಂದ್ರ ಸರ್ಕಾರ ನಿರಾಕರಿಸುತ್ತಿದೆ ಎಂದು ಆಪಾದಿಸಿದರು.ಕೇಂದ್ರ ಸರ್ಕಾರದ ಸಮೀಕ್ಷೆಯಂತೆ ಪರಿಶಿಷ್ಟ ಜಾತಿಯ ಶೇ.61, ಪರಿಶಿಷ್ಟ ಪಂಗಡದ ಶೇ.55 ಹಾಗೂ ಶೇ.52 ರಷ್ಟು ಕೃಷಿ ಕಾರ್ಮಿಕರಿಗೆ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ಗಳನ್ನು ನೀಡಿಲ್ಲ. ಆಹಾರ ಧಾನ್ಯದ ಸಬ್ಸಿಡಿ ಕಡಿತ ಮಾಡುವ ಹುನ್ನಾರದ ಅಂಗವಾಗಿ ವಿದೇಶಿ ಕಂಪೆನಿಗಳ ಪರವಾದ ಆಹಾರ ಭದ್ರತಾ ಮಸೂದೆಯನ್ನು ವಿರೋಧಿಸುವುದಾಗಿ ತಿಳಿಸಿದರು.ರಾಜ್ಯವನ್ನು ಗುಡಿಸಲು ಮುಕ್ತ ಮಾಡುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಆದರೆ ರಾಜ್ಯದಲ್ಲಿ ಈಗಲೂ 15 ಲಕ್ಷ ಗುಡಿಸಲಿವೆ. ನಿರ್ಗತಿಕ ಜನ ಪಕ್ಕಾ ಮನೆಯ ಕನಸ್ಸಿನಲ್ಲಿಯೇ ಮುಪ್ಪಾಗುತ್ತಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ವಿವಿಧ ಯೋಜನೆಗಳ ಮೂಲಕ 12.70 ಲಕ್ಷ ಮನೆ ನಿರ್ಮಿಸುವುದಾಗಿ ಹೇಳಿತ್ತು. ಆದರೆ ಈವರೆಗೂ ನಿರ್ಮಾಣಗೊಂಡಿರುವ ಮನೆಗಳು ಕೇವಲ 65 ಸಾವಿರ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಆಸರೆ ಯೋಜನೆಯಡಿ ಮನೆ ನಿರ್ಮಿಸಿಕೊಡುವ ಸರ್ಕಾರದ ಯೋಜನೆ ವಿಫಲವಾಗಿದೆ.

 

ಇಂದಿರಾ ಆವಾಸ್, ಆಶ್ರಯ ಯೋಜನೆಯಡಿ ಬರುವ ಮನೆಗಳು ಸಂಪೂರ್ಣ ಬಿಜೆಪಿ ಕಾರ್ಯಕರ್ತರ ಪಾಲಾಗುತ್ತಿವೆ. ಇನ್ನೂ ಸಾವಿರಾರು ನಿರಾಶ್ರಿತರು ಶೆಡ್‌ಗಳಲ್ಲಿಯೇ ವಾಸಿಸುತ್ತಿದ್ದಾರೆ ಎಂದು ತಿಳಿಸಿದರು.

ಯಾದಗಿರಿ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಅರ್ಸೇನಿಕ್ ಹಾಗೂ ಫ್ಲೋರೈಡ್‌ನಂತಹ ರಾಸಾಯನಿಕಯುಕ್ತ ನೀರನ್ನೇ ಜನರು ಕುಡಿಯುತ್ತಿದ್ದಾರೆ.ಸರ್ಕಾರ ಶುದ್ಧ ಕುಡಿಯುವ ನೀರು ಪೂರೈಸಲು ಆಗದೇ ಇರುವುದು ದುರಂತದ ಸಂಗತಿ. ಮುಂದೊಂದು ದಿನ ಹಲವು ಹಳ್ಳಿಗಳು ರೋಗಪೀಡಿತ ಹಳ್ಳಿಗಳಾಗಿ ಪರಿವರ್ತನೆ ಆಗುವ ಆತಂಕವಿದೆ. ಇದನ್ನು ನಿವಾರಿಸಲು ಕೂಡಲೇ ರಾಸಾಯನಿಕ ಮುಕ್ತ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಬರಗಾಲದ ಹಿನ್ನೆಲೆಯಲ್ಲಿ ರೈತರ ಎಲ್ಲ ಸಾಲ ಮನ್ನಾ ಮಾಡಬೇಕು. ದನಕರುಗಳಿಗೆ ಮೇವು-ಕುಡಿಯುವ ನೀರು ಒದಗಿಸಬೇಕು. ಗುಳೆ ಹೋಗುವುದನ್ನು ತಡೆಗಟ್ಟಲು ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.ಸೈದಪ್ಪ ಗುತ್ತೇದಾರ, ಗುಂಡಪ್ಪ ಜಮಖಂಡಿ, ರಾಜು ಕಲಾಲ, ರವಿ ಮಾಲಿಪಾಟೀಲ, ಮಾನಪ್ಪ, ಮಲ್ಲಪ್ಪ, ರಾಜ್ ಮಹ್ಮದ್, ರಿಯಾಜ್, ಬಸವರಾಜ ಕಲಾಲ, ಹಣಮಂತ, ಜಲಾಲಪ್ಪ, ಭೀಮರಾಯ ಕದ್ರಾಪೂರ, ಹೊನ್ನಪ್ಪ ಗುಂಡಳ್ಳಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.