ಸೋಮವಾರ, ಡಿಸೆಂಬರ್ 16, 2019
17 °C

ನೀರೆಂದರೆ ಕನಸು ಕಣಾ, ಕಣ್ಣೀರು ಕಣಾ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ನೀರೆಂದರೆ ಕನಸು ಕಣಾ, ಕಣ್ಣೀರು ಕಣಾ!

ವಿಜಾಪುರ: ಬಿರು ಬೇಸಿಗೆಯ ನಾಡಲ್ಲಿ ವಿಧಾನ ಸಭೆ ಚುನಾವಣೆಯ ಕಾವೂ ಏರುತ್ತಿದೆ. ಗಾಳಿ ಬಂದು ನಗರದಲ್ಲಿ ಧೂಳು ರಾಚುತ್ತಿದೆ. ಅದರ ನಡುವೆಯೇ ರಾಜಕೀಯ ಕಾರ್ಯಕರ್ತರೂ ಧೂಳೆಬ್ಬಿಸುತ್ತಿದ್ದಾರೆ. ಪಟ್ಟು, ತಂತ್ರ, ಲೆಕ್ಕಾಚಾರ ಎಲ್ಲಾ ಜೋರಾಗಿದೆ. ಆದರೆ ನಳದಲ್ಲಿ ಮಾತ್ರ ನೀರು ಬರುತ್ತಿಲ್ಲ.`ಈಗ ಎಷ್ಟೋ ಚೊಲೋರಿ, ಮುಂಚೆ 15 ದಿನಕ್ಕೊಮ್ಮೆ ನೀರು ಬರ್‌ತಿತ್ರಿ. ಆಗ ದಿನಾ ಮುನ್ಸಿಪಾಲ್ಟಿ ಮುಂದ ಗದ್ದಲಾ, ಮೆರವಣಗಿ ನಡೀತಿತ್ರಿ. ಈಗ ನೀರು ಕೊಡೊ ಕೆಲಸಾನ ಬ್ಯಾರೆ ಮಂದಿಗ ಹೊರಸ್ಯಾರ‌್ರಿ. ಅದಕ್ಕ ಅಲ್ಲಿ ಇಲ್ಲಿ ನಾಕ್ ದಿನಕ್ಕೊಂದಸಲಾ ನಳ ಬರ‌್ತದ್ರಿ. ಬ್ಯಾರೆ ಕಡೆ ವಾರಕ್ಕೊಮ್ಮೆ ಕೊಡ್ತಾರ‌್ರಿ. ಪ್ಯಾಟ್ಯಾಗ ನೀರಿಗ್ ಅಂಥಾ ತ್ರಾಸ್ ಇಲ್ರಿ' ಎಂದು ಅಮ್ಜದ್ ಪಟೇಲ್ ಹೇಳುತ್ತಾರೆ.ನಗರದಲ್ಲಿ ನೀರು ಸರಬರಾಜು ಮಾಡುವ ಜವಾಬ್ದಾರಿಯನ್ನು ನಗರಸಭೆಯಿಂದ ಬೇರ್ಪಡಿಸಿ ಜಲ ಮಂಡಳಿಗೆ ನೀಡಿದ ನಂತರ ಪರಿಸ್ಥಿತಿ ಸುಧಾರಿಸಿದೆ ಎನ್ನುವುದು ಬಹುತೇಕರ ಅಭಿಪ್ರಾಯ. ಆದರೆ ಇದೇ ಮಾತನ್ನು ಗ್ರಾಮೀಣ ಭಾಗದ ಜನರಿಗೆ ಕೇಳಿದರೆ ಸಿಗುವ ಉತ್ತರ ಬೇರೆಯೇ ಆಗಿರುತ್ತದೆ. `ಯಲ್ಲಿ ನೀರ‌್ರಿ. ನಳ ಬರೋದಿಲ್ಲ ಅಂತ ಟ್ಯಾಂಕರ್‌ನ್ಯಾಗೆ ಕೊಡ್ತಾರ‌್ರಿ. ಅದೂ ವಾರಕ್ಕ, 4 ದಿನಕ್ಕೊಮ್ಮೆ ಬರ‌್ತದರಿ. ಒಂದು ಮನಿಗ ಒಂದ ಕೊಡ ನೀರು ಅಂತಾರ‌್ರಿ. ವಾರಕ್ಕೆ ಒಂದು ಕೊಡ ನೀರು ತಗೊಂಡು ಏನ್ ಮಾಡೋದರ‌್ರಿ. ಅಂತೂ ನಾವು ಮೈಲ್ ದೂರದಿಂದ ನೀರು ತರೋದು ತಪ್ಪಿಲ್ಲರಿ' ಎಂದು ವಿಜಾಪುರ -ಇಂಡಿ ಮಾರ್ಗದಲ್ಲಿರುವ ತಿಡಗುಂದಿ ಗ್ರಾಮ ಪಂಚಾಯ್ತಿ ಸದಸ್ಯ ಕಲ್ಲೂರ ಹತ್ತಿ ಹೇಳುತ್ತಾರೆ.`ನೀರು ಈ ಸಲ ಚುನಾವಣೆಯೊಳಗ ಇಶ್ಯೂರಿ. ಯಾರ್ ರೊಕ್ಕಾ ತಗೋತಾರೋ, ನಮ್ಮ ಅಪ್ಪ ಏನ್ ಹೇಳ್ತಾನೋ ಗೊತ್ತಿಲ್ಲರಿ. ಆದರೆ ನಾವು ಹುಡುಗುರು ಮಾತ್ರ ನೀರ್ ಕೊಡೋ ಮಂದಿಗೇ ವೋಟ್ ಹಾಕ್ತೇವಿ' ಎನ್ನುತ್ತಾರೆ ಹೊರ್ತಿಯಲ್ಲಿ ಲಗೇಜ್ ಆಟೊ ಚಾಲಕರಾಗಿರುವ ಸೋಮೇಶ್ ಚಳಕೇರಿ. `ಹಂಗಂತ ತಾತ್ಪೂರ್ತಿಕ್ ವ್ಯವಸ್ಥಾ ಮಾಡಿದ್ರ ಮತ್ ನಮ್ ವೋಟ್ ಇಲ್ಲರಿ' ಎಂದು ಅವರ ಸ್ನೇಹಿತ ಸೇರಿಸುತ್ತಾನೆ.ಹಣ ತೆಗೆದುಕೊಂಡು ಮತ ಹಾಕಬಾರದು ಎಂಬ ಬಗ್ಗೆ ಹೊಸ ಮತದಾರರಲ್ಲಿ ಜಾಗೃತಿ ಮೂಡಿದೆ. `ಹಿರಿಯರು ಏನಾದರೂ ಮಾಡಲಿ ನಾವು ಮಾತ್ರ ಅಭಿವೃದ್ಧಿಗೆ ಸ್ಪಂದಿಸುವವರಿಗೆ, ಜನರ ಸಮಸ್ಯೆಯನ್ನು ನಿವಾರಣೆ ಮಾಡುವ ಸಾಮರ್ಥ್ಯ ಇರುವವರಿಗೇ ಮತ ಚಲಾಯಿಸುತ್ತೇವೆ' ಎಂದು ಹೇಳುತ್ತಾರೆ.ಲಂಬಾಣಿ ತಾಂಡಾಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಎಲ್ಲಿ ನೀರು ಸಿಗುತ್ತದೋ ಅಲ್ಲಿ ಟೆಂಟ್ ಹಾಕಿಕೊಂಡು ಸಂಸಾರ ನಡೆಸುವವರನ್ನು ಜಿಲ್ಲೆಯ ಬಹುತೇಕ ಎಲ್ಲ ಕಡೆ ಕಾಣಬಹುದು. ಅವರ ಹೊಲ, ಮನೆ, ತಾಂಡಾ ಬೇರೆ ಎಲ್ಲಿಯೋ ಇರುತ್ತದೆ. ನೀರಿದೆ ಎಂಬ ಕಾರಣಕ್ಕೇ ತಾತ್ಕಾಲಿಕ ಟೆಂಟ್ ಹಾಕಿಕೊಂಡು ಜೀವಿಸುತ್ತಾರೆ. `ಏನ್ ಮಾಡೋದರ‌್ರಿ. ಅಲ್ಲಿ ನೀರಿಲ್ಲ. ಇಲ್ಲಿ ತೋಟ ಅದ. ಬೋರ್‌ನ್ಯಾಗ ನೀರ್ ಬರ್ತದ. ಅದಕ್ಕ ಇಲ್ಲೇ ಅದೇವ್ರಿ' ಎನ್ನುತ್ತಾರೆ ವಸರಾಮ.`ಮಳೆಗಾಲದಲ್ಲಿಯೂ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡೋದನ್ನು ನೀವು ಎಲ್ಲಿಯಾದರೂ ನೋಡಿದ್ದೀರಾ. ನಮ್ಮ ಜಿಲ್ಲೆಯಲ್ಲಿ ಹೀಗೆ ಮಳೆಗಾಲದಲ್ಲಿಯೂ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡುವ ಗ್ರಾಮಗಳು ಇವೆ' ಎನ್ನುತ್ತಾರೆ ರಫಿಕ್ ಭಂಡಾರಿ.ನೀರಿನ ರಾಜಕೀಯ: `ನೀರು ಪೂರೈಕೆ ಸರಿಯಾಗಿ ಮಾಡದೇ ಇರುವುದರಲ್ಲಿಯೂ ರಾಜಕೀಯ ಇದೆ' ಎಂಬ ಗುಮಾನಿ ಲೇಖಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರದ್ದು.`ಆದಿಲ್‌ಶಾಹಿ ಆಡಳಿತದಲ್ಲಿ ನೀರಿನ ವ್ಯವಸ್ಥೆ ಚೆನ್ನಾಗಿತ್ತು. ಅವರು ಕಟ್ಟಿಸಿದ ಬಾವಿಗಳಲ್ಲಿ ಎಂದೂ ನೀರು ಆರಿಲ್ಲ. ನಾನು ಸಣ್ಣವನಿರುವಾಗಲೂ ಕೂಡ ದಿನಕ್ಕೆ ಎರಡು ಬಾರಿ ನೀರು ಬರುತ್ತಿತ್ತು. ಈಗ ನೀರಿನ ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಜನಸಂಖ್ಯೆ ಹೆಚ್ಚಾಗಿದ್ದು ಮಾತ್ರ ಕಾರಣ ಅಲ್ಲ' ಎನ್ನುತ್ತಾರೆ ಅವರು.ವಿಜಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಈಗ ಪಂಚ ನದಿಗಳಿಲ್ಲ. ಮೂರು ನದಿಗಳು ಬಾಗಲಕೋಟೆ ಜಿಲ್ಲೆ ವ್ಯಾಪ್ತಿಗೆ ಹೋಗಿವೆ. ವಿಜಾಪುರದಲ್ಲಿ ಈಗ ಭೀಮಾ ಮತ್ತು ಕೃಷ್ಣಾ ನದಿಗಳು ಮಾತ್ರ ಹರಿಯುತ್ತವೆ. ಆದರೂ ಜನರು ಪಂಚನದಿಗಳ ನಾಡು ಎಂದು ಕರೆಯುವುದನ್ನು ಬಿಟ್ಟಿಲ್ಲ. ಭೀಮಾ ನದಿಯ ತೀರಲ್ಲಿಯೇ ಸಾಗಿದರೂ ಝಳಕಿ, ಚಡಚಣ ಮುಂತಾದ ಹೋಬಳಿ ವ್ಯಾಪ್ತಿಯಲ್ಲಿ ನೀರಿನ ಕೊರತೆ ಎದ್ದು ಕಾಣುತ್ತದೆ.`ನದಿಗಳಿವೆ. ಆದರೆ ನೀರಾವರಿ ಇಲ್ಲ. ಆಲಮಟ್ಟಿಯಿಂದ ಏನೂ ಪ್ರಯೋಜನ ಇಲ್ಲ. ಬಿ ಸ್ಕೀಂ ಜಾರಿಗೆ ಬಂದರೆ ಏನಾದರೂ ಅನುಕೂಲ ಆಗಬಹುದು. ಅದಕ್ಕೆ ರೈತರೂ ಎಕರೆಗೆ ಇಂತಿಷ್ಟು ಅಂತ ಹಣ ಕೊಟ್ಟು ಯೋಜನೆ ಪೂರ್ಣವಾಗುವ ಹಾಗೆ ಮಾಡಿಕೊಂಡರೆ ಅನುಕೂಲವಾಗುತ್ತದೆ' ಎಂಬ ಭಾವನೆ ಚಡಚಣದ ಬಸವರಾಜ ಬಂಡರಕವಟೆ ಅವರದ್ದು.`ನೀರಿನ್ ತ್ರಾಸ್ ರಗಡದ. ರೈತ್ರದು ಬದಕು ಹೈರಾಣಾಗ್ಯದ. ಇದನ್ನೆಲ್ಲಾ ಸರೀ ಮಾಡೋ ನಾಯಕ ಬರಬೇಕರಿ' ಎನ್ನುತ್ತಾರೆ ಝಳಕಿಯ ಸುನಿಲ್. ಕಾಲುವೆಯಲ್ಲೂ ಸರಿಯಾಗಿ ನೀರು ಬರುವುದಿಲ್ಲ ಎಂಬ ಬೇಸರ ಅವರಿಗೆ.ಇಂತಹ ಬೇಸರ, ಆಕ್ರೋಶ, ಸಿಟ್ಟು ಸೆಡವುಗಳ ನಡುವೆಯೇ ಮತ್ತೊಂದು ವಿಧಾನಸಭೆ ಚುನಾವಣೆ ಬಾಗಿಲಿಗೆ ಬಂದು ನಿಂತಿದೆ. ಪ್ರಚಾರ ಜೋರಾಗುತ್ತದೆ. ಯಾರೋ ಗೆದ್ದು ಬರುತ್ತಾರೆ. ಆದರೆ ನಳದಲ್ಲಿ ನೀರು ಬರೋದಿಲ್ಲ. ಬರೀ ಕಣ್ಣೀರು ಗ್ಯಾರಂಟಿ ಎಂಬ ಭಾವನೆ ಜನರದ್ದು.

ನೀರಾವರಿಯೇ ಪ್ರಧಾನ ವಿಷಯ!

ಈ ಬಾರಿ ಚುನಾವಣೆಯಲ್ಲಿ ನೀರಾವರಿ ವಿಷಯವೇ ಪ್ರಧಾನ ಎಂದು ಭೀಮಾ ರೈತರ ಪರವಾಗಿ ಸುಪ್ರೀಂಕೋರ್ಟ್‌ವರೆಗೂ ಹೋರಾಟ ನಡೆಸಿದ ಪಂಚಪ್ಪ ಕಲಬುರ್ಗಿ ಅವರ ಸ್ಪಷ್ಟ ಅಭಿಪ್ರಾಯ. `ನಾವು ನಾಲೆಯ ಕೊನೆ ಭಾಗದ ರೈತರು. ಅದಕ್ಕೆ ನೀರು ಬರೋದಿಲ್ಲ. ನಾವು ರಾಜ್ಯದ ಕೊನೆ ಭಾಗದ ರೈತರು. ಅದಕ್ಕೇ ಅನುದಾನ ಕೂಡ ಸರಿಯಾಗಿ ಬರೋದಿಲ್ಲ' ಎಂದು ಅವರು ವ್ಯಥೆ ಪಡುತ್ತಾರೆ.`ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಇರುವ ಎಲ್ಲ ಅಡೆತಡೆಗಳು ಈಗ ನಿವಾರಣೆಯಾಗಿದೆ. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ತಕ್ಷಣದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನಮ್ಮ ಶಾಸಕರು ಈ ಬಗ್ಗೆ ಶಾಸನ ಸಭೆಯಲ್ಲಿ ದನಿ ಎತ್ತಬೇಕು. ನೆನೆಗುದಿಗೆ ಬಿದ್ದಿರುವ 6 ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ರೈತರಿಗೆ ನೀರು ಕೊಟ್ಟರೆ ವಿಜಾಪುರ ಜಿಲ್ಲೆ ಶೇ 80ರಷ್ಟು ನೀರಾವರಿಯಾಗುತ್ತದೆ. ಆಗ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು' ಎಂಬ ವಿಶ್ವಾಸ ಅವರದ್ದು. ಈ ವಿಶ್ವಾಸದಲ್ಲಿಯೇ ಅವರು ಈ ಬಾರಿ ಇಂಡಿಯಿಂದ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಜನಸಂಖ್ಯೆ ಸಮಸ್ಯೆಯಲ್ಲ!

ವಿಜಾಪುರ ನಗರಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಲು ಕಷ್ಟವಾಗುತ್ತಿರುವುದಕ್ಕೆ ಜನಸಂಖ್ಯೆ ಹೆಚ್ಚಳ ಕಾರಣ ಅಲ್ಲ.ಈಗ ನಗರದ ಜನಸಂಖ್ಯೆ ಸುಮಾರು 3 ಲಕ್ಷ. ಆದರೆ 1600 ರಿಂದ 1665ರಲ್ಲಿ ಆದಿಲ್‌ಶಾಹಿ ಆಡಳಿತ ಇದ್ದಾಗ ವಿಜಾಪುರದ ಜನಸಂಖ್ಯೆ 13 ಲಕ್ಷ ಇತ್ತು. ಆಗ ನೀರಿನ ಸಮಸ್ಯೆ ಇರಲಿಲ್ಲ. 1686ರಲ್ಲಿ ಔರಂಗಜೇಬ ವಿಜಾಪುರವನ್ನು ಗೆದ್ದಾಗಲೇ ಇಲ್ಲಿನ ಜನಸಂಖ್ಯೆ 9 ಲಕ್ಷ ಇತ್ತು. ಇವೆಲ್ಲಾ ಇತಿಹಾಸದಲ್ಲಿ ದಾಖಲಾಗಿವೆ ಎನ್ನುತ್ತಾರೆ ಲೇಖಕ ಕೃಷ್ಣ ಕೊಲ್ಹಾರ ಕುಲಕರ್ಣಿ.ರಾಮಲಿಂಗಕೆರೆ, ಬೇಗಂ ತಲಾಬ್, ಚಾಂದ್ ಬಾವುಡಿ ಮುಂತಾದವುಗಳ ಮೂಲಕ ವಿಜಾಪುರ ನಗರವನ್ನು ಆದಿಲ್‌ಶಾಹಿಗಳು ನೀರಿನ ಸ್ವರ್ಗ ಮಾಡಿದ್ದರು. ಹವಾನಿಯಂತ್ರಣದ ವ್ಯವಸ್ಥೆ ಕೂಡ ಇತ್ತು. ಆಗಿನ ನೀರಿನ ವ್ಯವಸ್ಥೆಯ ಪಳೆಯುಳಿಕೆಗಳು ಈಗಲೂ ವಿಜಾಪುರದಲ್ಲಿ ಕಾಣ ಸಿಗುತ್ತವೆ. ಕಾಲುವೆಗಳು, ಕೆರೆಗಳು, ವಾತಾನುಕೂಲದ ಮಂಜಿಲ್‌ಗಳು ಈಗಲೂ ಇವೆ. 1960ರವರೆಗೂ ನೀರಿನ ಸಮಸ್ಯೆ ಇರಲಿಲ್ಲ. 1910ರಲ್ಲಿ ನೀರಿನ ಸಮಸ್ಯೆ ಉಂಟಾದಾಗ ಸರ್ ಎಂ.ವಿಶ್ವೇಶ್ವರಯ್ಯ ಅವರು ಬೂತಾಳ್‌ಕೆರೆ ಕಟ್ಟಿಸಿ ನಗರದ ನೀರಿನ ಸಮಸ್ಯೆ ಬಗೆಹರಿಸಿದ್ದರು. ಅದು 1970ರವರೆಗೂ ಇಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಿತು.`ಈಗ ಸೂಕ್ತ ನಿರ್ವಹಣೆ ಇಲ್ಲದೆ ನೀರಿನ ಸಮಸ್ಯೆ ಎದುರಾಗಿದೆ. ವಿಜಾಪುರದಲ್ಲಿ ಅಂತರ್ಜಲದ ಕೊರತೆ ಇಲ್ಲ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜಿಲ್ಲೆಯ ನೀರಾವರಿ ಬಗ್ಗೆ ಕೂಡ ಇದೇ ಮಾತನ್ನು ಹೇಳಬಹುದು. ಈಗ ಜಿಲ್ಲೆಯಲ್ಲಿ ಶೇ 15ರಷ್ಟು ಭಾಗಕ್ಕೆ ನೀರಾವರಿ ಇದೆ. ಬಿ ಸ್ಕೀಂ ಜಾರಿಯಾದರೆ ಶೇ 85ರಷ್ಟು ನೀರಾವರಿ ಯಾಗುತ್ತದೆ. ರಾಜಕಾರಣಿಗಳು ಇಲ್ಲಿ ಬಂದು ನೀರಾವರಿ ಬಗ್ಗೆ ಹೊಡಕೊತಾರೆ.ಆದರೆ ಇಲ್ಲಿ ಹೊಡಕೊಂಡರೆ ಏನೂ ಪ್ರಯೋಜನ ಇಲ್ಲ. ವಿಧಾನಸಭೆಯಲ್ಲಿ, ಪಾರ್ಲಿ ಮೆಂಟ್‌ನಲ್ಲಿ ಹೊಡಕೋ ಬೇಕು' ಎನ್ನೋದು ಅವರ ಸ್ಪಷ್ಟ ಅಭಿಪ್ರಾಯ.

ಪ್ರತಿಕ್ರಿಯಿಸಿ (+)