ಗುರುವಾರ , ಅಕ್ಟೋಬರ್ 17, 2019
28 °C

ನೀರ ತಂದೇವಾ... ನಿಮಗಾ...!

Published:
Updated:
ನೀರ ತಂದೇವಾ... ನಿಮಗಾ...!

ಆಧುನಿಕ ಕನ್ನಡ ರಂಗಭೂಮಿಯಲ್ಲಿ ಸಿಜಿಕೆಯವರದ್ದು ದೊಡ್ಡ ಹೆಸರು. ಅವರೇ ಹುಟ್ಟು ಹಾಕಿದ ಸಂಸ್ಥೆ `ರಂಗ ನಿರಂತರ~. ಈ ಸಂಸ್ಥೆ ಸಿಜಿಕೆಯವರ ನೆನಪಿನಲ್ಲಿ ಹೊಸ ನಾಟವೊಂದನ್ನು ರಂಗದ ಮೇಲೆ ತಂದಿದೆ. ಅದು ಡಾ. ಅಮರೇಶ ನುಗಡೋಣಿಯವರ ಸಣ್ಣ ಕಥೆಯಧಾರಿತ `ನೀರು ತಂದವರು~.ಕಥೆಯನ್ನು ರಂಗರೂಪಕ್ಕೆ ತಂದವರು ಕನ್ನಡದ ಮತ್ತೊಬ್ಬ ನಿರ್ದೇಶಕ ಶಶಿಧರ್ ಭಾರಿಘಾಟ್. ಸಿಜಿಕೆಯ ಒಡನಾಟದಲ್ಲೇ ರಂಗಭೂಮಿಯ ಒಳ ಹೊರಗನ್ನು ಅಭ್ಯಸಿಸುತ್ತಾ ನಾಟಕ ಪ್ರೀತಿಯನ್ನು ಬೆಳೆಸಿಕೊಂಡ ರವಿ ಎಂ. ಇದರ ನಿರ್ದೇಶಕರು.ನೀರು ಎನ್ನುವುದು ಜೀವದ್ರವ್ಯ. ಗಾಳಿ-ಬೆಳಕುಗಳ ಹಾಗೆ ಅದು ಯಾರೊಬ್ಬರ ಸ್ವತ್ತೂ ಅಲ್ಲ. ಅದು ಸಕಲ ಜೀವರಾಶಿಗಳಿಗೂ ಬೇಕು. ಅಂಥ ನೀರನ್ನು ಮೇಲ್ವರ್ಗದ ಜನ ತಮ್ಮ ಸ್ವತ್ತಾಗಿಸಿಕೊಂಡು, ಬಡಜನರ ಶೋಷಣೆಯ ಅಸ್ತ್ರವಾಗಿ ಬಳಸುತ್ತಿರುವುದನ್ನು ಮತ್ತು ಅದೇ ಶೋಷಿತ ಜನಾಂಗ ಮಾನವೀಯ ನೆಲೆಯಲ್ಲಿ ಮೇಲ್ವರ್ಗದವರಿಗೆ ನೀರನ್ನು ಹೊತ್ತು ತರುವುದು ನಾಟಕದ ಕಥಾ ಹಂದರ.ನಾಟಕ ತೆರೆದುಕೊಳ್ಳುವುದೇ ಬಸ್‌ಸ್ಟ್ಯಾಂಡ್ ಪಕ್ಕದಲ್ಲಿರುವ ಟೀ ಅಂಗಡಿ ಮತ್ತು ಅದರ ಸುತ್ತಲಿನ ಚಟುವಟಿಕೆಗಳಿಂದ. ಮೇಲ್ಜಾತಿಗೆ ಸೇರಿದ ಈ ಅಂಗಡಿಯ ಮಾಲೀಕ ಕೀಳು ಜಾತಿಯವರಿಗೆ ನೀರು ಕೊಡಲೂ ಹಿಂದುಮುಂದು ನೋಡುತ್ತಾನೆ. ಅವರಿಗೆ ಪ್ರತ್ಯೇಕ ಲೋಟದಲ್ಲಿ ಚಹಾ ನೀಡುತ್ತಾನೆ. ಅವರು ದೂರದಲ್ಲಿಟ್ಟ ದುಡ್ಡಿನ ಮೇಲೆ ನೀರು ಪ್ರೋಕ್ಷಿಸಿ ತೆಗೆದುಕೊಳ್ಳುತ್ತಾನೆ. ಮಠದವ್ವ ಹಾದಿಯಲ್ಲಿ ಬಂದರೆ ಓಡಿಹೋಗಿ ಅಡ್ಡ ಬೀಳುತ್ತಾನೆ.ಅಂದರೆ ನಾಟಕದ ವಸ್ತು ಏನೆಂಬುದನ್ನು ನಿರ್ದೇಶಕರು ಮೊದಲ ದೃಶ್ಯದಲ್ಲಿ ಸಮರ್ಥವಾಗಿ ಕಟ್ಟಿಕೊಡುವಲ್ಲಿ ಶಕ್ತರಾಗಿದ್ದಾರೆ. ಎರಡನೆಯ ದೃಶ್ಯದಲ್ಲಿ ಗುಡಿಸಲಿನ ಹೊರಗೆ ಲಾಟೀನ್ ಬೆಳಕಲ್ಲಿ ನಡೆಯುವ ನೀರಿಗಾಗಿ ಪರಿತಪಿಸುವ ಜನರ ಪರದಾಟ, ಹಿಂದುಳಿದ ಯುವಕರ ರೊಚ್ಚು, ಆವೇಶ ಎಲ್ಲವೂ ಬಿಗುವಾಗಿಯೇ ಮೂಡಿಬಂದಿದೆ.ಅಸ್ಪೃಶ್ಯ ಕೇರಿಯ ಜನರೆಲ್ಲಾ ಮಲಗಿರುವ ವೇಳೆಯಲ್ಲಿ ಮೇಲ್ಜಾತಿಯ ಜನರೆಲ್ಲಾ ಗುಡಿಸಲುಗಳಿಗೆ ನುಗ್ಗಿ ಅಲ್ಲಿ ತುಂಬಿಟ್ಟಿದ್ದ ನೀರನ್ನೆಲ್ಲಾ ಚೆಲ್ಲಿದ ಮತ್ತು ಅದನ್ನೆಲ್ಲಾ ಕಂಡು ಆಕ್ರಂದನಗೈದ ಜನರ ಭಾವಾಭಿವ್ಯಕ್ತಿ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಡೈಲಾಗ್ ಇಲ್ಲದ, ಕೇವಲ ಸಂಗೀತ ಮತ್ತು ಬೆಳಕು ವಿನ್ಯಾಸದಲ್ಲಿ ಬಹಳಷ್ಟನ್ನು ಪ್ರೇಕ್ಷಕರಿಗೆ ದಾಟಿಸಿದೆ.ನಾಲ್ಕನೆಯ ದೃಶ್ಯದಲ್ಲಿ ಅಳವಡಿಸಿಕೊಂಡ ಡೊಳ್ಳುಕುಣಿತ ನಾಟಕದ ಗಾಂಭೀರ್ಯ ಹೆಚ್ಚಿಸುವಂತಿತ್ತು. ಆದರೆ ಈ ಬಿಗಿಯನ್ನು ಮುಂದಿನ ದೃಶ್ಯಗಳಲ್ಲಿ ಕಾಯ್ದುಕೊಳ್ಳುವಲ್ಲಿ ನಾಟಕ ವಿಫಲವಾಗಿದೆ. ಅದಕ್ಕೆ ಕಾರಣ ನಾಟಕ ವಾಚ್ಯವಾಗುತ್ತಾ ಸಾಗಿದ್ದು. ಅದರ ಜೊತೆಗೆ ವಚನಗಳ ಭಾರಕ್ಕೆ ನಾಟಕದ ವಸ್ತು ಜಗ್ಗತೊಡಗಿದ್ದು. ಆದರೆ ಸಮನ್ವಯದ ಬದುಕಿನ ಅವಶ್ಯಕತೆಯನ್ನು ಸಾರುವ ಈ ನಾಟಕ ಈ ಕಾಲಘಟ್ಟದ ಅವಶ್ಯಕತೆಯೂ ಹೌದು.ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಈ ನಾಟಕದ ಅವಧಿ ಒಂದು ಘಂಟೆ ಇಪ್ಪತ್ತು ನಿಮಿಷ. ಅದರೆ ಅದು ಇನ್ನೂ ದೀರ್ಘವಾಗಿತ್ತೇನೋ ಎಂಬ ಅನುಭವ ಬಂದರೆ ಅದಕ್ಕೆ ಸ್ಕ್ರಿಪ್ಟ್‌ನಲ್ಲಿನ ಕೊರತೆಯೇ ಕಾರಣ. ಆದರೆ ಎಲ್ಲಾ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸುಮಾರು ಮೂವತ್ತೆರಡು ಕಲಾವಿದರು ರಂಗದ ಮೇಲೆ ಅಭಿನಯಿಸಿದ್ದರೆ, ರಂಗದ ಹಿಂದೆ ಇಪ್ಪತ್ತಕ್ಕೂ ಹೆಚ್ಚು ತಂತ್ರಜ್ಞರು ದುಡಿದಿದ್ದಾರೆ.ನಾಟಕಕ್ಕೊಂದು ಉದ್ದೇಶವಿರಬೇಕು ನಿಜ. ಆದರೆ ಅದು ಕಲಾತ್ಮಕ ಚೌಕಟ್ಟಿನೊಳಗೆ ಬಿಂಬಿತವಾಗಬೇಕು. ಹಾಗಾಗದಿದ್ದರೆ ಅದು ಕೇವಲ ಘೋಷಣೆಯಾಗಿ, ಹೇಳಿಕೆಯ ಮಟ್ಟದಲ್ಲಿ ಉಳಿದುಬಿಡುತ್ತದೆ. ಆದರೂ ಇಂಥ ನಾಟಕಗಳನ್ನು ನೋಡುತ್ತಿರುವಾಗಲೇ `ಇನ್ನೊಂದರ~ ನೆನಪಾಗುತ್ತದೆ.  `ನೀರು ತಂದವರು~ ನಾಟಕವನ್ನು ನೋಡುತ್ತಿರುವಾಗ ಮಂಡ್ಯದ ಅಂಬಲವಾಡಿಯಲ್ಲಿ ನಡೆದ `ಮರ್ಯಾದಾ ಹತ್ಯೆ~ ಘಟನೆ ನನ್ನ ಮನಸ್ಸಿನಲ್ಲಿ ಹಾದು ಹೋಗುತ್ತಿತ್ತು. ಅದು ಈ ನಾಟಕದ ಯಶಸ್ಸು. 

 

 

Post Comments (+)