ಸೋಮವಾರ, ಏಪ್ರಿಲ್ 12, 2021
24 °C

ನೀಲಂ ಪ್ರಭಾವ: ವಿವಿಧೆಡೆ ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನೀಲಂ~ ಚಂಡಮಾರುತದ  ಪ್ರಭಾವ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯೂ ಕಂಡು ಬಂದಿದ್ದು, ಗುರುವಾರ ಧಾರಾಕಾರ ಮಳೆಯಾಗಿದೆ. ಮುಳಬಾಗಲು ತಾಲ್ಲೂಕಿನಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ.ಈ ಅಕಾಲಿಕ ಮಳೆಯಿಂದ ಕೆಲ ಬೆಳೆಗಳಿಗೆ ಹಾನಿ ತಟ್ಟಿದ್ದರೆ ಹಿಂಗಾರಿನ ಇನ್ನೂ ಕೆಲ ಬೆಳೆಗಳಿಗೆ  ಅನುಕೂಲವಾಗಿದೆ.ಬೆಂಗಳೂರಿನಲ್ಲಿ ಗುರುವಾರವೂ ಮಳೆ ಆರ್ಭಟ ಮುಂದುವರಿಯಿತು. ಇದರಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು. ಗಾಳಿ ಮತ್ತು ಮಳೆ ಕಾರಣದಿಂದ  ನಗರದ ಹಲವೆಡೆ 73 ಮರಗಳು ನೆಲಕ್ಕುರುಳಿವೆ.ಇಡೀ ದಿನ ಮಳೆ:  ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ನೀಲಂ ಪ್ರಭಾವ ಕಾಣಿಸಿಕೊಂಡಿದ್ದು ಇಡೀ ದಿನ ಮಳೆ ಸುರಿದಿದೆ. ಮುಳಬಾಗಲು ತಾಲ್ಲೂಕಿನಲ್ಲಿ ಸತತ ಮಳೆಯಿಂದಾಗಿ ಮನೆ ಕುಸಿದು ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ.ದಾವಣಗೆರೆ ವರದಿ:  ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಕೆಲವೆಡೆ ರಾಜ್ಯೋತ್ಸವ ಕಾರ್ಯಕ್ರಮಗಳೂ  ರದ್ದುಗೊಂಡಿವೆ.ದಾವಣಗೆರೆ ತಾಲ್ಲೂಕಿನ ಮಾಯಕೊಂಡದ ಕೆಲವು ಭಾಗಗಳಲ್ಲಿ ಮೆಕ್ಕೆಜೋಳ, ಕಬ್ಬು ಬೆಳೆ ಹಾನಿಗೊಳಗಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಹರಿಹರ ತಾಲ್ಲೂಕುಗಳಲ್ಲಿ ಜಡಿಮಳೆ ಸುರಿದಿದೆ. ಚನ್ನಗಿರಿಯಲ್ಲಿ ಸುಮಾರು 2 ಸೆಂ.ಮೀ., ದಾವಣಗೆರೆಯಲ್ಲಿ 6ಸೆಂ.ಮೀ. ಮಳೆ ಸುರಿದಿದೆ ಎಂದು ತಾಲ್ಲೂಕು ಕಚೇರಿ ಮೂಲಗಳು ತಿಳಿಸಿವೆ. ಒಟ್ಟಾರೆ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 3.1 ಸೆಂ.ಮೀ. ಮಳೆ ಯಾಗಿದೆ.ಚಿತ್ರದುರ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆಸುರಿದಿದ್ದು, ಬಯಲುಸೀಮೆಯಲ್ಲಿ ಮಲೆನಾಡಿನ ವಾತಾವರಣ ಮೂಡಿಸಿದೆ. ಮೊಳಕಾಲ್ಮುರಿನಲ್ಲಿ 7.8 ಸೆಂ.ಮೀ. ಮಳೆಯಾಗಿದೆ. ಇಲ್ಲಿ ಈಗಾಗಲೇ ಮುಂಗಾರು ಹಿನ್ನಡೆಯಿಂದ ಬಾಡಿ ಹೋಗಿದ್ದ ಶೇಂಗಾ ಬೆಳೆ ಮಳೆಯ ಪರಿಣಾಮ ಕೊಳೆಯಲಾರಂಭಿಸಿದೆ. ಆದರೆ, ಕೊಯ್ಲಿಗೆ ಬಂದಿರುವ ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಗೆ ಸ್ವಲ್ಪ ಅನುಕೂಲಕರವಾಗಿದೆ ಎಂದು ರೈತರು ತಿಳಿಸಿದ್ದಾರೆ.ಶಿವಮೊಗ್ಗದಲ್ಲಿ ಬುಧವಾರ ರಾತ್ರಿಯಿಂದ ಆರಂಭವಾದ ಮಳೆ ಇಡೀ ದಿನ ನಿರಂತರವಾಗಿ ಸುರಿದಿದೆ. ಇದೇ ಮಳೆ ಹದಿನೈದು ದಿನ ಮುಂಚೆ ಬಂದಿದ್ದರೆ ರೈತರಿಗೆ ತುಂಬಾ ಅನುಕೂಲವಾಗುತ್ತಿತ್ತು. ಈಗ ಮೆಕ್ಕೆಜೋಳ ಕೊಯ್ಲಿಗೆ ಬಂದಿದ್ದು, ಮಳೆ ಅಡ್ಡಪರಿಣಾಮ ಬೀರುವ ಸಂಭವ ಇದೆ. ಉಳಿದಂತೆ ಬತ್ತಕ್ಕೆ ಈ ಮಳೆ ಅನುಕೂಲವಾಗಿದೆ.ಒಟ್ಟಾರೆ ಕೃಷಿ ಸಮುದಾಯಕ್ಕೆ, ಅಂತರ್ಜಲ ಹೆಚ್ಚಳಕ್ಕೆ ಈ ಮಳೆ ಅನುಕೂಲವಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಶಿವಮೂರ್ತಪ್ಪ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಹುಬ್ಬಳ್ಳಿ ವರದಿ:

ಗುರುವಾರ ಬೆಳಗಿನ ಜಾವದಿಂದಲೇ ಉತ್ತರ ಕರ್ನಾಟಕದಾದ್ಯಂತ ಮಳೆ ಹರಡಿಕೊಂಡಿದ್ದು, ಇಡೀ ದಿನ ಮಳೆಯಾಗಿದೆ. ಧಾರವಾಡ, ಹಾವೇರಿ, ಗದಗ, ಬೆಳಗಾವಿ, ವಿಜಾಪುರ, ಬಾಗಲಕೋಟೆ, ಬಳ್ಳಾರಿ, ಉ.ಕ. ಜಿಲ್ಲೆಯಲ್ಲಿ  ಮಳೆಯಾಗಿದೆ.ಉತ್ತರ ಕರ್ನಾಟಕದಲ್ಲಿ ಮುಂಗಾರು ಕೈಕೊಟ್ಟ ಕಾರಣ ಬೆಳೆ ವಿಫಲವಾಗಿತ್ತು. ಇತ್ತೀಚೆಗೆ ಸುರಿದ ಒಂದೆರಡು ಹಿಂಗಾರು ಮಳೆಯಿಂದ ಹಸಿರು ಚಿಗುರೊಡೆದಿತ್ತು.  ಕಳೆದ 15 ದಿನಗಳ ಹಿಂದೆ ಮಳೆ ಮತ್ತೆ ಕೈಕೊಟ್ಟ ಕಾರಣ ಬೆಳೆ ಒಣಗತೊಡಗಿತ್ತು. ಬುಧವಾರ ಮಧ್ಯರಾತ್ರಿಯಿಂದ ಆರಂಭವಾಗಿರುವ ತುಂತುರು ಮಳೆ ನಿರಂತರವಾಗಿ ಸುರಿಯುತ್ತಿದ್ದು, ಬೆಳೆಗೆ ಅನುಕೂಲವಾಗಿದ್ದು ರೈತರು ಖುಷಿ ಪಡುವಂತೆ ಮಾಡಿದೆ.ಮುಳಬಾಗಲು ವರದಿ:

ಎರಡು ದಿನದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಗೋಡೆ ಕುಸಿದು ಮಹಿಳೆ ಮೃತಪಟ್ಟ ಘಟನೆ ಮುಳಬಾಗಲು ತಾಲ್ಲೂಕಿನ ಗುಮ್ಮಕಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಆರ್.ಅಗ್ರಹಾರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.ಮೃತ ಮಹಿಳೆ ಉರುಳಿ ಚಂಗಮ್ಮ    (65) ಎಂದು ಗುರುತಿಸಲಾಗಿದೆ. ತಾಲ್ಲೂಕಿನ ಹಲವೆಡೆ ಮನೆಗಳು ಕುಸಿದಿವೆ. ವಾನಗಾನಹಳ್ಳಿ, ಟಿ.ಅಗರ ಹಾಗೂ ಬೂಸಲಕುಂಟಿ ಗ್ರಾಮದಲ್ಲಿ ಮನೆಗಳ ಗೋಡೆಗಳು ಕುಸಿದಿವೆ. ಸ್ಥಳಕ್ಕೆ ತಹಶೀಲ್ದಾರ್ ಎಚ್.ನಂಜಯ್ಯ ಭೇಟಿ ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.