ನೀಲಗಿರಿ ನಿಷೇಧ

7

ನೀಲಗಿರಿ ನಿಷೇಧ

Published:
Updated:

ಬರಡು ಭೂಮಿಯಲ್ಲೂ ಶೀಘ್ರವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದ್ದ ನೀಲಗಿರಿ ಕೃಷಿಯನ್ನು ಮಲೆನಾಡಿನಲ್ಲಿ ನಿಷೇಧಿಸಿದ್ದು ಅಲ್ಲಿನ ಜೈವಿಕ ಪರಿಸರ ರಕ್ಷಣೆಯಲ್ಲಿ ಅವಶ್ಯಕವಿದ್ದ ಕ್ರಮ. ಹೊಸದಾಗಿ ಬೆಳೆಯಲು ಅವಕಾಶವಿಲ್ಲ ಎಂಬುದೇನೋ ಸರಿ. ಈಗ ಇರುವ ನೀಲಗಿರಿ ತೋಪುಗಳನ್ನು ಏನು ಮಾಡಬೇಕೆಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಮಲೆನಾಡಿನಲ್ಲಿಯೇ ಬೇರೇನೂ ಬೆಳೆಯದ ಬರಡು ಭೂಮಿಯಿದ್ದ ರೈತರಿಗೆ ನೀಲಗಿರಿಯಿಂದ ಅನುಕೂಲ ಇತ್ತು. ಆದರೆ ಅದು ಹೆಚ್ಚು ನೀರನ್ನು ಹೀರುತ್ತದೆ, ಅಕ್ಕಪಕ್ಕ ಬೇರೆ ಯಾವುದೇ ಸಸ್ಯಗಳು ಬೆಳೆಯಗೊಡುವುದಿಲ್ಲ, ಮಣ್ಣಿನ ತೇವಾಂಶವನ್ನು ಒಣಗಿಸಿ ಅದರ ಫಲವತ್ತತೆ ಕ್ಷೀಣಿಸುವಂತೆ ಮಾಡುತ್ತದೆ, ಸೂಕ್ಷ್ಮಜೀವಿಗಳೂ ಇಲ್ಲವಾಗುತ್ತವೆ.

 

ಮಣ್ಣಿನ ಸವಕಳಿಯನ್ನು ಹೆಚ್ಚಿಸುತ್ತದೆ, ಅಂತರ್ಜಲ ಸಂಗ್ರಹದ ಕುಸಿತಕ್ಕೂ ಕಾರಣವಾಗುತ್ತದೆ, ನೀಲಗಿರಿಯ ಸುತ್ತಲಿನ ಕೃಷಿ ಭೂಮಿಯಲ್ಲಿ ಬೀಜ ಮೊಳೆಯದ ವಾತಾವರಣ ಇರುತ್ತದೆ ಎಂಬುದೆಲ್ಲ ರೈತರ ಅನುಭವಕ್ಕೂ ಬಂದಿತು. ನೀಲಗಿರಿ ಹೆಚ್ಚಳದಿಂದ ಪ್ರಾಣಿಪಕ್ಷಿಗಳಿಗೂ ಜೀವಾವಾಸವೇ ಇಲ್ಲದಂತಹ ಬರಡು ಸ್ಥಿತಿ. ಗ್ರಾಮೀಣ ಪ್ರದೇಶಗಳ ಜೀವಿ ವೈವಿಧ್ಯದ ಮೇಲೂ ಪರಿಣಾಮ ಬೀರುತ್ತಿದ್ದರಿಂದ ಇಂಥ ಕ್ರಮ ಅನಿವಾರ್ಯವೇ ಆಗಿತ್ತು.ನೀಲಗಿರಿ ಬದಲಿಗೆ ಹಿಪ್ಪೆ, ಬೇವು, ಹೊಂಗೆ, ಸೀಮಾರೂಬಾದಂಥ ಖಾದ್ಯೇತರ ಎಣ್ಣೆಬೀಜಗಳ ಬೆಳೆಯನ್ನೂ ಇಲಾಖೆ ಪ್ರೋತ್ಸಾಹಿಸಬೇಕು. ಇವು ಬದಲೀ ಜೈವಿಕ ಇಂಧನ ಕೊಡುತ್ತವೆ. ನಂತರ ಉಳಿಯುವ ಹಿಂಡಿಯೂ ರೈತರಿಗೆ ವರದಾನವೇ ಆಗುತ್ತದೆ. ಅರಣ್ಯ ಇಲಾಖೆ ಸಸ್ಯಕ್ಷೇತ್ರಗಳಲ್ಲಿ ಇವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ರೈತರಲ್ಲಿ ಜನಪ್ರಿಯಗೊಳಿಸುವ ಕೆಲಸವನ್ನು ಪರ್ಯಾಯವಾಗಿ ಕೈಗೆತ್ತಿಕೊಳ್ಳಬಹುದು.ಮಲೆನಾಡು ಮತ್ತು ಅರೆಮಲೆನಾಡಿನ ಪ್ರದೇಶಗಳಲ್ಲಿ ನೀಲಗಿರಿ, ಅಕೇಷಿಯಾಗಳಂಥ ಸಸ್ಯಗಳು ಜೈವಿಕ ಪರಿಸ್ಥಿತಿಯಲ್ಲಿ ಮಾಡಿರುವ ಅಪಾಯಗಳನ್ನು ಸರ್ಕಾರ ತಡವಾಗಿಯಾದರೂ ಅರ್ಥ ಮಾಡಿಕೊಂಡು ಅವುಗಳ ಕೃಷಿಯನ್ನು ಮಲೆನಾಡಿನ ರೈತರಿಗೆ ನಿಷೇಧಿಸಿದೆ. ನೀಲಗಿರಿಯನ್ನು ಅವಲಂಬಿಸಿದ ಕೈಗಾರಿಕೆಗಳಿಗೆ ಸರ್ಕಾರದ ಜಾಗದಲ್ಲಿ ನೀಲಗಿರಿ ಬೆಳೆಗೆ ಅವಕಾಶ ಇದ್ದೇ ಇದೆ.

 

ಜನರ ನಿತ್ಯದ ಉರುವಲು ಬೇಡಿಕೆ, ಮನೆ ಕಟ್ಟಲು ಬೇಕಾದ ನಾಟಾ, ಸಾವಯವ ಕೃಷಿಗೆ ಅವಶ್ಯಕವಾದ ಸೊಪ್ಪು ಮೊದಲಾದವುಗಳನ್ನು ಒದಗಿಸುವಂಥ ಬಹೂಪಯೋಗಿ ಸಸ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಅರಣ್ಯ ಇಲಾಖೆ ಇನ್ನಾದರೂ  ಮನಗಾಣಬೇಕು. ನೈಸರ್ಗಿಕ ಅರಣ್ಯವೆಂದರೆ ಬಗೆಬಗೆಯ ಸಸ್ಯ ಸಂಕುಲಗಳ ವೈವಿಧ್ಯ. ಹೂವು, ಕಾಯಿ, ಹಣ್ಣು, ಬೀಜಗಳನ್ನು ಹೊತ್ತು ನಿಸರ್ಗವನ್ನು ಫಲವತ್ತಾಗಿಸುವ ಸಸ್ಯಗಳನ್ನು ಬೆಳೆಸುವುದರತ್ತ ಗಮನ ಹರಿಸುವುದು ಈಗಿನ ಅವಶ್ಯಕತೆ. ಸಾಂಪ್ರದಾಯಿಕ ಸಸ್ಯ ತಳಿಗಳಲ್ಲಿ ಶೀಘ್ರವಾಗಿ ಬೆಳೆಯುವ ಅಂಗಾಂಶಗಳನ್ನು ಒದಗಿಸುವಂಥ ಪ್ರಯೋಗಗಳತ್ತ ಗಮನ ಹರಿಸಬೇಕು.ಜನರನ್ನು ದೂರ ಇಟ್ಟು ಆರಂಭಿಸುವ ಅರಣ್ಯ ಅಭಿವೃದ್ಧಿಯ ಯಾವುದೇ ಯೋಜನೆಗಳು ಸಂಬಂಧಪಟ್ಟವರ ಅಭಿವೃದ್ಧಿಯಲ್ಲಿಯೇ ಯಶಸ್ವಿಯಾಗಿರುವುದು ಇದುವರೆಗಿನ ಅನುಭವ. ಈ ಹಿನ್ನೆಲೆಯಲ್ಲಿ  ಸ್ಥಳೀಯ ಜನರನ್ನು ಸೇರಿಸಿಕೊಂಡು ಅರಣ್ಯದ ಕಿರು ಉತ್ಪನ್ನಗಳನ್ನು ಹಂಚಿಕೊಳ್ಳುವ ಪಾಲುದಾರಿಕೆಯಲ್ಲಿ ಯೋಜನೆಗಳನ್ನು ಆರಂಭಿಸುವುದು ವಿವೇಕದ ಮಾರ್ಗ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry